ಪಾಕಿಸ್ತಾನದ (Pakistan) 76 ವರ್ಷಗಳ ಇತಿಹಾಸದಲ್ಲಿ ಇಲ್ಲಿಯವರೆಗೆ ಯಾವೊಬ್ಬ ಪ್ರಧಾನಿಯೂ (Prime Minister) 5 ವರ್ಷಗಳ ಅಧಿಕಾರಾವಧಿಯನ್ನು ಪೂರ್ಣಗೊಳಿಸಿಲ್ಲ. ಕಳೆದ ವರ್ಷ ಅವಿಶ್ವಾಸ ನಿರ್ಣಯದಲ್ಲಿ ಇಮ್ರಾನ್ ಖಾನ್ (Imran Khan) ಅವರನ್ನು ಪದಚ್ಯುತಿಗೊಳಿಸಿದ ಬಳಿಕ ಶೆಹಬಾಜ್ ಷರೀಫ್ (Shehbaz Sharif) ಸಮ್ಮಿಶ್ರ ಸರ್ಕಾರದಲ್ಲಿ ಅಧಿಕಾರ ಏರಿದ್ದರು.
ಇತ್ತೀಚೆಗಷ್ಟೇ ಷರೀಫ್ ಸರ್ಕಾರದ ಸಂಸತ್ತನ್ನು ಅವಧಿ ಪೂರ್ಣಗೊಳ್ಳುವ ಮೊದಲೇ ವಿಸರ್ಜಿಸಲಾಯಿತು. ಈ ಹಿನ್ನೆಲೆ ಇನ್ನು 3 ತಿಂಗಳ ಒಳಗಾಗಿ ಪಾಕಿಸ್ತಾನದಲ್ಲಿ ಹೊಸ ಚುನಾವಣೆ ನಡೆಯಲಿದೆ.
Advertisement
Advertisement
ಪಾಕಿಸ್ತಾನದ ಇತಿಹಾಸದಲ್ಲಿ 1947ರಿಂದ ಇಲ್ಲಿವರೆಗೆ ಒಟ್ಟು 23 ಜನರು ಪ್ರಧಾನಿಯಾಗಿ ಪಟ್ಟ ಅಲಂಕರಿಸಿದ್ದಾರೆ. ಅವರಲ್ಲಿ ಬರೋಬ್ಬರಿ 18 ಸಂದರ್ಭಗಳಲ್ಲಿ ಭ್ರಷ್ಟಾಚಾರ ಆರೋಪಗಳಲ್ಲಿ, ಮಿಲಿಟರಿ ದಂಗೆ ಹಾಗೂ ಆಡಳಿತ ಗುಂಪುಗಳಲ್ಲಿನ ಆಂತರಿಕ ಕಲಹದಿಂದಾಗಿ ಬಲವಂತವಾಗಿ ರಾಜೀನಾಮೆ ನೀಡಿರುವುದು ಸೇರಿದಂತೆ ವಿವಿಧ ಕಾರಣಗಳು ಇವೆ. ಪಾಕ್ ಇತಿಹಾಸದಲ್ಲಿ ಒಬ್ಬ ಪ್ರಧಾನಿಯ ಹತ್ಯೆಯೂ ನಡೆದಿದೆ.
Advertisement
ಒಬ್ಬ ಪ್ರಧಾನಿ ಅಧಿಕಾರಾವಧಿಗೂ ಮುನ್ನ ರಾಜೀನಾಮೆ ನೀಡಿದ್ದಲ್ಲಿ ಅವರ ಸ್ಥಾನವನ್ನು ತುಂಬಲು ಸೀಮಿತಾವಧಿಗೆ ಉಸ್ತುವಾರಿಗಳನ್ನು ನೇಮಿಸಲಾಗುತ್ತದೆ. ಇಲ್ಲಿಯವರೆಗೆ ಪಾಕಿಸ್ತಾನದಲ್ಲಿ ಅತ್ಯಂತ ಹೆಚ್ಚಿನ ಕಾಲ ಅಧಿಕಾರ ವಹಿಸಿಕೊಂಡಿದ್ದ ಪ್ರಧಾನಿಯ ಅವಧಿ 4 ವರ್ಷ, 2 ತಿಂಗಳಾಗಿದ್ದು, ಅದೇ ರೀತಿ ಅತ್ಯಂತ ಅಲ್ಪ ಅವಧಿಗೆ ಅಧಿಕಾರದಿಂದಿಳಿದ ಪ್ರಧಾನಿಯ ಅವಧಿ ಕೇವಲ 2 ವಾರವಾಗಿದೆ.
Advertisement
ಮಿಯಾನ್ ಮುಹಮ್ಮದ್ ನವಾಜ್ ಷರೀಫ್ ಪಾಕಿಸ್ತಾನದ ಇತಿಹಾಸದಲ್ಲಿ ಅತಿ ಹೆಚ್ಚು ಎಂದರೆ 3 ಬಾರಿ ಪ್ರಧಾನಿಯಾಗಿ ಆಯ್ಕೆಯಾಗಿದ್ದರು. 1947ರ ಬಳಿಕ ಪ್ರಧಾನಿಯಾಗಿ ಅಧಿಕಾರ ಸ್ವೀಕಾರ ಮಾಡಿದವರ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ. ಹಂಗಾಮಿ ಪ್ರಧಾನಿಯಾಗಿ ಆಯ್ಕೆಯಾದವರನ್ನು ಅಥವಾ ಇನ್ನೊಬ್ಬ ಪ್ರಧಾನಮಂತ್ರಿಯ ಅವಧಿಯನ್ನು ಪೂರ್ಣಗೊಳಿಸಿರುವವರನ್ನು ಇಲ್ಲಿ ಸೇರಿಸಲಾಗಿಲ್ಲ.
* ಲಿಯಾಕತ್ ಅಲಿ ಖಾನ್: ಪಾಕಿಸ್ತಾನದ ಮೊದಲ ಪ್ರಧಾನಿಯಾದ ಇವರು 1947ರ ಆಗಸ್ಟ್‌ನಲ್ಲಿ ಅಧಿಕಾರ ಸ್ವೀಕರಿಸಿದರು. 1951ರ ಅಕ್ಟೋಬರ್ 16ರಂದು ಅವರು ರಾಜಕೀಯಕ್ಕೆ ಸಂಬಂಧಿಸಿದ ರ‍್ಯಾಲಿಯಲ್ಲಿ ಹತ್ಯೆಯಾದರು. ಇವರ ಅಧಿಕಾರಾವಧಿ 4 ವರ್ಷ 2 ತಿಂಗಳು.
* ಖವಾಜಾ ನಾಜಿಮುದ್ದೀನ್: 1951ರ ಅಕ್ಟೋಬರ್ 17ಕ್ಕೆ ಅಧಿಕಾರ ವಹಿಸಿಕೊಂಡ ಇವರು 1953 ಏಪ್ರಿಲ್ 17ರಂದು ದೇಶದ ಗವರ್ನರ್ ಜನರಲ್, ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಯಿಂದ ಪಡೆದ ಪ್ರಬಲ ಸ್ಥಾನ ಹಾಗೂ ಧಾರ್ಮಿಕ ಗಲಭೆಗಳನ್ನು ತಪ್ಪಾಗಿ ನಿರ್ವಹಿಸಿದ ಆರೋಪದ ಮೇಲೆ ವಜಾಗೊಳಿಸಲಾಯಿತು. ಇವರ ಅಧಿಕಾರಾವಧಿ 1 ವರ್ಷ, 6 ತಿಂಗಳು.
* ಮಹಮ್ಮದ್ ಅಲಿ ಬೋಗ್ರಾ: ಇವರು 1953ರ ಏಪ್ರಿಲ್ 17ರಂದು ಅಧಿಕಾರ ವಹಿಸಿಕೊಂಡರು. 1955ರ ಆಗಸ್ಟ್ 11 ರಂದು ಪಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಇವರ ಅಧಿಕಾರಾವಧಿ 2 ವರ್ಷ, 3 ತಿಂಗಳು.
* ಚೌಧರಿ ಮೊಹಮ್ಮದ್ ಅಲಿ: 1955ರ ಆಗಸ್ಟ್‌ನಲ್ಲಿ ಅಧಿಕಾರ ವಹಿಸಿಕೊಂಡ ಇವರು ಆಡಳಿತ ಪಕ್ಷದಲ್ಲಿನ ಆಂತರಿಕ ಭಿನ್ನಾಭಿಪ್ರಾಯದಿಂದ 1956ರ ಸೆಪ್ಟೆಂಬರ್ 12ರಂದು ಉಚ್ಚಾಟಿಸಲಾಯಿತು. ಇವರ ಅಧಿಕಾರಾವಧಿ 1 ವರ್ಷ, 1 ತಿಂಗಳು.
* ಹುಸೇನ್ ಶಹೀದ್ ಸುಹ್ರವರ್ದಿ: ಇವರು 1956ರ ಸೆಪ್ಟೆಂಬರ್ 12ರಂದು ಅಧಿಕಾರ ವಹಿಸಿಕೊಂಡರು. ಇತರ ಶಕ್ತಿ ಕೇಂದ್ರಗಳೊಂದಿಗೆ ಭಿನ್ನಾಭಿಪ್ರಾಯದಿಂದಾಗಿ 1957ರ ಅಕ್ಟೋಬರ್ 18ರಂದು ಇವರನ್ನು ಬಲವಂತವಾಗಿ ಅಧಿಕಾರದಿಂದ ಇಳಿಸಲಾಯಿತು. ಇವರ ಅಧಿಕಾರಾವಧಿ 1 ವರ್ಷ 1 ತಿಂಗಳು.
* ಇಬ್ರಾಹಿಂ ಇಸ್ಮಾಯಿಲ್ ಚುಂದ್ರಿಗಾರ್: ಇವರು 1957ರ ಅಕ್ಟೋಬರ್‌ನಲ್ಲಿ ಅಧಿಕಾರ ವಹಿಸಿಕೊಂಡರು. ಸಂಸತ್ತಿನಲ್ಲಿ ಅವಿಶ್ವಾಸ ಮತದಿಂದಾಗಿ 1957ರ ಡಿಸೆಂಬರ್ 16ರಂದು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಇವರ ಅಧಿಕಾರಾವಧಿ 2 ತಿಂಗಳಿಗೂ ಕಡಿಮೆ.
* ಮಲಿಕ್ ಫಿರೋಜ್ ಖಾನ್ ನೂನ್: 1957ರ ಡಿಸೆಂಬರ್ 16ರಂದು ಅಧಿಕಾರ ವಹಿಸಿಕೊಂಡ ಇವರು ಪಾಕಿಸ್ತಾನದಲ್ಲಿ ಮಾರ್ಷಲ್ ಲಾ (ಮಿಲಿಟರಿ ಆಡಳಿತ) ಹೇರಿದ ಕಾರಣದಿಂದಾಗಿ 1957ರ ಅಕ್ಟೋಬರ್ 7 ರಂದು ವಜಾಗೊಂಡರು. ಇವರ ಅಧಿಕಾರಾವಧಿ 10 ತಿಂಗಳಿಗೂ ಕಡಿಮೆ.
* ನೂರುಲ್ ಅಮೀನ್: ಇವರು 1971ರ ಡಿಸೆಂಬರ್ 7 ರಂದು ಅಧಿಕಾರ ವಹಿಸಿಕೊಂಡರು. ಪಾಕಿಸ್ತಾನದಿಂದ ಬಾಂಗ್ಲಾದೇಶ ಪ್ರತ್ಯೇಕವಾದ ಸ್ವಲ್ಪ ಸಮಯದ ನಂತರ 1971ರ ಡಿಸೆಂಬರ್ 20ರಂದು ತಮ್ಮ ಕಚೇರಿಯನ್ನು ತೊರೆದರು. ಇವರ ಅಧಿಕಾರಾವಧಿ 2 ವಾರಗಳಿಗಿಂತಲೂ ಕಡಿಮೆ.
* ಜುಲ್ಫಿಕರ್ ಅಲಿ ಭುಟ್ಟೊ: ಇವರು 1973ರ ಆಗಸ್ಟ್ 14 ರಂದು ಅಧಿಕಾರ ವಹಿಸಿಕೊಂಡು 1977ರ ಜುಲೈ 5 ರಂದು ಮಿಲಿಟರಿ ದಂಗೆಯಿಂದಾಗಿ ಪದಚ್ಯುತಿಗೊಂಡರು. ಬಳಿಕ ಸೆರೆವಾಸವನ್ನೂ ಅನುಭವಿಸಿ ಕೊನೆಗೆ ಗಲ್ಲಿಗೇರಿಸಲಾಯಿತು. ಇವರ ಅಧಿಕಾರಾವಧಿ 3 ವರ್ಷ, 10 ತಿಂಗಳು.
* ಮುಹಮ್ಮದ್ ಖಾನ್ ಜುನೇಜೊ: 1985 ಮಾರ್ಚ್ ತಿಂಗಳಲ್ಲಿ ಇವರು ಅಧಿಕಾರ ವಹಿಸಿಕೊಂಡರು. 1988ರ ಮೇ 29ರಂದು ಅಧ್ಯಕ್ಷರೂ ಆಗಿದ್ದ ಮಿಲಿಟರಿ ಮುಖ್ಯಸ್ಥರು ಇವರನ್ನು ಪ್ರಧಾನಿ ಸ್ಥಾನದಿಂದ ವಜಾಗೊಳಿಸಿದರು. ಇವರ ಅಧಿಕಾರಾವಧಿ 3 ವರ್ಷ 2 ತಿಂಗಳು.
* ಬೆನಜೀರ್ ಭುಟ್ಟೊ: ಕೊಲ್ಲಲ್ಪಟ್ಟ ಪ್ರಧಾನಿ ಜುಲ್ಫಿಕರ್ ಅಲಿ ಭುಟ್ಟೋ ಅವರ ಪುತ್ರಿ ಮತ್ತು ಮುಸ್ಲಿಂ ರಾಷ್ಟ್ರದ ಮೊದಲ ಮಹಿಳಾ ನಾಯಕಿ ಇವರಾಗಿದ್ದರು. 1988ರ ಡಿಸೆಂಬರ್ 2 ರಂದು ಅಧಿಕಾರ ವಹಿಸಿಕೊಂಡರು. ಅವರ ಸರ್ಕಾರವನ್ನು 1990ರ ಆಗಸ್ಟ್ 6 ರಂದು ಅಧ್ಯಕ್ಷರು ಭ್ರಷ್ಟಾಚಾರದ ಆರೋಪದ ಮೇಲೆ ವಜಾಗೊಳಿಸಿದರು. ಇವರ ಅಧಿಕಾರಾವಧಿ 1 ವರ್ಷ 8 ತಿಂಗಳು. ಇದನ್ನೂ ಓದಿ: ತಾಲಿಬಾನ್ ಆಡಳಿತಕ್ಕೆ 2 ವರ್ಷ – ಮಹಿಳೆಯರ ಮೇಲೆ ಹೇರಿದ ನಿರ್ಬಂಧಗಳೇನು?
* ಮಿಯಾನ್ ಮುಹಮ್ಮದ್ ನವಾಜ್ ಷರೀಫ್: ಇವರು 1990ರ ನವೆಂಬರ್ 6 ರಂದು ಅಧಿಕಾರ ವಹಿಸಿಕೊಂಡರು. ಅವರ ಸರ್ಕಾರವನ್ನು 1993ರ ಏಪ್ರಿಲ್ 18 ರಂದು ಭುಟ್ಟೋ ಅವರಂತೆಯೇ ಆರೋಪದ ಮೇಲೆ ಅಧ್ಯಕ್ಷರು ವಜಾಗೊಳಿಸಿದರು. ಅವರು ಕೆಲವು ವಾರಗಳ ನಂತರ ನ್ಯಾಯಾಲಯಗಳಿಂದ ನಿರ್ಧಾರವನ್ನು ರದ್ದುಗೊಳಿಸಿದರು ಮತ್ತು ತಮ್ಮ ಸ್ಥಾನಕ್ಕೆ ಮರಳಿದರು. ಆದರೆ ಮಿಲಿಟರಿಯೊಂದಿಗಿನ ಭಿನ್ನಾಭಿಪ್ರಾಯಗಳ ನಂತರ ಮತ್ತೆ ರಾಜೀನಾಮೆ ನೀಡಿದರು. ಇವರ ಅಧಿಕಾರಾವಧಿ 2 ವರ್ಷ ಮತ್ತು 7 ತಿಂಗಳು.
* ಬೆನಜೀರ್ ಭುಟ್ಟೊ: 1993ರ ಅಕ್ಟೋಬರ್ 19 ರಲ್ಲಿ ತನ್ನ 2ನೇ ಅವಧಿಗೆ ಅಧಿಕಾರಕ್ಕೆ ಮರಳಿದರು. 1996ರ ನವೆಂಬರ್ 5 ರಂದು ದುರಾಡಳಿತದ ಆರೋಪದ ಮೇಲೆ ಮತ್ತೊಮ್ಮೆ ಅಧ್ಯಕ್ಷರಿಂದ ವಜಾಗೊಳಿಸಲಾಯಿತು. ಅಧಿಕಾರಾವಧಿ 3 ವರ್ಷ.
* ನವಾಜ್ ಷರೀಫ್: ಇವರು 1997 ಫೆಬ್ರವರಿ 17 ರಂದು 2ನೇ ಬಾರಿಗೆ ಅಧಿಕಾರಕ್ಕೆ ಬಂದರು. ಬಳಿಕ ಇವರನ್ನು 1999ರ ಅಕ್ಟೋಬರ್ 12 ರಂದು ಮಿಲಿಟರಿ ದಂಗೆಯಿಂದ ಪದಚ್ಯುತಗೊಳಿಸಲಾಯಿತು. ಅಧಿಕಾರಾವಧಿ 2 ವರ್ಷ 8 ತಿಂಗಳು.
* ಮೀರ್ ಜಫರುಲ್ಲಾ ಖಾನ್ ಜಮಾಲಿ: 2002ರ ನವೆಂಬರ್‌ನಲ್ಲಿ ಮಿಲಿಟರಿ ಆಡಳಿತದ ಸಮಯದಲ್ಲಿ ಪ್ರಧಾನ ಮಂತ್ರಿಯಾಗಿ ಆಯ್ಕೆಯಾದರು. 2004ರ ಜೂನ್ 26 ರಂದು ಮಿಲಿಟರಿಯೊಂದಿಗೆ ಭಿನ್ನಾಭಿಪ್ರಾಯಗಳ ನಂತರ ಅವರು ರಾಜೀನಾಮೆ ನೀಡಿದರು. ಇವರ ಅಧಿಕಾರಾವಧಿ 1 ವರ್ಷ 7 ತಿಂಗಳು.
* ಯೂಸುಫ್ ರಜಾ ಗಿಲಾನಿ: ಇವರು 2008 ಮಾರ್ಚ್ 25 ರಂದು ಪ್ರಧಾನ ಮಂತ್ರಿಯಾಗಿ ಆಯ್ಕೆಯಾದರು. ನ್ಯಾಯಾಂಗ ನಿಂದನೆ ಆರೋಪದ ಮೇಲೆ 2012 ರಲ್ಲಿ ಪಾಕಿಸ್ತಾನದ ಸುಪ್ರೀಂ ಕೋರ್ಟ್ ಅವರನ್ನು ಅನರ್ಹಗೊಳಿಸಿತು. ಇವರ ಅಧಿಕಾರಾವಧಿ 4 ವರ್ಷ, 1 ತಿಂಗಳು.
* ನವಾಜ್ ಷರೀಫ್: 2013ರ ಜೂನ್ 5 ರಂದು 3 ಬಾರಿಗೆ ಪ್ರಧಾನ ಮಂತ್ರಿಯಾಗಿ ಆಯ್ಕೆಯಾದರು. 2017ರ ಜುಲೈ 28 ರಂದು ಆಸ್ತಿಯನ್ನು ಮರೆಮಾಚಿದ ಆರೋಪದ ಮೇಲೆ ಪಾಕಿಸ್ತಾನದ ಸುಪ್ರೀಂ ಕೋರ್ಟ್ ಅವರನ್ನು ವಜಾಗೊಳಿಸಿತು. ಅಧಿಕಾರಾವಧಿ 4 ವರ್ಷ, 2 ತಿಂಗಳು.
* ಇಮ್ರಾನ್ ಖಾನ್: 2018ರ ಆಗಸ್ಟ್ 18 ರಂದು ಪ್ರಧಾನ ಮಂತ್ರಿಯಾಗಿ ಆಯ್ಕೆಯಾದರು. 2022ರ ಏಪ್ರಿಲ್ 10 ರಂದು ವಿರೋಧ ಪಕ್ಷದಿಂದ ಅವಿಶ್ವಾಸ ನಿರ್ಣಯದ ಮೂಲಕ ಅಧಿಕಾರದಿಂದ ಕೆಳಗಿಳಿದರು. ಅಧಿಕಾರಾವಧಿ 3 ವರ್ಷ 7 ತಿಂಗಳು. ಇದನ್ನೂ ಓದಿ: ತಾಲಿಬಾನ್ ಉಗ್ರರಿಗೆ ಪಾಕ್ ಮೇಲೆ ಸಿಟ್ಯಾಕೆ?
Web Stories