ಅಮರಾವತಿ: ವೈಕುಂಠ ಏಕಾದಶಿಗೂ ಮುನ್ನವೇ ತಿರುಪತಿಯಲ್ಲಿ (Tirupati) ಭಾರೀ ದುರಂತ ಸಂಭವಿಸಿದೆ. ಕಾಲ್ತುಳಿತಕ್ಕೆ (Tirupati Stampede) ಸಿಲುಕಿ 7 ಮಂದಿ ಸಾವನ್ನಪ್ಪಿದ್ದು, 60ಕ್ಕೂ ಅಧಿಕ ಭಕ್ತರು ಅಸ್ವಸ್ಥಗೊಂಡಿದ್ದಾರೆ. ಘಟನೆಯಲ್ಲಿ ಕರ್ನಾಟಕದ ಬಳ್ಳಾರಿ ಮೂಲದ ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿತ್ತು. ಆದರೆ ಬಳ್ಳಾರಿಯವರು ಯಾರೂ ಮೃತಪಟ್ಟಿಲ್ಲ ಎಂದು ಬಳ್ಳಾರಿ ಡಿ.ಸಿ ಪ್ರಶಾಂತ್ ಕುಮಾರ್ ಮಿಶ್ರಾ ತಿಳಿಸಿದ್ದಾರೆ.
ತಿರುಪತಿ ದೇಗುಲದ ಶ್ರೀನಿವಾಸಂ ಬಳಿ ಘಟನೆ ನಡೆದಿದ್ದು, ಮೂವರು ಮಹಿಳೆಯರು ಸೇರಿ 7 ಮಂದಿ ಭಕ್ತರು ಮೃತಪಟ್ಟಿದ್ದಾರೆ. ಇನ್ನು ಗಾಯಾಳುಗಳಿಗೆ ರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಮೃತರನ್ನು ಕೇರಳದ ನಿರ್ಮಲ (50), ವಿಶಾಖಪಟ್ಟಣಂನ ರಜನಿ (47), ವೈಜಾಗ್‌ನ ಲಾವಣ್ಯ (40), ವಿಶಾಖಪಟ್ಟಣಂನ ಶಾಂತಿ (30), ಸೇಲಂನ ಮಲ್ಲೀಕಾ (49) ಹಾಗೂ ನರಸಿಪಟ್ಟಣದ ನಾಯ್ಡು ಬಾಬು (59) ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ತಿರುಪತಿ ಕಾಲ್ತುಳಿತಕ್ಕೆ ಸಾವಿನ ಸಂಖ್ಯೆ 7ಕ್ಕೆ ಏರಿಕೆ – ಅಸ್ವಸ್ಥರ ಏರ್‌ಲಿಫ್ಟ್‌ಗೆ ಸಿಎಂ ಸೂಚನೆ
ಜನವರಿ 10 ರಿಂದ 14ರವರೆಗೆ ವೈಕುಂಠ ದ್ವಾರ ದರ್ಶನಕ್ಕೆ ಉಚಿತ ಟಿಕೆಟ್ ವಿತರಣೆ ಹಿನ್ನೆಲೆ ಟಿಕೆಟ್ ಪಡೆಯಲು ನೂಕುನುಗ್ಗಲು ಉಂಟಾಗಿದೆ. ಟಿಟಿಡಿಯಿಂದ ಒಟ್ಟು 7 ಲಕ್ಷ ಟಿಕೆಟ್ ವಿತರಣೆ ಕಾರ್ಯ ನಡೆಯುತ್ತಿತ್ತು. ಉಚಿತ ಟಿಕೆಟ್ ಪಡೆಯುವ ಸಲುವಾಗಿ ಸಾಗರೋಪಾದಿಯಲ್ಲಿ ಭಕ್ತರು ಕೌಂಟರ್ ಬಳಿ ಸೇರಿದ ಪರಿಣಾಮ ನೂಕುನುಗ್ಗಲು ಉಂಟಾಗಿ ಕಾಲ್ತುಳಿತ ಸಂಭವಿಸಿದೆ. ಇದನ್ನೂ ಓದಿ: ಬ್ಯಾಂಕ್‌ನಿಂದ ಸಾಲಕ್ಕೆ ಲಾರಿ ಜಪ್ತಿ – ಟೈರನ್ನೇ ಕದ್ದ ಅಧಿಕಾರಿಗಳು!?
ಇನ್ನು ತಿರುಪತಿಗೆ ಇಂದು ಮಧ್ಯಾಹ್ನ 12 ಗಂಟೆಗೆ ಸಿಎಂ ಚಂದ್ರಬಾಬು ನಾಯ್ಡು ಭೇಟಿ ನೀಡಲಿದ್ದು, ಮೃತ ಕುಟುಂಬಗಳಿಗೆ ಸಾಂತ್ವನ ಹೇಳಲಿದ್ದಾರೆ. ಅಲ್ಲದೇ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಲಿದ್ದಾರೆ. ಘಟನಾ ಸ್ಥಳಕ್ಕೂ ತೆರಳಿ ಮಾಹಿತಿ ಪಡೆಯಲಿದ್ದಾರೆ. ಇದನ್ನೂ ಓದಿ: ಕರ್ನಾಟಕ ನಕ್ಸಲ್ ಮುಕ್ತ ಆಗಿದೆ: ಸಿಎಂ