ಕೋಲ್ಕತ್ತಾ: ಆರ್‌ಜಿ ಕರ್ (RG Kar Case) ಆಸ್ಪತ್ರೆಯ ಟ್ರೈನಿ ವೈದ್ಯೆಯ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಸಂಜಯ್ ರಾಯ್‌ನ ತಾಯಿ ಮಾಲತಿ ರಾಯ್ ಭಾನುವಾರ ತಮ್ಮ ಮಗ ತಪ್ಪಿತಸ್ಥನಾಗಿದ್ದರೆ ಗಲ್ಲಿಗೆ ಏರಿಸಿದರೂ ಬೇಸರ ಇಲ್ಲ ಎಂದು ಹೇಳಿದ್ದಾರೆ.
ಸೀಲ್ಡಾ ನ್ಯಾಯಾಲಯವು (Court) ಸಂಜಯ್‌ನನ್ನು ದೋಷಿ ಎಂದು ತೀರ್ಪು ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಅವರು ಮಾಧ್ಯಮಗಳ ಜೊತೆ ಮಾತಾಡಿದ್ದಾರೆ. ಈ ವೇಳೆ, ನಾನು ಒಂಟಿಯಾಗಿದ್ದಾಗ ಅಳುತ್ತೇನೆ, ಆದರೆ ಅವನ ಶಿಕ್ಷೆಯನ್ನು ವಿಧಿ ಎಂದು ಸ್ವೀಕರಿಸುತ್ತೇನೆ. ಮಹಿಳೆಯಾಗಿ ಮತ್ತು ಮೂರು ಹೆಣ್ಣು ಮಕ್ಕಳ ತಾಯಿಯಾಗಿ, ನನ್ನ ಮಗಳಂತಿರುವ ಮಹಿಳಾ ವೈದ್ಯೆಯ ತಾಯಿಯ ಯಾತನೆ ಮತ್ತು ನೋವನ್ನು ನಾನು ಅನುಭವಿಸಬಲ್ಲೆ. ಅವನ ಅಪರಾಧವು ಕಾನೂನಿನ ದೃಷ್ಟಿಯಲ್ಲಿ ಸಾಬೀತಾಗಿರುವುದರಿಂದ ನನಗೆ ಯಾವುದೇ ಆಕ್ಷೇಪವಿಲ್ಲ ಎಂದಿದ್ದಾರೆ.
ನ್ಯಾಯಾಲಯದ ವಿಚಾರಣೆಯ ಸಮಯದಲ್ಲಿ, ಜೈಲಿನಲ್ಲಿ ಮಗನನ್ನು ಭೇಟಿಯಾಗಿದ್ದೀರಾ ಎಂಬ ಪ್ರಶ್ನೆಗೆ, ಇಲ್ಲ, ನಾನು ಏಕೆ ಭೇಟಿ ಮಾಡಬೇಕು? ಆರೋಪಗಳು ಸುಳ್ಳು ಎಂದು ಕಂಡುಬಂದಿದ್ದರೆ ನಾನು ಭೇಟಿ ಮಾಡಲು ಪ್ರಯತ್ನಿಸುತ್ತಿದ್ದೆ ಎಂದಿದ್ದಾರೆ.
ಸಂಜಯ್ ಸಹೋದರಿ ಪ್ರತಿಕ್ರಿಯಿಸಿ, ಅವನು ತಪ್ಪಿತಸ್ಥನೆಂದು ಸಾಬೀತಾದರೆ, ಕಾನೂನು ಅವನಿಗೆ ಶಿಕ್ಷೆ ನೀಡಲಿ. ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವುದಿಲ್ಲ ಎಂದಿದ್ದಾರೆ.
ಏನಿದು ಪ್ರಕರಣ?
ಕಳೆದ ಆಗಸ್ಟ್ 9ರಂದು ಬೆಳಗ್ಗೆ ಸ್ನಾತಕೋತ್ತರ ತರಬೇತಿ ನಿರತ ವೈದ್ಯೆಯ ಶವ ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ ಅತ್ಯಾಚಾರ ಮತ್ತು ಕೊಲೆಯಾದ ರೀತಿಯಲ್ಲಿ ಪತ್ತೆಯಾಗಿತ್ತು. ಬಳಿಕ ಕೃತ್ಯ ನಡೆಸಿದ್ದ ಆರೋಪಿ ಸಂಜಯ್‌ನನ್ನು ಪೊಲೀಸರು ಬಂಧಿಸಿದ್ದರು. ಅಶ್ಲೀಲ ವೀಡಿಯೋಗಳಿಗೆ ವ್ಯಸನಿಯಾಗಿದ್ದ ಸಂಜಯ್ ಕೊಲೆಯ ನಂತರ ಸಾಕ್ಷ್ಯ ನಾಶಪಡಿಸಲು ರಕ್ತಸಿಕ್ತ ಬಟ್ಟೆಯನ್ನು ತೊಳೆದಿದ್ದ ಎನ್ನುವುದನ್ನು ಪೊಲೀಸರು ಪತ್ತೆ ಮಾಡಿದ್ದರು. ಈ ಹಿಂದೆ ಪೊಲೀಸರಿಗೆ ಸೇವಕನಾಗಿದ್ದ ಈತ 4 ಮದುವೆಯಾಗಿದ್ದು, ಪತ್ನಿಯರಿಗೆ ಆಗಾಗ ಕಿರುಕುಳ ನೀಡುತ್ತಿದ್ದ ಎಂದು ತನಿಖೆಯಿಂದ ತಿಳಿದುಬಂದಿತ್ತು.