ಧಾರವಾಡ: ಆ ಮಕ್ಕಳು ಪ್ರತಿ ದಿನಾ ಶಾಲೆಗೆ ಹೋಗಬೇಕಂದ್ರೆ ಹರಸಾಹಸ ಪಡಬೇಕು. ನಿತ್ಯವೂ 6 ಕಿಲೋ ಮೀಟರ್ ನಡೆದು ಶಾಲೆಗೆ ಹೋಗುವ ಮಕ್ಕಳಿಗೆ ಮಳೆ ಬಂದ್ರೆ ಸಾಕು ರಸ್ತೆ ಮೇಲೆ ಓಡಾಡೊಕೆ ಆಗಲ್ಲ. ಕೈಯಲ್ಲಿ ಶೂ ಹಿಡಿದು ಮಕ್ಕಳು ಮುಂದೆ ಸಾಗಬೇಕು.
ಕೈಯಲ್ಲಿ ಶೂ ಹಿಡಿದು ಸಾಗುತ್ತಿರೊ ಮಕ್ಕಳು, ಮಳೆಯಿಂದ ಹದಗೆಟ್ಟ ರಸ್ತೆ, ನಡೆಯುವಾಗ ಯಾಮಾರಿದ್ರೆ ರಸ್ತೆಗುಂಡಿಯಲ್ಲಿ ಬಿಳೋ ಭಯ. ಇದು ಧಾರವಾಡ ತಾಲೂಕಿನ ಶಿಂಗನಕೋಪ್ಪ ಗ್ರಾಮದ ರಸ್ತೆಯಲ್ಲಿ ಕಂಡು ಬಂದ ದೃಶ್ಯಗಳು. ಶಿಂಗನಕೊಪ್ಪ ಗುಡ್ಡಗಾಡು ಪ್ರದೇಶದಲ್ಲಿರುವ ಗ್ರಾಮ. ಇಲ್ಲಿ ಬಹುತೇಕ ಗವಳಿ ಜನಾಂಗದವರು ವಾಸವಾಗಿದ್ದಾರೆ. ಅಲ್ಲದೇ ಈ ಗ್ರಾಮ ಕಂದಾಯ ಗ್ರಾಮವಾಗಿ ಆಯ್ಕೆಯಾಗಿದೆ. ಆದ್ರೆ ಕಳೆದ 40 ವರ್ಷಗಳಿಂದ ಈ ಗ್ರಾಮಕ್ಕೆ ಒಂದು ಸುಸಜ್ಜಿತ ರಸ್ತೆ ಇಲ್ಲ.
Advertisement
Advertisement
ಮುಳ್ಳು-ಕಂಟೆಯಿಂದ ಕೂಡಿದ ಕಚ್ಛಾ ರಸ್ತೆ ಇದೆ. ದೊಡ್ಡ ದೊಡ್ಡ ತಗ್ಗು ಗುಂಡಿಗಳಿವೆ. ಈ ರಸ್ತೆಯಲ್ಲಿಯೇ ನಿತ್ಯವೂ ಮಕ್ಕಳು ಆರು ಕಿ.ಮೀ ನಡೆದುಕೊಂಡೇ ಪಕ್ಕದ ಕುಂಬಾರಕೊಪ್ಪ ಗ್ರಾಮದ ಶಾಲೆಗೆ ಹೋಗಬೇಕು. ರಸ್ತೆ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಹಾಗೂ ಜನಪ್ರತಿನಿದಿಗಳ ಗಮನಕ್ಕೆ ತಂದ್ರೂ ಯಾವುದೇ ಪ್ರಯೋಜನವಾಗಿಲ್ಲ. ನಮಗೆ ಒಂದು ಉತ್ತಮ ರಸ್ತೆ ಮಾಡಿಕೊಡಿ ಎಂದು ಗ್ರಾಮದ ಮಕ್ಕಳು ಮನವಿ ಮಾಡುತ್ತಿದ್ದಾರೆ.
Advertisement
ಈ ಗ್ರಾಮ ಬರೋದು ಕಾರ್ಮಿಕ ಇಲಾಖೆ ಸಚಿವ ಸಂತೋಷ ಲಾಡ್ ಅವರ ಕ್ಷೇತ್ರದಲ್ಲಿ. ರಸ್ತೆ ಸರಿ ಇಲ್ಲದ ಕಾರಣ ಈ ಗ್ರಾಮಕ್ಕೆ ಬಸ್ ವ್ಯವಸ್ಥೆ ಸಹ ಇಲ್ಲ. ಹೀಗಾಗಿ ಗ್ರಾಮಸ್ಥರು ಗ್ರಾಮದಾಚೆ ಹೋಗಬೇಕಾದ್ರೆ ನಡೆದುಕೊಂಡೇ ಹೋಗಬೇಕು. ಆದ್ರೆ ಮಳೆ ಬಂದ್ರೆ ಯಾರೊಬ್ಬರೂ ಗ್ರಾಮದಿಂದ ಹೊರಗೆ ಹೋಗೊಕೆ ಆಗಲ್ಲ. ರಸ್ತೆಯಲ್ಲಿ ದೊಡ್ಡ ದೊಡ್ಡ ಗುಂಡಿಗಳು ಕೆಸರಿನಿಂದ ಕೂಡಿದ್ದು ಯಾಮಾರಿದ್ರೆ ಕೆಸರಲ್ಲಿ ಬೀಳೋದು ಗ್ಯಾರಂಟಿ. ಮಕ್ಕಳು ಸಮವಸ್ತ್ರಗಳನ್ನು ಕೆಸರಾಗಿಸಿಕೊಳ್ತಾರೆ. ಇದರಿಂದ ಶಾಲೆಗೆ ಹೋಗಲು ಮಕ್ಕಳಿಗೆ ತೊಂದರೆಯಾಗುತ್ತಿದ್ರೂ ರಸ್ತೆ ಸುಧಾರಣೆಯತ್ತ ಸಚಿವರು ಗಮನ ಹರಿಸುತ್ತಿಲ್ಲ ಎನ್ನುತ್ತಾರೆ ಗ್ರಾಮಸ್ಥರು.
Advertisement
ಹಲವು ದಶಕಗಳಿಂದ ಇದೇ ರೀತಿ ರಸ್ತೆ ಇಲ್ಲದೆಯೇ ಈ ಜನರು ಪರದಾಟ ನಡೆಸಿದ್ದಾರೆ. ಇನ್ನಾದ್ರೂ ಶಾಲೆಗೆ ಹೋಗುವ ಮಕ್ಕಳಿಗೆ ಸುಸಜ್ಜಿತ ರಸ್ತೆ ವ್ಯವಸ್ಥೆ ಮಾಡುವಲ್ಲಿ ಜನಪ್ರತಿನಿಧಿಗಳು ಹಾಗೂ ಸಂಬಂಧ ಪಟ್ಟ ಅಧಿಕಾರಿಗಳು ಗಮನ ಹರಿಸಬೇಕಿದೆ.