ಅಬಕಾರಿ ಸುಂಕ 2 ರೂ. ಇಳಿಕೆಯಾದ್ರೂ ಪೆಟ್ರೋಲ್, ಡೀಸೆಲ್ ಬೆಲೆ ಇಳಿಯಲ್ಲ!

Public TV
3 Min Read
GST PETROL

ನವದೆಹಲಿ: ಪೆಟ್ರೋಲ್ ಡೀಸೆಲ್ ಮೇಲೆ 2 ರೂ. ಅಬಕಾರಿ ಸುಂಕವನ್ನು ಕಡಿಮೆ ಮಾಡಿ ಹಣಕಾಸು ಸಚಿವ ಅರುಣ್ ಜೇಟ್ಲಿ ರಸ್ತೆ ಮತ್ತು ಮೂಲಸೌಕರ್ಯ ಹೆಸರಿನಲ್ಲಿ 8 ರೂ. ಹೊಸ ಸೆಸ್ ಹಾಕಿ ದರವನ್ನು ಯಥಾಸ್ಥಿತಿಯಲ್ಲಿ ಇರುವಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಹೊಸ ಸೆಸ್ ಜಾರಿ ಮಾಡುವುದರ ಜೊತೆಗೆ ಇಲ್ಲಿಯವರೆಗೆ ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಮೆಲೆ ವಿಧಿಸಲಾಗುತ್ತಿದ್ದ 6 ರೂ. ರಸ್ತೆ ಸೆಸ್ ರದ್ದುಗೊಳಿಸಲು ಮುಂದಾಗಿರುವ ವಿಚಾರ ಬಜೆಟ್ ನಲ್ಲಿದೆ.

ಯಾಥಾಸ್ಥಿತಿ ಹೇಗೆ?
ಅಬಕಾರಿ ಸುಂಕ 2 ರೂ. ಮತ್ತು ರೋಡ್ ಸೆಸ್ 6 ರೂ. ಇಳಿಕೆಯಾದರೆ ಗ್ರಾಹಕರಿಗೆ 8 ರೂ. ಕಡಿಮೆ ಆಗುತಿತ್ತು. ಆದರೆ ಈಗ ರಸ್ತೆ ಮತ್ತು ಮೂಲಸೌಕರ್ಯ ಹೆಸರಿನಲ್ಲಿ ಹೊಸ ಸೆಸ್ ಜಾರಿಗೆ ತರುವ ಪ್ರಸ್ತಾಪವನ್ನು ಸರ್ಕಾರ ಕೈಗೊಂಡಿದ್ದು ಅದಕ್ಕೆ 8 ರೂ. ವಿಧಿಸಿದೆ. ಹೀಗಾಗಿ 8 ರೂ. ಕಡಿಮೆಯಾದರೂ ಹೆಚ್ಚುವರಿ ಸೆಸ್ ಮೂಲಕ ಗ್ರಾಹಕನ ಜೇಬಿನಿಂದ 8 ರೂ. ಹಣ ಸರ್ಕಾರದ ಖಾತೆಗೆ ಹೋಗುತ್ತದೆ. ಹೀಗಾಗಿ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಯಾವುದೇ ಇಳಿಕೆ, ಏರಿಕೆ ಆಗದಂತೆ ನೋಡಿಕೊಂಡು ಬಜೆಟ್ ಸಿದ್ಧಪಡಿಸಲಾಗಿದೆ.

petrol pump 2

ಇಷ್ಟೇ ಅಲ್ಲದೇ ಈಶಾನ್ಯ ರಾಜ್ಯದ 4 ರಿಫೈನರಿಗಳಿಂದ ಉತ್ಪಾದನೆಯಾದ ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚುವರಿಯಾಗಿ 4 ರೂ. ಮೂಲಸೌಕರ್ಯ ಸೆಸ್ ವಿಧಿಸುವ ಪ್ರಸ್ತಾಪ ಬಜೆಟ್ ನಲ್ಲಿದೆ. ಇದನ್ನೂ ಓದಿ: ಜಿಎಸ್‍ಟಿ ಅಡಿ ಪೆಟ್ರೋಲ್ ಬಂದ್ರೆ ಬೆಂಗ್ಳೂರಿನಲ್ಲಿ ಪ್ರತಿ ಲೀಟರ್‍ಗೆ 40 ರೂ.ಅಷ್ಟೇ!

ಯಾವುದಕ್ಕೆ ಎಷ್ಟು?
ಬ್ರಾಂಡ್ ರಹಿತ ಪೆಟ್ರೋಲ್ ಪ್ರತಿ ಲೀಟರ್ ಗೆ ಹಿಂದೆ 6.48 ರೂ. ಅಬಕಾರಿ ಸುಂಕ ಇದ್ದರೆ, ಈಗ ಇದನ್ನು 4.48 ರೂ. ಇಳಿಸಲಾಗಿದೆ. ಬ್ರಾಂಡೆಡ್ ಪೆಟ್ರೋಲ್ ಹಿಂದೆ 7.66 ರೂ. ಅಬಕಾರಿ ಸುಂಕ ಇದ್ದರೆ, ಈಗ 5.66 ರೂ. ಆಗಿದೆ.

ಬ್ರಾಂಡ್ ರಹಿತ ಡೀಸೆಲ್ ಪ್ರತಿ ಲೀಟರ್ ಗೆ ಹಿಂದೆ 8.33 ರೂ. ಅಬಕಾರಿ ಸುಂಕ ಇದ್ದರೆ ಈಗ 6.33 ರೂ.ಗೆ ಇಳಿಕೆಯಾಗಿದೆ. ಬ್ರಾಂಡೆಡ್ ಡೀಸೆಲ್ ಗೆ 10.69 ರೂ. ಇದ್ದ ಅಬಕಾರಿ ಸುಂಕ ಈಗ 8.69 ರೂ.ಗೆ ಇಳಿಕೆಯಾಗಿದೆ.

petrol

ಎನ್‍ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಪ್ರತಿನಿತ್ಯ ತೈಲ ಬೆಲೆಯನ್ನು ಪರಿಷ್ಕರಣೆ ಪದ್ದತಿಯನ್ನು ಜಾರಿಗೆ ತಂದಿತ್ತು. ಜನವರಿ ತಿಂಗಳಿನಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾ ತೈಲದ ಬೆಲೆ ಭಾರೀ ಏರಿಕೆಯಾದ ಹಿನ್ನೆಲೆಯಲ್ಲಿ ಭಾರತದಲ್ಲೂ ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗಿತ್ತು. ಹೀಗಾಗಿ ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಇಳಿಕೆ ಮಾಡಬೇಕೆಂಬ ಆಗ್ರಹ ಕೇಳಿ ಬಂದಿತ್ತು.  ಇದನ್ನೂ ಓದಿ: 70 ರೂ. ಪೆಟ್ರೋಲ್ ನಲ್ಲಿ ಯಾರಿಗೆ ಎಷ್ಟು ಪಾಲು? ಬೇರೆ ರಾಷ್ಟ್ರಗಳಲ್ಲಿ ಎಷ್ಟು ದರವಿದೆ?

2017ರ ಅಕ್ಟೋಬರ್ 3ರಂದು ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು 2 ರೂ. ಕಡಿತಗೊಳಿಸಿತ್ತು. ಬೆಲೆ ಏರಿಕೆಯಂದ ಜನಸಾಮಾನ್ಯರ ಮೇಲೆ ಆಗುತ್ತಿರುವ ಹೊರೆಯನ್ನು ತಪ್ಪಿಸಲು ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಅಬಕಾರಿ ಮತ್ತು ಸೀಮಾ ಸುಂಕ ಮಡಳಿ ತನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿತ್ತು.

2014ರಿಂದ 2016ರ ಅವಧಿಯಲ್ಲಿ ಕೇಂದ್ರ ಸರ್ಕಾರ 9 ಬಾರಿ ಅಬಕಾರಿ ಸುಂಕವನ್ನು ಹೆಚ್ಚಿಸಿತ್ತು. ಈ ಅವಧಿಯಲ್ಲಿ ಪೆಟ್ರೋಲ್ ಮೇಲೆ 11.77 ರೂ., ಡೀಸೆಲ್ ಮೇಲೆ 13.47 ರೂ. ನಂತೆ ಅಬಕಾರಿ ಸುಂಕವನ್ನು ಹೆಚ್ಚಿಸಿತ್ತು. ಇದರಿಂದಾಗಿ 2014-15 ರಲ್ಲಿ ಬೊಕ್ಕಸಕ್ಕೆ 99 ಕೋಟಿ ರೂ.ಬಂದಿದ್ದರೆ, 2016-17 ನೇ ಅವಧಿಯಲ್ಲಿ 2.42 ಲಕ್ಷ ಕೋಟಿ ರೂ. ಆದಾಯ ಬಂದಿತ್ತು. ಇದನ್ನೂ ಓದಿ: ಜಿಎಸ್‍ಟಿ ಅಡಿ ಪೆಟ್ರೋಲ್ ಬಂದ್ರೆ ಬೆಂಗ್ಳೂರಿನಲ್ಲಿ ಪ್ರತಿ ಲೀಟರ್ 40 ರೂ.ಅಷ್ಟೇ!

petrol pump india AFP

Share This Article
Leave a Comment

Leave a Reply

Your email address will not be published. Required fields are marked *