ಚಿಕ್ಕೋಡಿ(ಬೆಳಗಾವಿ): ಕಳೆದ ಆರು ವರ್ಷದ ಹಿಂದೆ ಅಲ್ಲಿ ಹೊರ ಠಾಣೆಯಿಂದ ಪೊಲೀಸ್ ಠಾಣೆ ಪ್ರಾರಂಭಿಸಲಾಗಿದೆ. 30ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿರುವ ಆ ಠಾಣೆ ಸ್ವಂತ ಕಟ್ಟಡವಿಲ್ಲದೇ ಅಲ್ಲಿರುವ ಪುರಸಭೆಯ ಹಳೆ ಕಟ್ಟಡದಲ್ಲಿದೆ. ಪುರಸಭೆ ಪಕ್ಕದಲ್ಲೆ ಠಾಣೆ ಇರುವುದರಿಂದ ಸಾರ್ವಜನಿಕರಿಗೆ ತೊಂದರೆ ಒಂದು ಕಡೆಯಾದರೆ ಇನ್ನೊಂದೆಡೆ ಸಾರ್ವಜನಿಕರಿಗೆ ರಕ್ಷಣೆ ನೀಡುವ ಪೊಲೀಸರಿಗೆ ರಕ್ಷಣೆ ಇಲ್ಲದಂತಾಗಿದೆ.
ಹೌದು. ಜನರ ರಕ್ಷಣೆ ಮಾಡಬೇಕಾದ ಪೊಲೀಸರ ಪಾಡು ಹೇಳತೀರದಾಗಿದೆ. ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿ ಮತಕ್ಷೇತ್ರದ ಹಾರೂಗೇರಿ ಪೊಲೀಸ್ ಠಾಣೆಗೆ ಸ್ವಂತ ಕಟ್ಟಡವಿಲ್ಲದೇ ಅಲ್ಲಿರುವ ಪುರಸಭೆಯ ಹಳೆ ಕಟ್ಟಡದಲ್ಲಿದೆ. ಹೊರಠಾಣೆಯಿಂದ ಅಧಿಕೃತವಾಗಿ ಪೊಲೀಸ್ ಠಾಣೆಯಾಗಿ 6 ವರ್ಷಗಳೆ ಕಳೆದ್ರೂ ಈ ಪೊಲೀಸ್ ಠಾಣೆಗೆ ಸ್ವಂತ ಕಟ್ಟಡವಿಲ್ಲದೇ ಪುರಸಭೆಯ ಹಳೆಯ ಕಟ್ಟಡದಲ್ಲೆ ಠಾಣೆ ಇದೆ.
ಈ ಠಾಣೆ ಇಲ್ಲೆ ಇರುವ ಪರಿಣಾಮ ಪುರಸಭೆಗೆ ಬರುವರಿಗೆ ಠಾಣೆ ಯಾವುದು..? ಪುರಸಭೆ ಯಾವುದು..? ಅಂತ ಎಷ್ಟೋ ಮಂದಿಗೆ ಗೊತ್ತೇ ಆಗ್ತಿಲ್ಲ. ಹಾರೂಗೇರಿಯ ಮಧ್ಯಭಾಗದಲ್ಲಿ ಠಾಣೆ ಇರೋದ್ರಿಂದ ಸೀಜ್ ಆದ ವಾಹನಗಳನ್ನ ಮಾರುಕಟ್ಟೆ ನಡೆಯುವ ಹಾಗೂ ಸಾರ್ವಜನಿಕರು ಓಡಾಡುವ ಜಾಗದಲ್ಲಿ ನಿಲ್ಲಿಸೋದ್ರಿಂದ ಸಾರ್ವಜನಿಕರಿಗೆ ಕಿರಿಕಿರಿ ಆಗಿದೆ. ಇಷ್ಟೇ ಅಲ್ಲ ಪೊಲೀಸ್ ಸಿಬ್ಬಂದಿಗೂ ಹೇಳಿಕೊಳ್ಳದಷ್ಟು ಸಮಸ್ಯೆಗಳಿವೆ. ಇದನ್ನೂ ಓದಿ: ಡಿಜೆ ಹಳ್ಳಿಯ ದರ್ಗಾದಲ್ಲಿ ಬೆಂಕಿ ಅವಘಡ
ಹಳೇ ಕಟ್ಟಡದಲ್ಲಿ ಠಾಣೆ ಇರೋದ್ರಿಂದ ಮಳೆ ಬಂದ್ರೆ ಒಳಗೆ ಮಳೆನೀರು ಸೋರಿಕೆ ಆಗುತ್ತೆ. ಇದರಿಂದ ಮಹತ್ವ ದಾಖಲೆಗಳು ನಾಶವಾಗುವ ಭೀತಿ ಉಂಟಾಗಿದೆ. ಮಳೆಯಿಂದ ರಕ್ಷಿಸಿಕೊಳ್ಳಲು ಮೇಲೆ ಪ್ಲಾಸ್ಟಿಕ್ ಟಾರ್ಪಲ್ ಹಾಕಲಾಗಿದೆ. ಕೈದಿಗಳಿಗೂ ಸೂಕ್ತ ಜಾಗ ಇಲ್ಲದಂತಾಗಿದೆ. ಮಹಿಳಾ ಕೈದಿಗಳಿದ್ರೆ ಪ್ರತ್ಯೇಕವಾದ ಕೊಠಡಿಗಳಿಲ್ಲ. ಯಾರಾದರೂ ದೂರು ಕೊಡಲು ಬಂದ್ರೆ, ದೂರುದಾರರಿಗೆ ಪೊಲೀಸರು ಯಾರು ಕೈದಿಗಳ್ಯಾರು ಎನ್ನುವ ಪ್ರಶ್ನೆ ಮೂಡುವ ಹಾಗಿದೆ ಸದ್ಯದ ಪರಿಸ್ಥಿತಿ.
ಒಟ್ಟಿನಲ್ಲಿ ಆರು ವರ್ಷಗಳಿಂದ ಒಂದು ಸುಸಜ್ಜಿತ ಕಟ್ಟಡವಿಲ್ಲದೇ ಪುರಸಭೆ ಕಟ್ಟಡದಲ್ಲಿ ಠಾಣೆ ನಡೆಯುತ್ತಿದ್ದರು ಸಂಬಂಧಪಟ್ಟವರು ಜಾಣಮೌನ ವಹಿಸುತ್ತಿದ್ದಾರೆ. ಇನ್ನಾದರೂ ಸುಸಜ್ಜಿತವಾದ ಠಾಣೆ ಕಟ್ಟಲಿ ಎನ್ನುವುದು ಇಲ್ಲಿನ ಜನ ಆಗ್ರಹಿಸುತ್ತಿದ್ದಾರೆ.