ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆಯಲ್ಲಿ ವಿದ್ಯಾರ್ಥಿಗಳಿಗೆ ಬಯಲೇ ಶೌಚಾಲಯವಾಗಿರುವ ದುಸ್ಥಿತಿ ನಿರ್ಮಾಣವಾಗಿದೆ.
ಜಿಲ್ಲೆಯ ನಂಜನಗೂಡು ತಾಲೂಕಿನ ಕಸುವಿನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಮಕ್ಕಳು ಇಂತಹ ದುಸ್ಥಿತಿ ಎದುರಿಸುತ್ತಿದ್ದಾರೆ. ಸಮರ್ಪಕ ಶೌಚಾಲಯದ ವ್ಯವಸ್ಥೆ ಇಲ್ಲದ ಕಾರಣ ವಿದ್ಯಾರ್ಥಿಗಳು ಶಾಲೆಯ ಬಳಿ ಬೆಳೆದಿರುವ ಮುಳ್ಳಿನ ಪೊದೆಗಳ ಮೊರೆ ಹೋಗಿದ್ದಾರೆ.
ಹಾವು, ಚೇಳುಗಳ ಆವಾಸ ಸ್ಥಾನವಾಗಿರುವ ಪೊದೆಗಳ ಬಳಿ ಮಕ್ಕಳಿಗೆ ಯಾವುದೇ ಕ್ಷಣದಲ್ಲಾದರೂ ಅಪಾಯ ಸಂಭವಿಸುವ ಸಾಧ್ಯತೆ ಇದೆ. 300 ಕ್ಕೂ ಹೆಚ್ಚು ಮಕ್ಕಳಿರುವ ಪ್ರೌಢಶಾಲೆಯಲ್ಲಿ ಹೆಣ್ಣು ಮಕ್ಕಳೂ ಸಹ ಇದ್ದಾರೆ. ವಿಧ್ಯಾರ್ಥಿನಿಯರಿಗೂ ಇದೇ ಪರಿಸ್ಥಿತಿ ಇದೆ. ಖಾಸಗಿ ಕಂಪನಿ ನೆರವಿನಿಂದ ಶೌಚಾಲಯ ನಿರ್ಮಾಣವಾಗಿದ್ದರೂ ನೀರಿನ ಸಮಸ್ಯೆಯಿಂದ ಅದನ್ನು ಮುಚ್ಚಲಾಗಿದೆ.
ಖಾಸಗಿ ಶಾಲೆಗಳ ಹಾವಳಿಯಲ್ಲೂ ಈ ಸರ್ಕಾರಿ ಶಾಲೆಗೆ ಪ್ರವೇಶಾತಿ ಗಣನೀಯವಾಗಿದೆ. ಹೀಗಿದ್ದೂ ಅವ್ಯವಸ್ಥೆಯನ್ನ ಸರಿಪಡಿಸುವ ವಿಚಾರದಲ್ಲಿ ಶಾಲಾ ಆಡಳಿತ ಮಂಡಳಿ ತಲೆ ಕೆಡಿಸಿಕೊಳ್ಳುತ್ತಿಲ್ಲ. ಹಲವಾರು ದಿನಗಳಿಂದಲೂ ಮಕ್ಕಳು ಬಯಲನ್ನೇ ಶೌಚಾಲಯ ಮಾಡಿಕೊಂಡಿದ್ದರೂ ಸರಿಪಡಿಸುವ ಗೋಜಿಗೆ ಹೋಗದೇ ಇರುವುದು ವಿಪರ್ಯಾಸವಾಗಿದೆ.