Connect with us

ಆಪ್‍ನ 20 ಶಾಸಕರ ಅನರ್ಹತೆಗೆ ಶಿಫಾರಸು – ಕೇಜ್ರಿವಾಲ್ ಗೆ ಭಾರೀ ಮುಖಭಂಗ

ಆಪ್‍ನ 20 ಶಾಸಕರ ಅನರ್ಹತೆಗೆ ಶಿಫಾರಸು – ಕೇಜ್ರಿವಾಲ್ ಗೆ ಭಾರೀ ಮುಖಭಂಗ

ನವದೆಹಲಿ: ದೆಹಲಿ ಆಡಳಿರೂಢ ಆಪ್ ಪಕ್ಷದ 20 ಶಾಸಕರು ಲಾಭದಾಯಕ ಹುದ್ದೆ ಹೊಂದಿರುವ ಆರೋಪಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗ ಶಾಸಕರನನ್ನು ಅನರ್ಹಗೊಳಿಸಲು ರಾಷ್ಟ್ರಪತಿಗಳಿಗೆ ಶಿಫಾರಸ್ಸು ಮಾಡಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಈ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾದ ಕೂಡಲೇ ಇಂದು ಮಧ್ಯಾಹ್ನ ಆಪ್ ದೆಹಲಿ ಹೈಕೋಟ್ ಮೊರೆ ಹೋಗಿ ಆಯೋಗದ ಶಿಫಾರಸಿಗೆ ತಡೆ ನೀಡುವಂತೆ ಮನವಿ ಸಲ್ಲಿಸಿತು. ಆಪ್ ತುರ್ತು ಅರ್ಜಿಯನ್ನು ಕೈಗೆತ್ತಿಕೊಂಡ ಪೀಠ, ಚುನಾವಣಾ ಆಯೋಗ ನಿರ್ಧಾರದಲ್ಲಿ ನಾನು ಮಧ್ಯಪ್ರವೇಶಿಸುವುದಿಲ್ಲ ಎಂದು ಹೇಳಿ, ತಡೆ ನೀಡಲು ನಿರಾಕರಿಸಿ ಅರ್ಜಿ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿತು.

ರಾಷ್ಟ್ರಪತಿಗಳು ಚುನಾವಣಾ ಆಯೋಗ ಸಲ್ಲಿಸಿರುವ ಶಾಸಕರ ಪಟ್ಟಿಯನ್ನು ಅನರ್ಹಗೊಳಿಸಲು ಸಮ್ಮತಿ ಸೂಚಿಸಿದರೆ ದೆಹಲಿಯ 20 ವಿಧಾನಸಭಾ ಕ್ಷೇತ್ರಗಳಿಗೂ ಚುನಾವಣೆ ನಡೆಯಲಿದೆ. ಪ್ರಸ್ತುತ 70 ಸ್ಥಾನಗಳನ್ನು ಹೊಂದಿರುವ ದೆಹಲಿ ವಿಧಾನಸಭೆಯಲ್ಲಿ ಆಪ್ ಪಕ್ಷ 66 ಸ್ಥಾನಗಳನ್ನು ಹೊಂದಿದೆ. ರಾಷ್ಟ್ರಪತಿಗಳು ಚುನಾವಣಾ ಆಯೋಗ ಶಿಫಾರಸ್ಸಿಗೆ ಒಪ್ಪಿಗೆ ಸೂಚಿಸಿದರೆ. ಆಪ್ ಸ್ಥಾನಗಳ ಸಂಖ್ಯೆ 46ಕ್ಕೆ ಇಳಿಕೆಯಾಗಲಿದೆ. ಶಾಸಕರ ಸಂಖ್ಯೆ ಕಡಿಮೆಯಾದರೂ ಕೇಜ್ರಿವಾಲ್ ಆಡಳಿತದಲ್ಲಿ ಮುಂದುವರಿಯಲಿದ್ದಾರೆ. 35ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಶಾಸಕರು ಇರುವ ಕಾರಣ ಸರ್ಕಾರಕ್ಕೆ ಯಾವುದೇ ಸಮಸ್ಯೆಯಿಲ್ಲ.

ಈ ಕುರಿತು ಆಪ್ ಶಾಸಕ ಸೌರಭ್ ಭಾರದ್ವಾಜ್ ಪ್ರತಿಕ್ರಿಯಿಸಿ, ಇದು ಚುನಾವಣಾ ಆಯೋಗ ಅಲ್ಲ, ಮೋದಿಯ ಚುನಾವಣಾ ಆಯೋಗ. ನಮ್ಮ ಮೇಲಿನ ಆರೋಪದ ಕುರಿತ ಮಾಹಿತಿಯನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಲಾಗಿದೆ. ಆದರೆ ಇದುವರೆಗೂ ಚುನಾವಣಾ ಆಯೋಗ ಈ ಕುರಿತು ವಿಚಾರಣೆಯನ್ನು ನಡೆಸಿಲ್ಲ. ನ್ಯಾಯಾಂಗದ ಪ್ರಕಾರ ನಮ್ಮ ಮೇಲೆ ಬಂದಿರುವ ಆರೋಪಕ್ಕೆ ವಿವರಣೆ ನೀಡಲು ಚುನಾವಣಾ ಆಯೋಗ ಅವಕಾಶ ನೀಡಬೇಕು. ವಿವರಣೆ ನೀಡದೇ ಕ್ರಮ ಕೈಗೊಳ್ಳಲು ಮುಂದಾಗಿರುವುದು ಎಷ್ಟು ಸರಿ ಎಂದು ಅವರು ಪ್ರಶ್ನಿಸಿದರು.

ಪ್ರಸ್ತುತ ಚುನಾವಣಾ ಆಯೋಗದ ನಿರ್ಧಾರವನ್ನು ಬಿಜೆಪಿ, ಕಾಂಗ್ರೆಸ್ ಸ್ವಾಗತಿಸಿದ್ದು ಕೇಜ್ರಿವಾಲ್ ನೈತಿಕ ಹೊಣೆಯನ್ನು ಹೊತ್ತು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿವೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಬಿಜೆಪಿ ಮುಖಂಡ ವಿಜಯ್ ಜಾಲಿ ಅವರು, ಸಂವಿಧಾನದ ನಿಯಮಗಳನ್ನು ಉಲ್ಲಂಘಿಸಿ ಶಾಸಕರನ್ನು ನೇಮಕ ಮಾಡಿದ್ದ ಆಪ್ ಪಕ್ಷಕ್ಕೆ ಚುನಾವಣಾ ಆಯೋಗದ ನಿರ್ಧಾರ ಕಣ್ ತೆರೆಸುವ ಕ್ರಮವಾಗಿದೆ. ರಾಷ್ಟ್ರ ರಾಜಧಾನಿ ದೆಹಲಿ ಜನತೆಗೆ ಭ್ರಷ್ಟಾಚಾರದ ವಿರುದ್ಧ ನ್ಯಾಯ ಸಿಕ್ಕಿದೆ ಎಂದು ಹೇಳಿದ್ದಾರೆ.

ಏನಿದು ಪ್ರಕರಣ?
2016ರ ನಂತರ ಕೇಜ್ರಿವಾಲ್ ಮುಂದಾಳತ್ವದ ಆಪ್ ಪಕ್ಷ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯಗಳಿಸಿತ್ತು. ಸಿಎಂ ಆಗಿ ಅಧಿಕಾರ ವಹಿಸಿಕೊಂಡ ಕೇಜ್ರಿವಾಲ್ 21 ಶಾಸಕರನ್ನು ವಿಧಾನಸಭಾ ಕಾರ್ಯದರ್ಶಿಗಳಾಗಿ ನೇಮಕ ಮಾಡಿದ್ದರು. ಈ ಕುರಿತು ಪ್ರಶಾಂತ್ ಪಟೇಲ್ ಎಂಬವರು ರಾಷ್ಟ್ರಪತಿಗಳಿಗೆ ದೂರು ಸಲ್ಲಿಸಿದ್ದರು. ಈ ದೂರನ್ನು ರಾಷ್ಟ್ರಪತಿಗಳು ಚುನಾವಣಾ ಆಯೋಗಕ್ಕೆ ವರ್ಗಾವಣೆ ಮಾಡಿದ್ದರು.

2016ರಲ್ಲಿ ಆಪ್ ವಿರುದ್ಧ ಕಾಂಗ್ರೆಸ್ ಪಕ್ಷ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಕೆ ಮಾಡಿತ್ತು. ಆಪ್ 21 ಶಾಸಕರು ಲಾಭದಾಯಕ ಹುದ್ದೆ ಹೊಂದಿದ್ದು, ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿತ್ತು. ಈ ಬಗ್ಗೆ ದೂರು ಸ್ವೀಕರಿಸಿದ್ದ ಆಯೋಗ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಪ್ ಪಕ್ಷದಿಂದ ಸ್ಪಷ್ಟನೆ ಕೇಳಿತ್ತು. ಆದರೆ ತಮ್ಮ ವಿರುದ್ಧ ಪ್ರಕರಣವನ್ನು ಕೈ ಬಿಡುವಂತೆ ಆಪ್ ನ ಶಾಸಕರು ಆಯೋಗಕ್ಕೆ ಮನವಿ ಮಾಡಿದ್ದರಾದರೂ, ಆಯೋಗ ಅವರ ಅರ್ಜಿಯನ್ನು ತಿರಸ್ಕರಿಸಿತ್ತು.

 

Advertisement
Advertisement