-ಅಭಿವೃದ್ಧಿ ದೃಷ್ಟಿಯಿಂದ, ಸ್ವಾರ್ಥ ಬಿಟ್ಟು ಕಾಂಗ್ರೆಸ್‌ಗೆ ಬಂದಿದ್ದೇನೆ
-ದೇವೇಗೌಡರು ಭಾವನಾತ್ಮಕವಾಗಿ ನಾಟಕ ಮಾಡುತ್ತಾರೆ ಎಂದ ಸಿಪಿವೈ
ರಾಮನಗರ: ಕುಮಾರಸ್ವಾಮಿ ಅಧಿಕಾರದಲ್ಲಿದ್ದಾಗ ಯಾರನ್ನೂ ರಾಜಕೀಯವಾಗಿ ಬೆಳೆಸಿಲ್ಲ ಎಂದು ಕಾಂಗ್ರೆಸ್ (Congress) ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ (CP Yogeshwar) ಹೇಳಿದರು.
ಜಿಲ್ಲೆಯ ಚನ್ನಪಟ್ಟಣದ ತಿಟ್ಟಮಾರನಹಳ್ಳಿ ಗ್ರಾಮದಲ್ಲಿ ನಡೆದ ಕಾಂಗ್ರೆಸ್ ಸಮನ್ವಯ ಸಭೆಯಲ್ಲಿ ಭಾಗವಹಿಸಿದರು. ಕುಮಾರಸ್ವಾಮಿ (Kumaraswamy) ಅಧಿಕಾರದಲ್ಲಿದ್ದಾಗ ಯಾರನ್ನೂ ರಾಜಕೀಯವಾಗಿ ಬೆಳೆಸಿಲ್ಲ. ಇವರು `ಒಂದಗೆ ಉಂಡರು ಅವರೇಕಾಳು ತಿನ್ನಬೇಡ’ ಎನ್ನುವಂತಹ ಜನ. ಅವರು, ನಾನು ಪರಸ್ಪರ ವಿರೋಧ ಮಾಡಿಕೊಂಡೆ ಇಲ್ಲಿಯವರೆಗೂ ಬಂದಿದ್ದೀವಿ. ಮೈತ್ರಿಯಾದ ಮೂರ್ನಾಲ್ಕು ತಿಂಗಳಲ್ಲೇ ಅವರ ಸಹವಾಸ ಸಾಕು ಅನ್ನಿಸಿತ್ತು. ಯೋಗೇಶ್ವರ್ ಹಾಗೂ ಡಿಕೆಶಿ ಇಬ್ಬರು ಮೊದಲೇ ಮಾತನಾಡಿಕೊಂಡಿದ್ದರು ಎಂದು ಹೇಳುತ್ತಿದ್ದರು. ಆದರೆ ನಾನು ಕೊನೆ ಕ್ಷಣದವರೆಗೂ ಟಿಕೆಟ್‌ಗಾಗಿ ಕಾದೆ. ಆಗಲಿಲ್ಲ. ಅದಕ್ಕಾಗಿ ನಾನು ಕಾಂಗ್ರೆಸ್ ಸೇರ್ಪಡೆಯಾದೆ. ಹಿಂದೆ ಜೆಡಿಎಸ್-ಬಿಜೆಪಿ ಮೈತ್ರಿಗೆ ನಾನೇ ಕಾರಣನಾಗಿದ್ದೆ. ಈಗ ಅವರು ಎನ್‌ಡಿಎ ಲಾಭ ಪಡೆಯುತ್ತಿದ್ದರೆ ಅದಕ್ಕೆ ನಾನು ಕಾರಣ. ಅವರ ಭಾವ ಸಂಸದರಾಗಲು ನಾನು ಕಾರಣ ಎಂದರು.ಇದನ್ನೂ ಓದಿ: ಮಾಜಿ ಸಚಿವರಿಗೆ ಕಾಂಗ್ರೆಸ್ ನಾಯಕಿ ಹನಿಟ್ರ್ಯಾಪ್; 20 ಲಕ್ಷಕ್ಕೆ ಬೇಡಿಕೆಯಿಟ್ಟಿದ್ದ ಮಹಿಳೆ ಪೊಲೀಸರಿಗೆ ಲಾಕ್
ಕುಮಾರಸ್ವಾಮಿ ಎರಡು ಬಾರಿ ಸಿಎಂ ಆದ್ರೂ ಅಭಿವೃದ್ಧಿ ಮಾಡಿಲ್ಲ. ರಾಜಕೀಯ ಸಿದ್ದಾಂತ ಏನೇ ಇರಬಹುದು, ಅಭಿವೃದ್ಧಿ ವಿಚಾರದಲ್ಲಿ ಒಂದೇಯಾಗಿರುತ್ತದೆ. ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡಲಿಲ್ಲ. ಯಮೋಷನಲ್ ಆಗಿ ಜನರ ಹತ್ತಿರ ಬರುತ್ತಾರೆ. ಕಣ್ಣೀರು ಹಾಕುತ್ತಾರೆ, ಡ್ರಾಮ ಮಾಡುತ್ತಾರೆ. ದೇವೇಗೌಡರು ಬಂದೂ ಭಾವನಾತ್ಮಕವಾಗಿ ನಾಟಕ ಮಾಡುತ್ತಾರೆ. ಇದಕ್ಕೆಲ್ಲ ಜನರು ಮರುಳಾಗಬಾರದು ಎಂದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವಿತ್ತು. ಆದರೆ ನಾನು ಸೋಲನ್ನು ಅನುಭವಿಸಿದೆ. ಸೋಲು-ಗೆಲುವು ಏನೇ ಆದರೂ ತಾಲೂಕಿನ ಸಂಬಂಧ ಕಡಿದುಕೊಳ್ಳಲ್ಲ. ಯಾಕಂದ್ರೆ ನಾವು ಈ ಜಿಲ್ಲೆಯ ಜನ. ನಾನು ಹಾಗೂ ಡಿಕೆಶಿ ಒಂದೇ ಜಿಲ್ಲೆಯ ಮಕ್ಕಳು. ನನಗೆ ಹಾಗೂ ಡಿಕೆಶಿ ನಡುವೆ ಸುಧೀರ್ಘವಾದ ಸ್ನೇಹ ಇದೆ. ಹಳೇ ಬೇರು ಹೊಸ ಚಿಗುರು ಎಂಬಂತೆ ಕಾಂಗ್ರೆಸ್‌ಗೂ ನಮಗೂ ಸಂಬಂಧ ಇದೆ. ಇಂದು ಸಭೆಗೆ ಬಂದಿರುವ ಬಹುತೇಕ ಕಾರ್ಯಕರ್ತರ ಹೆಸರು ನನಗೆ ಗೊತ್ತಿದೆ. ರಾಜಕೀಯ ಪಕ್ವತೆ ಬಂದಾಗ ಕೆಲವೊಂದು ಬದಲಾವಣೆ ಆಗುತ್ತದೆ. ನಾವು ಸಾಕಷ್ಟು ಬೆಂದು ಹೋದ ಮೇಲೆ ರಾಜಕೀಯ ಸ್ಥಿರತೆ ಬಂದಿದೆ ಎಂದು ಹೇಳಿದರು.
ನಾನು ಹಾಗೂ ಸುರೇಶ್ ಕೆಲವು ಸಾರಿ ಮಾತನಾಡಿದ್ದೇವು. ಸೋಲು ಗೆಲುವಿನ ಬಗ್ಗೆ ಮಾತನಾಡುತ್ತಿದ್ದೇವು. ಬೂತ್ ಗೆದ್ದರೆ ತಾಲೂಕು ಗೆದ್ದಹಾಗೆಯೇ ಅರ್ಥ. ಇಬ್ಬರೂ ಒಂದಾಗುವ ಮೂಲಕ ತಾಲೂಕಿನ ಜನರ ಮನಸ್ಸು ಗೆಲ್ಲಬೇಕು. ಈ ಚುನಾವಣೆ ಗೆಲ್ಲಲು ಎಲ್ಲರೂ ಒಗ್ಗಟ್ಟಾಗಬೇಕು. ಇದು ನನ್ನ 10ನೇ ಚುನಾವಣೆ. ಬೇರೆ ಬೇರೆ ಚುನಾವಣೆಯಲ್ಲಿ, ಬೇರೆ ಬೇರೆ ಪಕ್ಷದಲ್ಲಿ ನಾನು ಗೆದ್ದಿದ್ದೇನೆ. ಕಾಂಗ್ರೆಸ್ ನಿಂದಲೇ ಎರಡು ಬಾರಿ ಗೆದ್ದಿದ್ದೇನೆ. ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ, ಸ್ವಾರ್ಥ ಬಿಟ್ಟು ಕಾಂಗ್ರೆಸ್‌ಗೆ ಬಂದಿದ್ದೇನೆ. ತಾಲೂಕಿನ ಅಭಿವೃದ್ಧಿಗಾಗಿ ಕಾಂಗ್ರೆಸ್ ಸೇರಿದ್ದೇನೆ ಎಂದು ತಿಳಿಸಿದರು.
ನನಗೂ ಕಾಂಗ್ರೆಸ್ ಕಾರ್ಯಕರ್ತರಿಗೂ ಯಾವುದೇ ಭಿನ್ನಾಭಿಪ್ರಾಯ ಇರಲಿಲ್ಲ. ಯಾವುದೇ ಕೇಸು, ಪೊಲೀಸು ಎಂದು ಹೋಗಿಲ್ಲ. ನನ್ನ ಬೆಂಬಲಿಗರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಒಟ್ಟಾಗಿ ಕೆಲಸ ಮಾಡಬೇಕು. ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ. ಸರ್ಕಾರದ ಅಭಿವೃದ್ಧಿ ಕೆಲಸಗಳು ಜನರ ಮನದಲ್ಲಿವೆ. ನಾನು ಗೆದ್ದು ಶಾಸಕನಾದ್ರೆ ಸರ್ಕಾರದ ಯೋಜನೆಗಳನ್ನ ಜನರಿಗೆ ತಲುಪಿಸಬಹುದು. ಹಾಗಾಗಿ ತಾಲೂಕಿನ ಜನ ನನ್ನನ್ನ ಗೆಲ್ಲಿಸಿಕೊಡಿ. ಭಿನ್ನಾಭಿಪ್ರಾಯ ಮರೆತು ಇಬ್ಬರೂ ಕೆಲಸ ಮಾಡೋಣ. ನಾನು ನಿಮ್ಮ ಹಳ್ಳಿ ಹಳ್ಳಿಗೆ ಬಂದು ಮಾತನಾಡ್ತೇನೆ ಎಂದು ಭರವಸೆ ನೀಡಿದರು.ಇದನ್ನೂ ಓದಿ: ಕಾರವಾರ | ದೇವಬಾಗ್ ಕಡಲ ತೀರದಲ್ಲಿ ನಟ ರಮೇಶ್ ಅರವಿಂದ್
ನಿಖಿಲ್ ಕುಮಾರಸ್ವಾಮಿ ಎನ್‌ಡಿಎ ಅಭ್ಯರ್ಥಿ ಆಗಿದ್ದಾರೆ. ಅವರೇ ಕಾರ್ಯಕರ್ತರ ಬಳಿ ಒತ್ತಾಯ ಮಾಡಿಸಿ ಟಿಕೆಟ್ ಕೊಟ್ಟಿದ್ದಾರೆ. ಅವರೇ ಬಸ್ ಮಾಡಿ ಕಾರ್ಯಕರ್ತರನ್ನ ಬೆಂಗಳೂರಿಗೆ ಕರೆಸಿ ಕೊಂಡು ನಾಟಕ ಮಾಡುತ್ತಿದ್ದಾರೆ. ಅದಕ್ಕೆ ಬೆಲೆ ಕೊಡಬೇಡಿ ಎಂದು ಹೇಳಿದರು.