ಬೆಂಗಳೂರು: ಏಳನೇ ತರಗತಿಗೆ ಪಬ್ಲಿಕ್ ಪರೀಕ್ಷೆ ಮಾಡುವ ನಿರ್ಧಾರದಿಂದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹಿಂದೆ ಸರಿದ್ದಾರೆ.
ನಗರದ ಶಿಕ್ಷಕರ ಸದನದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪಬ್ಲಿಕ್ ಪರೀಕ್ಷೆ ಬದಲಾಗಿ ಸಾಮಾನ್ಯ ಮೌಲ್ಯಮಾಪನ ಪರೀಕ್ಷೆ ಮಾಡುವುದಕ್ಕೆ ಶಿಕ್ಷಣ ಇಲಾಖೆ ನಿರ್ಧಾರ ಮಾಡಿದೆ. ಪಬ್ಲಿಕ್ ಪರೀಕ್ಷೆ ಅಂತ ಹೆಸರು ಕೇಳಿ ಎಲ್ಲರೂ ಭಯಗೊಂಡಿದ್ದಾರೆ. ಮಕ್ಕಳಿಗೂ ಆತಂಕ ಸೃಷ್ಟಿಯಾಗಿತ್ತು. ಹೀಗಾಗಿ ಪಬ್ಲಿಕ್ ಪರೀಕ್ಷೆ ಬದಲಾಗಿ ಸಾಮಾನ್ಯ ಮೌಲ್ಯಮಾಪನ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ತೀರ್ಮಾನ ಮಾಡಿದೆ ಎಂದು ತಿಳಿಸಿದ್ದಾರೆ.
ಈ ಸಾಮಾನ್ಯ ಮೌಲ್ಯಮಾಪನ ಪರೀಕ್ಷೆಯಲ್ಲಿ ಯಾವುದೇ ಮಗುವನ್ನು ಫೈಲ್, ಪಾಸ್ ಮಾಡಲ್ಲ. ಪರೀಕ್ಷೆ ನಡೆಸಿ ವಿದ್ಯಾರ್ಥಿಯ ಕಲಿಕೆ ಬಗ್ಗೆ ತಿಳಿದು 8ನೇ ತರಗತಿಯಿಂದ ಅಗತ್ಯ ತರಬೇತಿ ಕೊಡುವುದು ಈ ಪರೀಕ್ಷೆ ಉದ್ದೇಶವಾಗಿದೆ ಎಂದರು.
ಈ ಸಾಮಾನ್ಯ ಮೌಲ್ಯಮಾಪನ ಪರೀಕ್ಷೆಗೆ ರಾಜ್ಯಮಟ್ಟದಲ್ಲಿ ಪ್ರಶ್ನೆ ಪತ್ರಿಕೆ ತಯಾರು ಮಾಡಲಾಗುತ್ತದೆ. ಪರೀಕ್ಷೆಯನ್ನು ಅದೇ ಶಾಲಾ ಶಿಕ್ಷಕರೇ ನಡೆಸುತ್ತಾರೆ. ಮೌಲ್ಯಮಾಪನವನ್ನ ಜಿಲ್ಲಾವಾರು ಶಿಕ್ಷಕರು ಮಾಡುತ್ತಾರೆ. ಯಾವುದೇ ಮಗುವನ್ನು ಫೈಲ್ ಮಾಡಲ್ಲ. ಪರೀಕ್ಷೆ ಫಲಿತಾಂಶ ವಿದ್ಯಾರ್ಥಿವಾರು ಮೌಲ್ಯಮಾಪನ ಮಾಡಲಾಗುತ್ತದೆ. ಮೌಲ್ಯಮಾಪನ ಮಾಡಿ ಮಗು ವೀಕ್ ಇರೋ ವಿಷಯದಲ್ಲಿ 8ನೇ ತರಗತಿಯಿಂದ ಮಗುವಿಗೆ ಅಗತ್ಯ ತರಬೇತಿ ನೀಡಲು ಅಗತ್ಯ ಕ್ರಮ ತೆಗೆದುಕೊಳ್ಳಲಾಗುತ್ತದೆ. ಮಕ್ಕಳ ಆತ್ಮವಿಶ್ವಾಸದಲ್ಲಿ ಪರೀಕ್ಷೆ ಎದುರಿಸಲು ತಯಾರು ಮಾಡೋದು ಈ ಪರೀಕ್ಷೆಯ ಉದ್ದೇಶವಾಗಿದೆ ಎಂದು ಹೇಳಿದ್ದಾರೆ.