ಸನಾ: ಕೇರಳ ನರ್ಸ್ ನಿಮಿಷಾ ಪ್ರಿಯಾಳನ್ನು (Nimisha Priya) ಕ್ಷಮಿಸಲು ಸಾಧ್ಯವಿಲ್ಲ ಎಂದು ಆಕೆಯಿಂದ ಕೊಲೆಯಾದ ವ್ಯಕ್ತಿಯ ಸಹೋದರ ಪ್ರತಿಕ್ರಿಯೆ ನೀಡಿದ್ದಾರೆ.
2017 ರಲ್ಲಿ ಕೇರಳದ ನರ್ಸ್ (Kerala Nurse) ನಿಮಿಷಾ ಪ್ರಿಯಾ ಅವರಿಂದ ತಲಾಲ್ ಅಬ್ದೋ ಮೆಹದಿ ಕೊಲೆಯಾಗಿದ್ದರು. ಪ್ರಕರಣ ಸಂಬಂಧ ಪ್ರಿಯಾಳಿಗೆ ಯೆಮನ್ ರಾಷ್ಟ್ರದ ಕೋರ್ಟ್ ಮರಣದಂಡನೆ ಶಿಕ್ಷೆ ವಿಧಿಸಿದೆ. ಈ ಸಂಬಂಧ ಕೊಲೆಯಾದ ವ್ಯಕ್ತಿಯ ಸಹೋದರ ಅಬ್ದೆಲ್ಫತ್ತಾ ಮೆಹದಿ ಪ್ರತಿಕ್ರಿಯಿಸಿದ್ದು, ಈ ಅಪರಾಧಕ್ಕೆ ಕ್ಷಮೆ ನೀಡಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದ್ದಾರೆ. ಇದನ್ನೂ ಓದಿ: ಯೆಮೆನ್‌ನಲ್ಲಿ ಮರಣದಂಡನೆಗೆ ಗುರಿಯಾಗಿರುವ ಕೇರಳ ನರ್ಸ್‌ಗೆ ಜು.16ಕ್ಕೆ ನೇಣು
ನಿಮಿಷಾ ಪ್ರಿಯಾಳನ್ನು ಗಲ್ಲಿಗೇರಿಸಬೇಕು ಎಂದು ಮೆಹದಿ ತಿಳಿಸಿದ್ದಾರೆ. ಶಿಕ್ಷೆಗೆ ಗುರಿಯಾಗಿರುವ ಮಹಿಳೆಯನ್ನು ಬಲಿಪಶು ಎಂಬಂತೆ ಬಾರತೀಯ ಮಾಧ್ಯಮಗಳು ಬಿಂಬಿಸುತ್ತಿರುವ ಬಗ್ಗೆ ನಮ್ಮ ಕುಟುಂಬ ತೀವ್ರ ಬೇಸರ ಹೊಂದಿದೆ ಎಂದು ಮೆಹದಿ ಹೇಳಿದ್ದಾರೆ.
ಜು.16 ರಂದು ನಿಮಿಷಾ ಪ್ರಿಯಾಳನ್ನು ಗಲ್ಲಿಗೇರಿಸಬೇಕಿತ್ತು. ಆದರೆ, ಮಾತುಕತೆಗಳ ದೀರ್ಘಾವಧಿಯ ನಂತರ, ಆಕೆಯ ಮರಣದಂಡನೆಯನ್ನು ಅಮಾನತಿನಲ್ಲಿ ಇರಿಸಲಾಗಿದೆ. ಸೌದಿ ಅರೇಬಿಯಾದಲ್ಲಿರುವ ಏಜೆನ್ಸಿಗಳು, ಭಾರತ ಸರ್ಕಾರ, ಯೆಮನ್‌ನ ಶೂರಾ ಕೌನ್ಸಿಲ್‌ನಲ್ಲಿರುವ ಸ್ನೇಹಿತರು, ಕೇರಳದ ಪ್ರಭಾವಿ ಸುನ್ನಿ ಮುಸ್ಲಿಂ ಧಾರ್ಮಿಕ ಗುರು ಕಾಂತಪುರಂ ಎಪಿ ಅಬೂಬಕರ್ ಮುಸ್ಲಿಯಾರ್ ಮಧ್ಯಪ್ರವೇಶದಿಂದ ಮುಂದಿನ ಆದೇಶದವರೆಗೆ ಮರಣದಂಡನೆಯನ್ನು ಮುಂದೂಡುವ ನಿರ್ಧಾರ ಕೈಗೊಳ್ಳಲಾಗಿದೆ. ಇದನ್ನೂ ಓದಿ: ಕೇರಳದ ನರ್ಸ್‌ಗೆ ಜು.16ರಂದು ಯೆಮೆನ್‌ನಲ್ಲಿ ನೇಣು; ಮರಣದಂಡನೆ ತಡೆಯಲು ಸಾಧ್ಯವಿಲ್ಲ – ಸುಪ್ರೀಂಗೆ ಕೇಂದ್ರ ಮಾಹಿತಿ
ಕೇರಳದ ನಿಮಿಷಾ ಪ್ರಿಯಾ ಅವರು 2017ರಲ್ಲಿ ಯೆಮನ್‌ನಲ್ಲಿ ತನ್ನ ಕ್ಲಿನಿಕ್ ಪಾಲುದಾರನಾಗಿದ್ದ ಅಲ್ಲಿನ ಪ್ರಜೆಯನ್ನು ಕೊಲೆ ಮಾಡಿದ ಆರೋಪ ಎದುರಿಸುತ್ತಿದ್ದಾರೆ. 2020ರಲ್ಲಿ ಕೆಳ ಹಂತದ ನ್ಯಾಯಾಲಯ ಪ್ರಿಯಾಳಿಗೆ ಮರಣ ದಂಡನೆ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿತ್ತು. ಪ್ರಿಯಾಳ ಮೇಲ್ಮನವಿಯನ್ನು ಅಲ್ಲಿನ ಸುಪ್ರೀಂ ಕೋರ್ಟ್ 2023ರಲ್ಲಿ ವಜಾ ಮಾಡಿತ್ತು.