– ಫೋನ್ ಬಳಸದೆ ಬರಿ ನಗದು ವ್ಯವಹಾರ ಮಾಡ್ತಿದ್ದ ಹಂತಕ
– ಜೀವಾವಧಿ ಶಿಕ್ಷೆಗೆ ಗುರಿಯಾಗಿ ಪೆರೋಲ್ ಪಡೆದು ಪರಾರಿ
ನವದೆಹಲಿ: ಪತ್ನಿಯ (Wife) ಹತ್ಯೆ ಕೇಸ್‌ನಲ್ಲಿ ಶಿಕ್ಷೆಗೊಳಗಾಗಿ ಪೆರೋಲ್ ಮೇಲೆ ಹೊರಗೆ ಬಂದು ತಲೆಮರೆಸಿಕೊಂಡಿದ್ದ ಭಾರತೀಯ ಸೇನೆಯ (Indian Army) ಮಾಜಿ ಸೈನಿಕನನ್ನು 20 ವರ್ಷಗಳ ನಂತರ ದೆಹಲಿ (Delhi) ಪೊಲೀಸರು (Police) ಮಧ್ಯಪ್ರದೇಶದಲ್ಲಿ (Madhya Pradesh) ಬಂಧಿಸಿದ್ದಾರೆ.
ಬಂಧಿತನನ್ನು ಅನಿಲ್ ಕುಮಾರ್ ತಿವಾರಿ ಎಂದು ಗುರುತಿಸಲಾಗಿದೆ. ಆರೋಪಿ, 1989 ರಲ್ಲಿ ತನ್ನ ಪತ್ನಿಯನ್ನು ಬೆಂಕಿ ಹಚ್ಚಿ ಕೊಲೆಗೈದಿದ್ದ. ಆತನನ್ನು 1989ರ ಮೇ 31 ರಂದು ಬಂಧಿಸಲಾಗಿತ್ತು. ಬಳಿಕ ನ್ಯಾಯಾಲಯವು ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಆತ 2005ರ ನವೆಂಬರ್ 21ರಂದು ರಂದು ದೆಹಲಿ ಹೈಕೋರ್ಟ್‌ನಲ್ಲಿ ಪೆರೋಲ್ ಪಡೆದಿದ್ದ. ಬಳಿಕ ಆತ ಜೈಲಿಗೆ ವಾಪಸ್ ಆಗದೇ ತಲೆಮರೆಸಿಕೊಂಡಿದ್ದ.
ಪೊಲೀಸರು ಪತ್ತೆಹಚ್ಚಿದ್ದು ಹೇಗೆ?
ಇತ್ತೀಚೆಗೆ ದೆಹಲಿ ಅಪರಾಧ ವಿಭಾಗದ ತಂಡ ಪ್ರಯಾಗರಾಜ್‌ನಲ್ಲಿ ತಿವಾರಿ ಓಡಾಡಿದ್ದ ಬಗ್ಗೆ ಮಾಹಿತಿ ಕಲೆಹಾಕಿತ್ತು. ಇದೇ ಮಾಹಿತಿಯ ಆಧಾರದ ಮೇಲೆ, ತಂಡವು ಮಧ್ಯಪ್ರದೇಶದ ಸಿಧಿ ಜಿಲ್ಲೆಯ ಚುರ್ಹತ್ ಗ್ರಾಮದ ಮೇಲೆ ದಾಳಿ ನಡೆಸಿ ಬಂಧಿಸಿದೆ.
ಪೊಲೀಸರಿಗೆ ಆತ ಚಳ್ಳೆಹಣ್ಣು ತಿನ್ನಿಸಿದ್ದು ಹೇಗೆ?
ಅನಿಲ್ ತಿವಾರಿಗೆ ಪೊಲೀಸರು ತನ್ನನ್ನು ಹುಡುಕುತ್ತಿದ್ದಾರೆಂದು ತಿಳಿದಿತ್ತು. ಅದಕ್ಕಾಗಿ ಮೊಬೈಲ್ ಫೋನ್‌ನ್ನು ಆತ ಬಳಸುತ್ತಿರಲಿಲ್ಲ. ಅಲ್ಲದೇ ಅಡಗುತಾಣ ಮತ್ತು ಕೆಲಸದ ಸ್ಥಳವನ್ನು ನಿರಂತರವಾಗಿ ಬದಲಾಯಿಸುತ್ತಿದ್ದ. ಚಾಲಕನಾಗಿ ಕೆಲಸ ಮಾಡುತ್ತಿದ್ದು, ಎಲೆಕ್ಟ್ರಾನಿಕ್ ಪುರಾವೆಗಳು ಸಿಗದಂತೆ ಯಾವಾಗಲೂ ನಗದು ವ್ಯವಹಾರ ಮಾಡುತ್ತಿದ್ದ ಎಂದು ಆತ ಒಪ್ಪಿಕೊಂಡಿದ್ದಾನೆ. ಇನ್ನೂ ತಲೆಮರೆಸಿಕೊಂಡಿದ್ದ ಸಮಯದಲ್ಲಿ ಮತ್ತೊಂದು ಮದುವೆಯಾಗಿದ್ದು, ಈಗ ಆತನಿಗೆ ನಾಲ್ಕು ಮಕ್ಕಳಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅನಿಲ್ ತಿವಾರಿ 1986 ರಲ್ಲಿ ಭಾರತೀಯ ಸೇನೆಯ ಆರ್ಡನೆನ್ಸ್ ಕಾರ್ಪ್ಸ್ ಘಟಕಕ್ಕೆ ಚಾಲಕನಾಗಿ ಸೇರಿದ್ದ. ನ್ಯಾಯಾಲಯವು ಆತನನ್ನು ದೋಷಿ ಎಂದು ತೀರ್ಪು ನೀಡಿದ ಬಳಿ ಅವನನ್ನು ಸೈನ್ಯದಿಂದ ವಜಾಗೊಳಿಸಲಾಗಿತ್ತು.