ಕೋಲಾರ: ನನಗೆ ಯಾರೂ ರಾಜೀನಾಮೆ ಕೊಟ್ಟಿಲ್ಲ. ರಾತ್ರಿಯಿಂದ ನಾನು ಮನೆಯಲ್ಲೇ ಇದ್ದೇನೆ. ನನ್ನನ್ನು ಯಾರೂ ಸಂಪರ್ಕ ಮಾಡಿಲ್ಲ. ಹೀಗಾಗಿ ಇದರ ಬಗ್ಗೆ ನನಗೆ ಗೊತ್ತಿಲ್ಲ ಎಂದು ಸ್ಪೀಕರ್ ರಮೇಶ್ ಕುಮಾರ್ ತಿಳಿಸಿದ್ದಾರೆ.
ಶಾಸಕ ಆನಂದ್ ಸಿಂಗ್ ರಾಜೀನಾಮೆ ಕುರಿತು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೂವರೆಗೂ ನನ್ನನ್ನು ಯಾರೂ ಸಂಪರ್ಕಿಸಿಲ್ಲ. 20 ಶಾಸಕರು ರಾಜೀನಾಮೆ ಬೇಕಾದ್ರೆ ಕೊಡಲಿ. ತಮ್ಮ ಪಿಎ ವಿಶಾಲಾಕ್ಷಿಗೆ ರಾಜೀನಾಮೆ ಕೊಟ್ಟಿರುವುದು ಗೊತ್ತಿಲ್ಲ. ಕಾಂಗ್ರೆಸ್ ಪಕ್ಷದಲ್ಲಾದ್ರೂ ರಾಜೀನಾಮೆ ಕೊಡಲಿ, ಬಿಜೆಪಿ ಪಕ್ಷದಿಂದ ಆದ್ರೂ ರಾಜೀನಾಮೆ ಕೊಡಲಿ. ನನಗೂ ಅದಕ್ಕೂ ಸಂಬಂಧವಿಲ್ಲ. 20 ಜನ ರಾಜೀನಾಮೆ ಕೊಟ್ಟರೂ ಪಡೆಯುವೆ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಒಟ್ಟಿನಲ್ಲಿ ಸಿಎಂ ಅಮೆರಿಕ ಪ್ರವಾಸಕ್ಕೆ ತೆರಳಿದ್ದು ರಾಜ್ಯದಲ್ಲಿ ದಿಢೀರ್ ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ. ಆಷಾಢದ ಮೊದಲ ದಿನವೇ ದೋಸ್ತಿ ಸರ್ಕಾರಕ್ಕೆ ಕಂಟಕ ಎದುರಾದಂತೆ ಕಾಣುತ್ತಿದೆ. ಹೊಸಪೇಟೆ ಶಾಸಕ ಆನಂದ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಬೆನ್ನಲ್ಲೇ ಒಟ್ಟು 10 ಶಾಸಕರು ರಾಜೀನಾಮೆಗೆ ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.
ಜಿಂದಾಲ್‍ಗೆ ಭೂಮಿ ನೀಡಿದ್ದನ್ನು ನೆಪವಾಗಿಟ್ಟುಕೊಂಡು ಶಾಸಕ ಸ್ಥಾನಕ್ಕೆ ಆನಂದ್ ಸಿಂಗ್ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ. ಈ ಮೂಲಕ ಕಾಂಗ್ರೆಸ್ ಸಂಖ್ಯಾಬಲ 78ಕ್ಕೆ ಕುಸಿದಿದೆ. ಇತ್ತ ಮೂರು ದಿನಗಳಿಂದ ರಮೇಶ್ ಜಾರಕಿಹೊಳಿಯವರು ಎಲ್ಲೂ ಕಾಣಿಸುತ್ತಿಲ್ಲ. ಗೋಕಾಕ್ ನಲ್ಲೂ ಇಲ್ಲ. ಬೆಂಗಳೂರಿನಲ್ಲೂ ಇಲ್ಲ. ಈ ಮೂಲಕ ಆಪರೇಷನ್ ಕಮಲಕ್ಕೆ ಮಹೂರ್ತ ಫಿಕ್ಸ್ ಮಾಡಿ ಗೌಪ್ಯ ಜಾಗಕ್ಕೆ ಹೋದ್ರಾ ಎಂಬ ಪ್ರಶ್ನೆ ಎದ್ದಿದೆ.