– ಆಟೋ, ಟ್ಯಾಕ್ಸಿ ಸಂಚಾರ ಮಾಮೂಲು
– ಬೆಂಗಳೂರಲ್ಲಿಂದು ಸಿನಿಮಾ ಪ್ರದರ್ಶನ ಅನುಮಾನ
ಬೆಂಗಳೂರು: ಬಯಲು ಸೀಮೆಗೆ ಶಾಶ್ವತ ನೀರಾವರಿ, ಮಹದಾಯಿ-ಕಳಸಾ ಬಂಡೂರಿ ಯೋಜನೆಯ ತ್ವರಿತ ಜಾರಿ, ಮೇಕೆದಾಟು ಯೋಜನೆ ಜಾರಿ, ರೈತರ ಸಾಲ ಮನ್ನಾ ಸೇರಿದಂತೆ ಹತ್ತಾರು ವಿಷಯಗಳನ್ನು ಮುಂದಿಟ್ಟುಕೊಂಡು ಇಂದು ವಾಟಾಳ್ ನಾಗರಾಜ್ ನೇತೃತ್ವದ ಕನ್ನಡ ಒಕ್ಕೂಟ ಬಂದ್‍ಗೆ ಕರೆ ನೀಡಿದೆ.
ಬಂದ್ ಬೇಕೆ ಬೇಡವೇ ಅನ್ನೋದೇ ದೊಡ್ಡ ಪ್ರಶ್ನೆಯಾಗಿದೆ. ಬಂದ್ ಹೋರಾಟದ ಭಾಗವೆಂದು ವಾದಿಸಿರುವ ಕೆಲವು ಸಂಘಟನೆಗಳು ಬೆಂಬಲ ಘೋಷಿಸಿವೆ. ಸಾರಾ ಗೋವಿಂದು ಅಧ್ಯಕ್ಷರಾಗಿರುವ ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿ, ರಾಜ್ಯ ಲಾರಿ ಮಾಲೀಕರ ಸಂಘ, ಕರವೇ ಪ್ರವೀಣ್ ಶೆಟ್ಟಿ ಬಣ, ಕನ್ನಡ ಸೇನೆ, ರೈತ ಸಂಘ, ಬಯಲು ಸೀಮೆ ಹೋರಾಟಗಾರರ ಸಮಿತಿ ಬೆಂಬಲ ಘೋಷಿಸಿದೆ.
ಆದ್ರೆ ಇವತ್ತಿನ ಬಂದ್ ಯಾಕೆ ಬೇಕು ಅನ್ನೋದು ಹಲವಾರು ಕನ್ನಡ ಪರ ಸಂಘಟನೆಗಳ ಪ್ರಶ್ನೆ. ಹೋರಾಟ ಸರಿ, ಆದ್ರೆ ಪದೇಪದೇ ಬಂದ್ ಮಾಡೋಕೆ ಇದೇನು ಹುಚ್ಚರ ಸಂತೆನಾ ಅಂತಾ ಕೆಂಡಕಾರಿವೆ. ಇವತ್ತಿನ ಬಂದ್‍ಗೆ ಕರವೇ ನಾರಾಯಣಗೌಡ ಬಣ, ರಾಜ್ಯ ರಸ್ತೆ ಸಾರಿಗೆ ನೌಕರರ ಒಕ್ಕೂಟ, ಬಿಎಂಟಿಸಿ ನೌಕರರ ಸಂಘ, ಖಾಸಗಿ ಶಾಲಾ-ಕಾಲೇಜುಗಳ ಆಡಳಿತ ಮಂಡಳಿಗಳ ಒಕ್ಕೂಟ, ಹೋಟೆಲ್ ಮಾಲೀಕರ ಸಂಘ, ಆಟೋ ಚಾಲಕರ ಸಂಘ, ಪೆಟ್ರೋಲ್ ಬಂಕ್ ಮಾಲೀಕರ ಸಂಘ ಬೆಂಬಲ ಸೂಚಿಸಿಲ್ಲ.
ಬಂದ್‍ನಿಂದ ಖಾಸಗಿ ಶಾಲೆಗಳ ಸಂಘ ಹೊರಗುಳಿದಿವೆ. ಶಾಲೆಗಳು ಶುರುವಾಗಿ ಕೇವಲ ಒಂದು ವಾರವಾಗಿರೋ ಕಾರಣ ಬಂದ್‍ನಲ್ಲಿ ಭಾಗವಹಿಸಲು ಅವು ಸಿದ್ಧವಿಲ್ಲ. ಹೀಗಾಗಿ ಇವತ್ತು ಎಂದಿನಂತೆ ಶಾಲಾ-ಕಾಲೇಜುಗಳು ತೆರೆದಿರುತ್ತವೆ. ಹೀಗಾಗಿ ಎಂದಿನಂತೆ ಪೋಷಕರು ತಮ್ಮ ಮಕ್ಕಳನ್ನು ಶಾಲೆ-ಕಾಲೇಜುಗಳಿಗೆ ಕಳುಹಿಸಬಹುದು. ಆದ್ರೆ ರಾಮನಗರ, ಚಿಕ್ಕಬಳ್ಳಾಪುರ, ಕೋಲಾರದಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಇನ್ನು ಎಂದಿನಂತೆ ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ಕೆಎಸ್‍ಆರ್‍ಟಿಸಿ, ಬಿಎಂಟಿಸಿ ಬಸ್‍ಗಳ ಓಡಾಟ ಇರಲಿದೆ. ಹೀಗಾಗಿ ಓಡಾಟಕ್ಕೆ ಜನಸಾಮಾನ್ಯರಿಗೆ ಯಾವ ತೊಂದರೆಯೂ ಇರಲ್ಲ. ಆಟೋ, ಟ್ಯಾಕ್ಸಿ ಸೇವೆ ಎಂದಿನಂತೆ ಇರಲಿದೆ. ಹೋಟೆಲ್‍ಗಳು ಓಪನ್ ಆಗಿರುತ್ತೆ. ಪೆಟ್ರೋಲ್ ಬಂಕ್ ಸೇವೆ ಎಂದಿನಂತೆ ಇರಲಿದೆ. ಆದರೆ ಚಿತ್ರಮಂದಿರಗಳಲ್ಲಿ ಇವತ್ತು ಚಿತ್ರಪ್ರದರ್ಶನ ಇರೋದು ಬಹುತೇಕ ಅನುಮಾನ. ಸರ್ಕಾರಿ ಕಚೇರಿಗಳು, ಬ್ಯಾಂಕ್, ಕೋರ್ಟ್ ಕಲಾಪಗಳು ಕೂಡಾ ಎಂದಿನಂತೆ ಸಾಗಲಿವೆ. ಅವುಗಳಿಗೆ ಬಂದ್ ಬಿಸಿ ತಟ್ಟುವ ಸಾಧ್ಯತೆ ಕಡಿಮೆ.
ಆದರೆ ಬಂದ್ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಬೆಂಗಳೂರು ವಿಶ್ವವಿದ್ಯಾಲಯ ಇವತ್ತು ನಡೆಯಬೇಕಿದ್ದ ಸ್ನಾತಕೋತ್ತರ ಪರೀಕ್ಷೆಗಳನ್ನು ಮುಂದೂಡಿದೆ. ಪ್ರಥಮ ವರ್ಷದ ಡಿ.ಎಡ್ & ಡಿ.ಎಲ್.ಎಡ್ ಪರೀಕ್ಷೆಗಳು ಇವತ್ತಿನ ಮಟ್ಟಿಗೆ ರದ್ದಾಗಿದೆ. ಎರಡೂ ಪರೀಕ್ಷೆಗಳು ನಾಳೆ ನಡೆಯಲಿದೆ. ಇವತ್ತು ನಡೆಯಬೇಕಿದ್ದ ವಿಟಿಯು ಇಂಜಿನಿಯರಿಂಗ್ ಪರೀಕ್ಷೆ ಕೂಡಾ ಮುಂದೂಡಿಕೆಯಾಗಿದೆ.