ನವದೆಹಲಿ: ಜೆಡಿಎಸ್ ಯುವ ಘಟಕದ ಅಧ್ಯಕ್ಷರಾಗಿ ನಿಖಿಲ್ ನೇಮಕವಾಗಿದ್ದಕ್ಕೆ ಸಂಸದ ಪ್ರಜ್ವಲ್ ರೇವಣ್ಣ ಅಭಿನಂದನೆ ಸಲ್ಲಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಿಢೀರ್ ಬೆಳವಣಿಗೆಯಲ್ಲಿ ನಿಖಿಲ್ ನನ್ನು ಯುವ ಘಟಕದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಇಂದು ಬೆಳಗ್ಗೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಶರಣಗೌಡ ಕಂದಕೂರ್ ನೇಮಕಕ್ಕೆ ಪಕ್ಷ ತೀರ್ಮಾನಿಸಿತ್ತು. ಶರಣಗೌಡ ಕಂದಕೂರ್ ಅಧ್ಯಕ್ಷರಾಗಲು ನಿರಾಕರಿಸಿದ್ದಾರೆ. ಅಲ್ಲದೆ ನಿಖಿಲ್ ಗೆ ಜವಾಬ್ದಾರಿ ನೀಡುವಂತೆ ಶರಣಗೌಡ ಮನವಿ ಮಾಡಿದರು ಎಂದು ಹೇಳಿದರು.
Advertisement
Advertisement
ಪಕ್ಷದಲ್ಲಿ ಹಲವರು ನಿಖಿಲ್‍ಗೆ ಜವಾಬ್ದಾರಿ ವಹಿಸಿವಂತೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಪಕ್ಷ ದಿಢೀರ್ ನಿರ್ಧಾರ ತೆಗೆದುಕೊಂಡಿದೆ. ಹೆಚ್.ಕೆ ಕುಮಾರಸ್ವಾಮಿ, ಮಧು ಬಂಗಾರಪ್ಪ ನೇಮಕದ ಬಗ್ಗೆ ಮಾಹಿತಿ ಇತ್ತು. ಆದರೆ ನಿಖಲ್ ನೇಮಕ ಬಗ್ಗೆ ಮಾಹಿತಿ ಇರಲಿಲ್ಲ ಎಂದರು.
Advertisement
ನಾನು ಸಂಸತ್ ನಲ್ಲಿ ಇದ್ದಿದ್ದರಿಂದ ನಂಗೆ ಏನೂ ಮಾಹಿತಿ ಇರಲಿಲ್ಲ. ನನಗೆ ಬೇಸರ, ಅಸಮಾಧಾನ ಯಾವುದೂ ಇಲ್ಲ. ಪಕ್ಷ ವಹಿಸಿದ ಜವಾಬ್ದಾರಿಯನ್ನು ನಾನು ನಿಭಾಯಿಸುತ್ತೇನೆ. ನಿಖಿಲ್ ಜೊತೆಗೆ ನಾನು ಕೈ ಜೋಡಿಸಿ ಕೆಲಸ ಮಾಡ್ತೇನೆ ಎಂದು ತಿಳಿಸಿದರು.
Advertisement
ಇತ್ತ ಯುವ ಘಟಕದ ಅಧ್ಯಕ್ಷರಾದ ಬಳಿಕ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನಿಖಿಲ್, ಪಕ್ಷದ ಮುಖಂಡರು ಚಿಕ್ಕ ವಯಸ್ಸಿನಲ್ಲಿ ನನಗೆ ದೊಡ್ಡ ಜವಾಬ್ದಾರಿ ನೀಡಿದ್ದಾರೆ. ಅದನ್ನು ನಾನು ಸಮರ್ಥವಾಗಿ ನಿರ್ವಹಿಸುತ್ತೇನೆ. ದೇವೇಗೌಡ ಅವರು ಇಳಿವಯಸ್ಸಿನಲ್ಲಿಯೂ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿದ್ದಾರೆ. ನಾನು ಪಕ್ಷ ಕಟ್ಟಲು ಎಚ್.ಡಿ.ದೇವೇಗೌಡ ಅವರೇ ಸ್ಫೂರ್ತಿ. ಮಂಡ್ಯ ಬಿಟ್ಟು ನಾನು ಎಲ್ಲೂ ಹೋಗುವುದಿಲ್ಲ. ಲೋಕಸಭಾ ಚುನಾವಣೆಯಲ್ಲಿ 5 ಲಕ್ಷಕ್ಕೂ ಹೆಚ್ಚು ಮತದಾರರು ನನ್ನ ಪರವಾಗಿ ಮತ ಹಾಕಿದ್ದಾರೆ. ನನ್ನ ವಿರುದ್ಧ ಮತ ಹಾಕಿರುವ ಜನರ ಮನಸ್ಸು ಗೆಲ್ಲುವ ಕೆಲಸ ಮಾಡುತ್ತೇನೆ ಎಂದರು.
ಕುಟುಂಬ ರಾಜಕಾರಣದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ನಿಖಿಲ್ ಅವರು, ಕುಟುಂಬ ರಾಜಕಾರಣ ಎಲ್ಲಿ ಇಲ್ಲ ಹೇಳಿ? ಎಲ್ಲಾ ಕಡೆ ಕುಟುಂಬ ರಾಜಕಾರಣವಿದೆ. ಉತ್ತಮ ವಿಚಾರ ಇಟ್ಟುಕೊಂಡು, ಜನರ ಪರವಾಗಿ ಕೆಲಸ ಮಾಡುವ ವ್ಯಕ್ತಿ ಯಾರೇ ಇರಬಹುದು ಅವರಿಗೆ ಅವಕಾಶ ಕೊಡಬೇಕು. ಇದನ್ನು ನಾನು ಸ್ವಾಗತ ಮಾಡುತ್ತೇನೆ ಉಳಿದವರು ಸ್ವಾಗತ ಮಾಡಬೇಕು ಎಂದು ಹೇಳಿದರು.