ದುಬೈ: ಬಾಗ್ಲಾದೇಶಕ್ಕೆ (Bangladesh) ನೈತಿಕ ಬೆಂಬಲ ನೀಡುವ ಸಲುವಾಗಿ ಟಿ20 ವಿಶ್ವಕಪ್ ಕ್ರಿಕೆಟ್ (T20 World Cup) ಬಹಿಷ್ಕಾರಕ್ಕೆ ಮುಂದಾಗಿರುವ ಪಾಕಿಸ್ತಾನಕ್ಕೆ ಐಸಿಸಿ (ICC) ದೊಡ್ಡ ಶಾಕ್ ನೀಡಲು ಮುಂದಾಗಿದೆ.
ಹೌದು. ಬಾಂಗ್ಲಾದೇಶದ ಮನವಿಯನ್ನು ಐಸಿಸಿ ತಿರಸ್ಕರಿಸಿದ ಬೆನ್ನಲ್ಲೇ ಈಗ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (PCB) ಟಿ20 ವಿಶ್ವಕಪ್ ಟೂರ್ನಿಯಾಡಲು ಶ್ರೀಲಂಕಾಗೆ ಆಗಮಿಸುವ ಬಗ್ಗೆ ಕ್ಯಾತೆ ತೆಗೆದಿದೆ.
ಬಾಂಗ್ಲಾದೇಶಕ್ಕೆ ನೈತಿಕ ಬೆಂಬಲ ನೀಡಲು ವಿಶ್ವಕಪ್‌ನಿಂದಲೇ ಹಿಂದೆ ಸರಿಯುವ ಬಗ್ಗೆ ಪಾಕಿಸ್ತಾನ (Pakistan) ಚರ್ಚೆ ನಡೆಸುತ್ತಿದೆ. ಇನ್ನು ಅಧಿಕೃತವಾಗಿ ಪಾಕಿಸ್ತಾನ ತನ್ನ ನಿರ್ಧಾರ ಪ್ರಕಟಿಸಿಲ್ಲ. ಆದರೆ ವಿದೇಶ ಪ್ರವಾಸದಲ್ಲಿರುವ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ದೇಶಕ್ಕೆ ಆಗಮಿಸಿದ ಬಳಿಕ ಮಹತ್ವದ ನಿರ್ಧಾರ ಪ್ರಕಟಿಸುವ ಸಾಧ್ಯತೆಯಿದೆ. ಒಂದು ವೇಳೆ ಪಾಕ್ ಆಡಲು ನಿರಾಕರಿಸಿದರೆ ಐಸಿಸಿ ಪಾಕಿಸ್ತಾನಕ್ಕೆ ಹಲವು ನಿರ್ಬಂಧ ವಿಧಿಸುವ ಸಾಧ್ಯತೆಯಿದೆ.
ಐಸಿಸಿ ಎಚ್ಚರಿಕೆ ಏನು?
ಎಲ್ಲಾ ದ್ವಿಪಕ್ಷೀಯ ಸರಣಿಗಳನ್ನು ಅಮಾನತು ಮಾಡುವ ಸಾಧ್ಯತೆಯಿದೆ. ಏಷ್ಯಾಕಪ್‌ನಿಂದ ಹೊರಗೆ ಇಡುವುದು. ಪಾಕಿಸ್ತಾನ ಸ್ಫೋರ್ಟ್ಸ್ ಲೀಗ್‌ನಲ್ಲಿ ಆಡಲು ತಡೆಯಲು ವಿದೇಶಿ ಆಟಗಾರಿಗೆ ಎಲ್ಲಾ ಬೋರ್ಡ್‌ಗಳು ಎನ್‌ಒಸಿ ನೀಡದೇ ಇರಲು ತೀರ್ಮಾನಿಸಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಟಿ20 ವಿಶ್ವಕಪ್: ಬಾಂಗ್ಲಾದೇಶ ಔಟ್, ಸ್ಕಾಟ್ಲೆಂಡ್ ಇನ್ – ಐಸಿಸಿಯಿಂದ ಅಧಿಕೃತ ಮಾಹಿತಿ
ಭಾರತದಲ್ಲಿ ಭದ್ರತಾ ಕಾರಣದಿಂದ ತನ್ನ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಿಸುವಂತೆ ಬಾಂಗ್ಲಾ ಕ್ರಿಕೆಟ್ ಮಂಡಳಿ ಪಟ್ಟು ಹಿಡಿದಿತ್ತು. ಆದರೆ ಐಸಿಸಿ ಈ ಮನವಿಯನ್ನು ತಿರಸ್ಕರಿಸಿತ್ತು. ಬಾಂಗ್ಲಾದ ಮನವಿಗೆ ಪಾಕಿಸ್ತಾನ ಬೆಂಬಲ ನೀಡಿತ್ತು. ಕೊನೆಯವರೆಗೂ ಪಟ್ಟು ಬಿಡದ ಕಾರಣ ಬಾಂಗ್ಲಾ ಜಾಗದಲ್ಲಿ ಸ್ಕಾಟ್ಲೆಂಡ್ ತಂಡಕ್ಕೆ ಐಸಿಸಿ ಅವಕಾಶ ಕಲ್ಪಿಸಿದೆ.
ಈಗ ಬಾಂಗ್ಲಾಗೆ ಬೆಂಬಲ ನೀಡಿದ್ದರಿಂದ ಪಾಕಿಸ್ತಾನ ಅಡಕತ್ತರಿಯಲ್ಲಿ ಸಿಲುಕಿದೆ. ಬಾಂಗ್ಲಾದಂತೆ ಟೂರ್ನಿಗೆ ಬಹಿಷ್ಕಾರ ಹಾಕಿದರೆ ಆರ್ಥಿಕವಾಗಿ ಪಾಕ್ ಕ್ರಿಕೆಟ್ ಬೋರ್ಡ್‌ಗೆ ಭಾರೀ ಹೊಡೆತ ಬೀಳಲಿದೆ. ಒಂದು ವೇಳೆ ಟೂರ್ನಿಯಲ್ಲಿ ಭಾಗವಹಿಸಿದರೆ ಬಾಂಗ್ಲಾಗೆ ಮೋಸ ಮಾಡಿದಂತಾಗುತ್ತದೆ. ಹೀಗಾಗಿ ಪಾಕ್ ನಿರ್ಧಾರ ಏನು ಎನ್ನುವುದೇ ಸದ್ಯದ ಕುತೂಹಲ.
ಪಾಕ್ ಹೇಳಿದ್ದೇನು?
ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪಿಸಿಬಿ ಅಧ್ಯಕ್ಷ, ಪಾಕ್ ಗೃಹ ಸಚಿವ ಮೊಹ್ಸಿನ್ ನಖ್ವಿ, ನಮ್ಮ ಪ್ರಧಾನಿ ಶೆಹಬಾಜ್ ಶರೀಫ್ ವಿದೇಶ ಪ್ರವಾಸದಲ್ಲಿದ್ದಾರೆ. ಅವರು ದೇಶಕ್ಕೆ ಮರಳಿದ ನಂತರ ನಾವು ಟಿ20 ವಿಶ್ವಕಪ್‌ನಲ್ಲಿ ಆಡಬೇಕೋ ಬೇಡವೋ ಎನ್ನುವುದನ್ನು ನಮ್ಮ ಸರ್ಕಾರ ನಿರ್ಧಾರ ಮಾಡುತ್ತದೆ. ವಿಶ್ವಕಪ್ ಆಡಲು ಹೋಗುವುದು ಬೇಡ ಎಂದು ಪ್ರಧಾನಿ ಹೇಳಿದರೆ ನಾವು ಹೋಗುವುದಿಲ್ಲ. ಸರ್ಕಾರದ ನಿರ್ಧಾರ ಅಂತಿಮ ಎಂದು ಹೇಳಿದರು.
ಒಂದು ದೇಶ ಕ್ರಿಕೆಟ್‌ನ್ನು ತನ್ನ ಹಿಡಿತದಲ್ಲಿ ಇಟ್ಟುಕೊಂಡಿದೆ. ಅದು ಹೇಳಿದಂತೆ ಐಸಿಸಿ ಕೇಳುತ್ತದೆ. ಭಾರತ ತಂಡ ಪಾಕಿಸ್ತಾನಕ್ಕೆ ಬರುವುದಿಲ್ಲ ಎಂದಾಗ ಸ್ಥಳವನ್ನೇ ಬದಲಾವಣೆ ಮಾಡಿದ ಐಸಿಸಿ ಬಾಂಗ್ಲಾಕ್ಕೂ ಅದೇ ವ್ಯವಸ್ಥೆ ಮಾಡಲಿಲ್ಲ ಯಾಕೆ ಎಂದು ಪ್ರಶ್ನಿಸಿದರು.


