– ಕೋಟಿಗಟ್ಟಲೆ ಕರೆಂಟ್ ಬಿಲ್ ಕಟ್ಟೇ ಇಲ್ಲ
ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಕನಸಿನ ಯೋಜನೆಗೆ ಎಳ್ಳು ನೀರು ಬಿಡುವ ಸ್ಥಿತಿ ಎದುರಾಗಲಿದೆ. ಯಾಕಂದರೆ ಇಂದಿರಾ ಕ್ಯಾಂಟೀನ್ ಬಗ್ಗೆ ದೋಸ್ತಿ ನಾಯಕರಿಗೆ ಆಸಕ್ತಿ ಇದ್ದಂತೆ ಕಾಣುತ್ತಿಲ್ಲ. ಜನಸಾಮಾನ್ಯರ ಇಂದಿರಾ ಕ್ಯಾಂಟೀನ್‍ನಲ್ಲಿ ನೀರಿಗಾಗಿ ಪರದಾಟ ಶುರುವಾಗಿದೆ.
ಈ ಮೂಲಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಡವರ ಹಸಿವು ನೀಗಿಸಲು ಆರಂಭಿಸಿದ ಯೋಜನೆ ಈಗ ನೆಲಕಚ್ಚುತ್ತಿದೆಯಾ ಎಂಬ ಅನುಮಾನ ಕಾಡುತ್ತಿದೆ. ಇಂದಿರಾ ಕ್ಯಾಂಟೀನ್‍ನಲ್ಲಿ ವಿದ್ಯುತ್, ನೀರು ವ್ಯತ್ಯಯವಾಗಿದೆ. ಕಾರಣ ಕಳೆದ ಒಂದು ವರ್ಷದಿಂದ ಇಂದಿರಾ ಕ್ಯಾಂಟೀನ್ ಇವುಗಳ ಬಿಲ್ ಪಾವತಿಸಿಲ್ಲ. ನಗರದ 21 ಕ್ಯಾಂಟೀನ್‍ಗಳಲ್ಲಿ ಸದ್ಯ ನೀರಿನ ಪೂರೈಕೆ ಬಹುತೇಕ ಬಂದ್ ಆಗಿದೆ.
ವಿದ್ಯುತ್ ಹಾಗೂ ನೀರಿಗೆ ವಾಣಿಜ್ಯ ಬೆಲೆ ನಿಗದಿ ಮಾಡಿದ್ದಾರೆ. ಇಂದಿರಾ ಕ್ಯಾಂಟೀನ್ ಯೋಜನೆ ಸಾರ್ವಜನಿಕ ಸೇವೆಯದ್ದಾಗಿದೆ. ಇದಕ್ಕೆ ರಿಯಾಯಿತಿ ನೀಡುವವರೆಗೂ ಬಿಲ್ ಪಾವತಿಸಲ್ಲ ಎಂದು ಗುತ್ತಿಗೆದಾರರು ಪಟ್ಟು ಹಿಡಿದಿದ್ದಾರೆ. ಪರಿಣಾಮ ಕೋಡಿಗೆಹಳ್ಳಿ ಸಮೀಪದ ಕ್ಯಾಂಟೀನ್‍ನಲ್ಲಿ ಕಳೆದ 10 ದಿನದಿಂದ ನೀರಿನ ಸಂಪರ್ಕ ಕಡಿತಗೊಳಿಸಲಾಗಿದೆ.
ರಿಯಾಯಿತಿ ದರದಲ್ಲಿ ಊಟ, ತಿಂಡಿ ಕೊಡುತ್ತಾರೆ. ನೀರು ಮಾತ್ರ ಕಷ್ಟ ಆಗುತ್ತಿದೆ. ಬೇಗ ನೀರಿನ ವ್ಯವಸ್ಥೆ ಕೊಡಿ ಎಂದು ಗ್ರಾಹಕರು ಒತ್ತಾಯಿಸುತ್ತಿದ್ದಾರೆ. ಬೆಂಗಳೂರಿನ 21 ಕ್ಯಾಂಟೀನ್ ಗಳಲ್ಲಿ ವಾಟರ್ ಬಂದ್ ಮಾಹಿತಿ ಇದೆ. ಹೀಗಾಗಿ ಸದ್ಯ ಖಾಸಗಿ ವಾಟರ್ ಟ್ಯಾಂಕ್‍ಗೆ ಸಾವಿರ ರೂ ಕೊಟ್ಟು ನೀರಿನ ಪೈಪ್ ಅಳವಡಿಸಿ ವ್ಯವಸ್ಥೆ ಮಾಡಿದ್ದಾರೆ. ಇನ್ನು ಗುತ್ತಿಗೆದಾರೊಂದಿಗೆ ಮಾತನಾಡಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮೇಯರ್ ಗಂಗಾಬಿಕೆ ಹೇಳಿದ್ದಾರೆ.
ಪ್ರತಿ ಇಂದಿರಾ ಕ್ಯಾಂಟೀನ್ ನಲ್ಲೂ ವಿದ್ಯುತ್ 90 ಸಾವಿರವರೆಗೂ ಬಿಲ್ ಬಾಕಿ ಉಳಿದಿದೆ. ನೀರು ಕಟ್ ಅಂತೂ ಆಯ್ತು ಹೀಗೆ ಮುಂದುವರಿದರೆ ವಿದ್ಯುತ್ ಸಹ ಬಂದ್ ಆಗಲಿದೆ. ಹೀಗಾಗಿ ಅಧಿಕಾರಿಗಳು, ದೋಸ್ತಿ ಜನರು ಇಂದಿರಾ ಸಂಕಟವನ್ನು ಬಗೆಹರಿಸಬೇಕಿದೆ.