ಮಂಗಳೂರು: ನಿಪಾ ವೈರಸ್ ಶಂಕಿತರಿಬ್ಬರ ತಪಾಸಣೆ ನಡೆಸಲಾಗಿದ್ದು ನಿಪಾ ಜ್ವರದ ಲಕ್ಷಣಗಳು ಕಂಡುಬಂದಿಲ್ಲ ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಸ್ಪಷ್ಟಪಡಿಸಿದ್ದಾರೆ.
ಮಂಗಳೂರಿನ ಇಬ್ಬರಲ್ಲಿ ಶಂಕಿತ ನಿಪಾ ಪ್ರಕರಣ ಪತ್ತೆಯಾಗಿತ್ತು. ಮಣಿಪಾಲದಲ್ಲಿ ಸೋಂಕು ಶಂಕಿತರಿಬ್ಬರ ತಪಾಸಣೆ ನಡೆಸಲಾಗಿದೆ. ಯಾವುದೇ ನಿಪಾ ಜ್ವರದ ಲಕ್ಷಣಗಳು ಕಂಡುಬಂದಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಜನರು ಭಯ ಪಡಬೇಕಾಗಿಲ್ಲ ಎಂದು ತಿಳಿಸಿದ್ದಾರೆ.
Advertisement
ದಕ್ಷಿಣ ಕನ್ನಡ ಜಿಲ್ಲೆಗೆ ನಿಪಾ ಜ್ವರ ಬರುವ ಸಾಧ್ಯತೆ ಕಡಿಮೆ. ಪ್ರಾಣಿಗಳು, ಪಕ್ಷಿಗಳು ಕಚ್ಚಿರುವ ಹಣ್ಣುಗಳನ್ನ ತಿನ್ನಬೇಡಿ. ನಿಪಾ ಸೋಂಕು ಗಾಳಿಯಲ್ಲಿ ಹರಡುವುದಿಲ್ಲ. ಸೋಂಕಿತ ವ್ಯಕ್ತಿಗಳ ಸಂಪರ್ಕದಿಂದ ಒಬ್ಬರಿಂದ ಇನ್ನೊಬ್ಬರಿಗೆ ಹರಡುವ ಸಾಧ್ಯತೆ ಹೆಚ್ಚಿದೆ ಎಚ್ಚರವಿರಲಿ. ನೆರವಿಗಾಗಿ 104 ಸಂಖ್ಯೆಗೆ ಕರೆ ಮಾಡಿ ಎಂದು ಆರೋಗ್ಯ ಇಲಾಖೆ ಪ್ರಕಟಿಸಿದೆ. ಇದನ್ನೂ ಓದಿ:ಬಾವಲಿ ಜ್ವರಕ್ಕೆ ಕರ್ನಾಟಕದಲ್ಲೂ ಹೈಅಲರ್ಟ್ – ಈ ಮಾಹಿತಿ ನಿಮಗೆ ಗೊತ್ತಿರಲಿ..!
Advertisement
ಕರ್ನಾಟಕದ ಪಕ್ಕದ ರಾಜ್ಯ ಕೇರಳದಲ್ಲಿ ಬಾವಲಿಗಳ ಮೂಲಕ ನಿಪಾ ವೈರಸ್ ಜ್ವರಕ್ಕೆ 16 ಮಂದಿ ಸಾವನ್ನಪ್ಪಿದ ಬೆನ್ನಲ್ಲೇ ರಾಜ್ಯದಲ್ಲಿ ಫುಲ್ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಕರ್ನಾಟಕದಲ್ಲೂ ನಿಪಾ ಭಯ ಕಾಡತೊಡಗಿದ್ದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ರಾಜ್ಯಾದ್ಯಂತ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗೆ ಸುತ್ತೋಲೆ ರವಾನೆಯಾಗಿದೆ. ಜ್ವರ, ವಾಂತಿ, ಸುಸ್ತು ಇಂತಹ ಲಕ್ಷಣ ಕಾಣಿಸಿಕೊಂಡ ರೋಗಿಗಳ ರಕ್ತ ಪರೀಕ್ಷೆಯ ಬಗ್ಗೆ ವಿಶೇಷ ಎಚ್ಚರಿಕೆ ವಹಿಸಲು ಸೂಚನೆ ನೀಡಲಾಗಿದೆ ಎಂದು ಆರೋಗ್ಯ ಮತ್ತು ಕುಟಂಬ ಕಲ್ಯಾಣ ಇಲಾಖೆಯ ಆದೇಶ ಹೊರಡಿಸಿದೆ.