ನವದೆಹಲಿ: ಕ್ರಿಮಿನಲ್ ಪಿತೂರಿ (Criminal Conspiracy) ಅಥವಾ ಐಪಿಸಿ 120 ಬಿ ಒಂದನ್ನೇ ಪರಿಗಣಿಸಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ (PMLA) ಅಡಿ ಪ್ರಕರಣ ದಾಖಲಿಸಬೇಡಿ ಎಂದು ಜಾರಿ ನಿರ್ದೇಶನಾಲಯದ (ED) ಮುಖ್ಯಸ್ಥ ರಾಹುಲ್ ನವೀನ್ ಅವರು ತಮ್ಮ ಸಿಬ್ಬಂದಿಗೆ ಆಂತರಿಕ ಸೂಚನೆ ನೀಡಿದ್ದಾರೆ ಎಂದು ವರದಿಯಾಗಿದೆ.
ಐಪಿಸಿ 120 ಬಿ ಅಡಿ ದಾಖಲಾದ ಪ್ರಕರಣವನ್ನು ಆಧಾರವಾಗಿಟ್ಟು PMLA ಅಡಿ ನಾವು ಕೇಸ್ ದಾಖಲಿಸಿದರೆ ಸುಪ್ರೀಂ ಕೋರ್ಟ್‌ನಲ್ಲಿ (Supreme Court) ಹಿನ್ನಡೆಯಾಗುತ್ತಿದೆ. ಹೀಗಾಗಿ ಅಗತ್ಯ ದಾಖಲೆಗಳನ್ನು ಇಟ್ಟುಕೊಂಡು ಪ್ರಕರಣಗಳನ್ನು ದಾಖಲಿಸಬೇಕು ಎಂದು ಹೇಳಿರುವುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಇನ್ನು ಮುಂದೆ 5, 8ನೇ ಕ್ಲಾಸ್‌ನಲ್ಲಿ ವಿದ್ಯಾರ್ಥಿಯನ್ನು ಫೇಲ್ ಮಾಡಬಹುದು
ಇಡಿ ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, ಪ್ರಕರಣಗಳಲ್ಲಿ ಕಠಿಣ ಕೆಲಸ ಮಾಡಿದ ನಂತರವೂ ನ್ಯಾಯಾಲಯದಲ್ಲಿ ಹಿನ್ನಡೆಯನ್ನು ಎದುರಿಸುವುದರಲ್ಲಿ ಯಾವುದೇ ಅರ್ಥವಿಲ್ಲ. ಐಪಿಸಿ ಸೆಕ್ಷನ್ 120 ಅನ್ನು PMLA ಅಡಿಯಲ್ಲಿ ಸ್ವತಂತ್ರ ಪೂರ್ವಾಪೇಕ್ಷಿತ ಅಪರಾಧವೆಂದು ಪರಿಗಣಿಸಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಕೋರ್ಟ್ ಏನು ಹೇಳಿದೆಯೋ ಅದು ಕಾನೂನು ಎಂದು ತಿಳಿಸಿದ್ದಾರೆ.
ಕರ್ನಾಟಕದ ಡಿಸಿಎಂ ಡಿಕೆ ಶಿವಕುಮಾರ್, ಛತ್ತೀಸ್‌ಗಢದ ಮಾಜಿ ಸಿಎಂ ಭೂಪೇಶ್ ಬಘೇಲ್ ಸೇರಿದಂತೆ ನಿವೃತ್ತ ಐಎಎಸ್ ಅಧಿಕಾರಿ ವಿರುದ್ಧದ ಪ್ರಕರಣಗಳನ್ನು ಇದೇ ಕಾರಣ ನೀಡಿ ಸುಪ್ರೀಂ ಕೋರ್ಟ್ ವಜಾಗೊಳಿಸಿತ್ತು. 120 ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂಬ ಮಾತ್ರಕ್ಕೆ ಊಹಿಸಿ ಅಕ್ರಮ ಹಣ ವರ್ಗಾವಣೆ ನಡೆದಿದೆ ಎನ್ನಲಾಗದು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿತ್ತು,
ಈಗ ಸಿಬಿಐ, ಪೊಲೀಸ್, ಐಟಿ ಇಲಾಖೆಯಲ್ಲಿ ದಾಖಲಾದ ಎಫ್‌ಐಆರ್ ಅನ್ನು ಆಧಾರವಾಗಿಟ್ಟುಕೊಂಡು ಇಡಿ ಪಿಎಂಎಲ್‌ಎ ಅಡಿ ಕೇಸ್ ದಾಖಲಿಸುತ್ತದೆ.
ಭ್ರಷ್ಟಾಚಾರ, ತೆರಿಗೆ ವಂಚನೆ ಮತ್ತು ವನ್ಯಜೀವಿ ಕಾಯ್ದೆಯ ಉಲ್ಲಂಘನೆಯವರೆಗಿನ ಸುಮಾರು 150 ಪ್ರಾಥಮಿಕ ಅಪರಾಧಗಳು ಪಿಎಂಎಲ್‌ಎ ಅಡಿ ಬರುತ್ತದೆ. ಐಪಿಸಿ ಸೆಕ್ಷನ್ 120B ಅನ್ನು ಭಾರತೀಯ ನ್ಯಾಯ ಸಂಹಿತಾದಲ್ಲಿ (BNS) ಸೆಕ್ಷನ್ 61 ಕ್ಕೆ ಬದಲಾಯಿಸಲಾಗಿದೆ.
2017ರಲ್ಲಿ ಶಿವಕುಮಾರ್ ಅವರಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿ ಶೋಧ ನಡೆಸಿತ್ತು. ಈ ವೇಳೆ ದೆಹಲಿಯ ವಿವಿಧ ಸ್ಥಳಗಳಲ್ಲಿ 8.59 ಕೋಟಿ ರೂ. ನಗದು ಹಣ ಸಿಕ್ಕಿತ್ತು. ಈ ಹಿನ್ನೆಲೆ ಜಾರಿ ನಿರ್ದೇಶನಾಲಯ ಡಿಕೆ ಶಿವಕುಮಾರ್ ವಿರುದ್ಧ ಐಪಿಸಿ ಸೆಕ್ಷನ್ 120 B ಅಡಿಯಲ್ಲಿ 2018ರಲ್ಲಿ ಪ್ರಕರಣವನ್ನು ದಾಖಲಿಸಿತ್ತು.