ಬೆಳಗಾವಿ: ಗೋಹತ್ಯೆ (Cow Slaughter) ನಿಷೇಧ ಕಾಯ್ದೆ ರದ್ದು ಮಾಡಿದ್ರೆ ಹೋರಾಟ ಮಾಡುತ್ತೇವೆ ಎಂಬ ಬಿಜೆಪಿ (BJP) ನಾಯಕರ ಹೇಳಿಕೆ ವಿಚಾರಕ್ಕೆ ಶಾಸಕ ವಿನಯ್ ಕುಲಕರ್ಣಿ (Vinay Kulkarni) ಪ್ರತಿಕ್ರಿಯೆ ನೀಡಿದ್ದು ಬಿಜೆಪಿಯವರು ಯಾರೂ ಮನೆಯಲ್ಲಿ ಒಂದು ಆಕಳು ಕಟ್ಟಿಲ್ಲ, ಮಾತನಾಡುತ್ತಾರೆ ಅಷ್ಟೇ ಎಂದು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗೋಪೂಜೆ ಮಾಡುವಾಗ ಪ್ಲಾಸ್ಟಿಕ್ ಆಕಳು ಪೂಜೆ ಮಾಡ್ತಾರೆ. ಇಷ್ಟು ಮಾತನಾಡೋರು ಮನೆಯಲ್ಲಿ ಆಕಳು ಕಟ್ಟಿ ಪೂಜೆ ಮಾಡಲು ಹೇಳಿ. ಮನೆಯಲ್ಲಿ ನಾಲ್ಕು ಆಕಳು ಕಟ್ಟೋಕೆ ಹೇಳಿ ಎಂದು ಬಿಜೆಪಿ ನಾಯಕರಿಗೆ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಸವಾಲು ಹಾಕಿದರು.
ನಾವೆಲ್ಲ ಡೈರಿ ಫಾರ್ಮರ್ಸ್, ಇಡೀ ರಾಜ್ಯದಲ್ಲಿ ನಾನು ಅತಿ ಹೆಚ್ಚು ದನ ಸಾಕಿದವನು. ಉತ್ತರಪ್ರದೇಶ, ಗುಜರಾತ್, ಹರಿಯಾಣ, ಪಂಜಾಬ್‌ನಲ್ಲಿ ಗೋಹತ್ಯೆ ನಿಷೇಧ ಮಾಡಿದರು. ನನ್ನ ಬಳಿ 1,600 ಆಕಳು ಇವೆ. ಅರ್ಧ ಹೋರಿ, ಅರ್ಧ ಹಸು ಹುಟ್ಟುತ್ತವೆ. ಹೆಚ್‌ಎಫ್ ತಳಿಯ ಹೋರಿ ಏನು ಮಾಡಲು ಸಾಧ್ಯ? ಫ್ರೀ ಕೊಡುತ್ತೇವೆ ಎಂದರೂ ಯಾರೂ ತಗೊಳ್ಳಲ್ಲ. ಯಾರೂ ರೈತರು ಕೃಷಿ ಚಟುವಟಿಕೆಯಲ್ಲಿ ಎತ್ತು ಬಳಕೆ ಮಾಡುತ್ತಿಲ್ಲ. ಯಂತ್ರೋಪಕರಣ ಬಂದಿವೆ. ನಮಗೆ ಮೇವು ಸಿಗಲ್ಲ. ಇವರೆಲ್ಲ ಮಾತನಾಡಿ ಜನರ ದಾರಿ ತಪ್ಪಿಸಬಹುದು. ಪ್ರ‍್ಯಾಕ್ಟಿಕಲ್ ಆಗಿ ಸರ್ಕಾರ ಮೇವು ಕೊಡಿಸಿ ಕೊಡಲಿ ನೋಡೋಣ ಎಂದರು.
ದೇಶಿಯ ತಳಿ ಉಳಿಸಿಕೊಳ್ಳಲು, ಬೆಳೆಸಲು ಸರ್ಕಾರ ಯೋಜನೆ ಹಾಕಿ ಅವುಗಳಿಗೆ ರಕ್ಷಣೆ ಕೊಡಿ. ಹೆಚ್‌ಎಫ್ ವಿದೇಶಿ ತಳಿಗೆ ನಿರ್ಬಂಧ ಹೇರುತ್ತೇವೆ. ಯಾರಿಂದಾದರೂ ದುಡ್ಡು ಪಡೆದು ಗೋಶಾಲೆ ಮಾಡೋದು ಬೇರೆ. ಕೋಟಿ ಕೋಟಿ ಸಾಲ ಮಾಡಿ ಡೈರಿ ನಡೆಸುತ್ತಿರುತ್ತೇವೆ. ಆಕಳು ಗರ್ಭಧಾರಣೆ ಮಾಡದಿದ್ದರೆ ಅದನ್ನು ಇಟ್ಟುಕೊಂಡು ಏನು ಮಾಡಲಿ? ಗೋಹತ್ಯೆ ನಿಷೇಧ ಕಾಯ್ದೆ ತಿದ್ದುಪಡಿ ಆಗಲಿ, ಚರ್ಚೆ ಆಗಲಿ. ನಮ್ಮಂತಹ ರೈತರನ್ನು ಕರೆದು ಚರ್ಚೆ ಮಾಡಬೇಕು. ರಾಜಕಾರಣಿಗಳು, ಜಾತಿವಾದ ಮಾಡುವರನ್ನು ಕರೆಯುವ ಅವಶ್ಯಕತೆ ಇಲ್ಲ ಎಂದರು. ಇದನ್ನೂ ಓದಿ: ಸಚಿವ ವೆಂಕಟೇಶ್ ಯಾರ ಓಲೈಕೆಗೆ ಈ ಹೇಳಿಕೆ ನೀಡಿದ್ದಾರೆ : ಬೊಮ್ಮಾಯಿ ಪ್ರಶ್ನೆ
ದನ ಎಂದರೆ ಅವರಿಗೆ ಗೊತ್ತಿಲ್ಲ. ಅದಕ್ಕೆ ಕಾಲು ಎಷ್ಟು, ಹಾಲು ಎಲ್ಲಿಂದ ಬರುತ್ತೆ ಗೊತ್ತಿಲ್ಲ. ರೈತರನ್ನು ಕರೆಯಿರಿ, ಡೈರಿ ಫಾರ್ಮರ್ಸ್ ಕರೆದು ಚರ್ಚೆ ಮಾಡಬೇಕು. ಇದರಿಂದ ರೈತರಿಗೆ ಎಷ್ಟು ದೊಡ್ಡ ಹೊಡೆತ ಬಿದ್ದಿದೆ. ಕಾಲು ಮುರಿದ ಎತ್ತಿನಿಂದ ಕೃಷಿ ಕೆಲಸ ಮಾಡಲು ಆಗುತ್ತಾ? ಕೋವಿಡ್ ವೇಳೆ 7-8 ಕೋಟಿ ರೂ. ಲಾಸ್ ಆದ್ವಿ. ಯಾರಾದರೂ ಸಹಾಯ ಮಾಡಲು ಮುಂದೆ ಬಂದ್ರಾ? ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಯಾವನೂ ಬೇಕಾದರೂ ಡಿಬೇಟ್ ಕರೆದರೂ ಹೋಗಲು ನಾನು ಸಿದ್ಧನಿದ್ದೇನೆ ಎಂದು ವಿನಯ್ ಕುಲಕರ್ಣಿ ಹೇಳಿದರು. ಇದನ್ನೂ ಓದಿ: ಗೋಹತ್ಯೆ ನಿಷೇಧ ಕಾಯ್ದೆಯ ಬಗ್ಗೆ ಚರ್ಚಿಸಲು ಸದನವಿದೆ : ಸತೀಶ್ ಜಾರಕಿಹೊಳಿ