DharwadDistrictsKarnatakaLatestMain Post

ಸಿಎಂ ಬದಲಾವಣೆ ಕೇವಲ ಊಹಾಪೋಹ: ನಳಿನ್‍ ಕುಮಾರ್ ಕಟೀಲ್

ಹುಬ್ಬಳ್ಳಿ: ಮುಖ್ಯಮಂತ್ರಿ ಬದಲಾವಣೆ ಊಹಾಪೋಹವಷ್ಟೇ. ಮುಂದಿನ ಚುನಾವಣೆವರೆಗೆ ಬಸವರಾಜ ಬೊಮ್ಮಾಯಿ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದ ಮರುದಿನವೇ ಬದಲಾವಣೆ ಆಗುತ್ತದೆ ಎಂಬ ಊಹಾಪೋಹ ಹಬ್ಬಿಸಲಾಗಿತ್ತು. ಎರಡೂವರೆ ವರ್ಷ ಪೂರ್ತಿಗೊಳಿಸಿದ ಬಳಿಕ ಅವರು ನಿಯಮದ ಅನುಸಾರ ರಾಜೀನಾಮೆ ಕೊಟ್ಟ ಬಳಿಕ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಸಂಸದ ನಳಿನ್‍ಕುಮಾರ್ ಕಟೀಲ್ ತಿಳಿಸಿದರು.

ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರ ನೀಡಿದ ಅವರು, ನೀವು ಕುಳಿತಲ್ಲೇ ಯಾವುದೇ ಕಲ್ಪನೆ ಮಾಡಬಹುದು. ಅವನವನ ಭಾವಕ್ಕೆ ಅವನವನ ಭಕ್ತಿಗೆ ಎಂದರು. ಎರಡು ಪ್ರಮುಖ ನಿರ್ಣಯಗಳನ್ನು ಅಂಗೀಕರಿಸಲಾಗುವುದು. ವಿವರವನ್ನು ಬಳಿಕ ನೀಡಲಾಗುವುದು ಎಂದು ತಿಳಿಸಿದರು.

BASAVARAJ BOMMAI_ NALIN KUMAR KATEEL

ಜೆ.ಪಿ. ನಡ್ಡಾ ಬರಲ್ಲ!: ಕೋವಿಡ್ ನಿಯಮಾವಳಿಯಂತೆ ಕೆಲವು ಬದಲಾವಣೆ ಮಾಡಿಕೊಂಡಿದ್ದು, ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ ಅವರ ಪ್ರವಾಸ ರದ್ದಾಗಿದೆ ಎಂದು ಅವರು ಪ್ರಶ್ನೆಗೆ ಉತ್ತರಿಸಿದರು. ರಾಷ್ಟ್ರೀಯ ಅಧ್ಯಕ್ಷರ ದೊಡ್ಡ ಪ್ರಮಾಣದ ಸ್ವಾಗತ, ಶಕ್ತಿ ಕೇಂದ್ರದ ಪ್ರಮುಖರ ಸಭೆ ಆಯೋಜಿಸಲಾಗಿತ್ತು. ಅದನ್ನು ಮುಂದಿನ ತಿಂಗಳು ಆಯೋಜಿಸಲು ಚಿಂತಿಸಲಾಗಿದೆ ಎಂದರು.

ರಾಜ್ಯ ಕಾರ್ಯಕಾರಿಣಿಯನ್ನು ಕಳೆದೆರಡು ವರ್ಷಗಳಲ್ಲಿ ಪ್ರತಿ ಜಿಲ್ಲೆಗೆ ವಿಸ್ತರಿಸಲಾಗಿದೆ. ಬೆಂಗಳೂರು ಕೇಂದ್ರೀಕೃತ ಆಗಬಾರದೆಂಬ ದೃಷ್ಟಿಯಿಂದ ಈ ಕ್ರಮ ಕೈಗೊಂಡಿದ್ದೇವೆ. ನಾಳೆ 700 ಜನರು ಬರಬೇಕಿತ್ತು. ಕೋವಿಡ್ ಮಾರ್ಗಸೂಚಿಯಂತೆ 300ಕ್ಕಿಂತ ಕಡಿಮೆ ಜನರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಪಕ್ಷದ ರಾಜ್ಯ ಕಾರ್ಯಕಾರಿಣಿ ನಾಳೆ ಮಧ್ಯಾಹ್ನದಿಂದ ನಾಡಿದ್ದು ಮಧ್ಯಾಹ್ನದವರೆಗೆ ನಡೆಯಲಿದೆ. ಹುಬ್ಬಳ್ಳಿ ನಗರದವರು ಇದಕ್ಕಾಗಿ ಪೂರ್ಣ ತಯಾರಿ ಮಾಡಿಕೊಂಡಿದ್ದಾರೆ. ಜಗದೀಶ ಶೆಟ್ಟರ್, ಪ್ರಹ್ಲಾದ್ ಜೋಷಿ ಅವರ ಮಾರ್ಗದರ್ಶನದಲ್ಲಿ ಮತ್ತು ಮಹೇಶ್ ಟೆಂಗಿನಕಾಯಿ ಅವರ ನೇತೃತ್ವದಲ್ಲಿ ಅದ್ಭುತವಾಗಿ ತಯಾರಿ ನಡೆದಿದೆ ಎಂದರು.

ಮಾಜಿ ಮುಖ್ಯಮಂತ್ರಿಗಳಾದ ಜಗದೀಶ ಶೆಟ್ಟರ್ ಅವರು ಮಾತನಾಡಿ, ಕಾರ್ಯಕಾರಿಣಿಯಲ್ಲಿ ಕೋವಿಡ್ ನಿಯಮದಂತೆ 300ಕ್ಕಿಂತ ಕಡಿಮೆ ಜನರು ಭಾಗವಹಿಸಲಿದ್ದಾರೆ. ಮುಖ್ಯಮಂತ್ರಿಗಳ ಬದಲಾವಣೆ, ಸಚಿವ ಸಂಪುಟದಲ್ಲಿ ಹಿರಿಯರನ್ನು ಕೈಬಿಡುವುದು ಕೇವಲ ಊಹಾಪೋಹಗಳು. ಕೇಂದ್ರದವರು ಅಥವಾ ರಾಜ್ಯ ನಾಯಕರು ಈ ಕುರಿತು ಚರ್ಚಿಸಿಲ್ಲ ಎಂದರು. ಇದನ್ನೂ ಓದಿ: ಮದ್ಯ ಸೇವಿಸಬೇಕು ಅನ್ನೋರು ಬಿಹಾರಕ್ಕೆ ಬರಲೇಬೇಡಿ: ನಿತೀಶ್ ಕುಮಾರ್

ದೂರು ಕೊಟ್ಟಿಲ್ಲ: ವಿಧಾನಪರಿಷತ್ ಚುನಾವಣೆ ಕುರಿತು ನಿಮ್ಮ ಸಹೋದರ ದೂರು ನೀಡಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರ ನೀಡಿದ ಅವರು, ಯಾವ ದೂರು ಎಲ್ಲಿಯೂ ಕೊಟ್ಟಿಲ್ಲ. ಇದೂ ಊಹಾಪೋಹವೇ. ಈಗ ಗೆಲುವಾಗಿದೆ. ಅದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಮೊದಲ ಪ್ರಾಶಸ್ತ್ಯದ ಮತದಲ್ಲೇ ನನ್ನ ಸಹೋದರ ಗೆದ್ದಿದ್ದಾರೆ. ನಾವು 15 ಸೀಟು ನಿರೀಕ್ಷೆಯಲ್ಲಿದ್ದೆವು. ಎರಡರಿಂದ ಮೂರು ಸ್ಥಾನ ಕಡಿಮೆ ಬಂದಿದೆ. ಈ ಕುರಿತು ಕೋರ್ ಕಮಿಟಿಯಲ್ಲಿ ಚರ್ಚೆ ನಡೆದೇ ನಡೆಯುತ್ತದೆ ಎಂದು ಅವರು ಇನ್ನೊಂದು ಪ್ರಶ್ನೆಗೆ ಉತ್ತರಿಸಿದರು. ಹುಬ್ಬಳ್ಳಿ- ಧಾರವಾಡದ ಅಭಿವೃದ್ಧಿ ಆಗುತ್ತಿದೆ. ಇದು ಸುಂದರ ನಗರವಾಗಿ ಪರಿವರ್ತನೆಗೊಳ್ಳಲಿದೆ. ಅದು ಕಾಂಗ್ರೆಸ್ ಮುಖಂಡರಿಗೆ ಬೇಕಾಗಿಲ್ಲ. ಅದೇ ಕಾರಣಕ್ಕೆ ಕಾಂಗ್ರೆಸ್ ಅನಗತ್ಯವಾಗಿ ಆರೋಪ ಮಾಡುತ್ತಿದೆ. ಹಿಂದೆ ಸಿದ್ದರಾಮಯ್ಯ ಸರ್ಕಾರವಿದ್ದಾಗ ಅಭಿವೃದ್ಧಿಗೆ ಹಣವನ್ನೇ ನೀಡಿರಲಿಲ್ಲ. ಅದರ ಬಗ್ಗೆ ಕಾಂಗ್ರೆಸ್‍ನವರು ಏನು ಹೇಳುತ್ತಾರೆ. ಟೀಕೆಯೊಂದೇ ಅವರಿಗೆ ಗೊತ್ತಿದೆ. ಉತ್ತರ ಕರ್ನಾಟಕ, ಹುಬ್ಬಳ್ಳಿ-ಧಾರವಾಡಕ್ಕೆ ಕಾಂಗ್ರೆಸ್‍ನವರ ಕೊಡುಗೆ ಏನು ಎಂದು ಪ್ರಶ್ನಿಸಿದರು.

Leave a Reply

Your email address will not be published.

Back to top button