– ಉಗ್ರರನ್ನು 2-3 ತಿಂಗಳಲ್ಲಿ ಗಲ್ಲಿಗೇರಿಸುವ ವ್ಯವಸ್ಥೆ ಜಾರಿಗೆ ಬರಬೇಕೆಂದು ತೌಫಿಕ್ ಒತ್ತಾಯ
ಮುಂಬೈ: ಉಗ್ರ ತಹವ್ವುರ್ ರಾಣಾಗೆ (Tahawwur Rana) ಯಾವುದೇ ವಿಶೇಷ ಸೌಲಭ್ಯ ಕೊಡಬಾರದು. ಆತನಿಗೆ ಬಿರಿಯಾನಿ (Biriyani) ನೀಡದಿರಿ ಎಂದು 26/11 ಮುಂಬೈ ಭಯೋತ್ಪಾದಕ ದಾಳಿಯಲ್ಲಿ (Mumbai Terror Attack) ಅನೇಕ ಜನರನ್ನು ರಕ್ಷಿಸಲು ನೆರವಾಗಿದ್ದ ಮುಂಬೈನ ಪ್ರಸಿದ್ಧ ಚಹಾ ಮಾರಾಟಗಾರ ಮೊಹಮ್ಮದ್ ತೌಫಿಕ್ ಒತ್ತಾಯಿಸಿದ್ದಾರೆ.
ಭಯೋತ್ಪಾದಕ ಅಜ್ಮಲ್ ಕಸಬ್‌ಗೆ ನೀಡಿದಂತೆಯೇ ಭಾರತವು ತಹವ್ವುರ್ ರಾಣಾಗೆ ಯಾವುದೇ ವಿಶೇಷ ಉಪಚಾರವನ್ನು ನೀಡಬಾರದು. ಪ್ರತ್ಯೇಕ ಸೆಲ್‌ನಂತಹ ವಿಶೇಷ ವ್ಯವಸ್ಥೆ ಕೂಡ ನೀಡಬಾರದು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಕೊನೆಗೂ ಭಾರತಕ್ಕೆ ಬಂದ ಮುಂಬೈ ದಾಳಿ ಉಗ್ರ ರಾಣಾ
ತಹವ್ವುರ್ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸುವ ಕುರಿತು ಮಾತನಾಡಿದ ತೌಫಿಕ್, ಭಾರತ ಅವನಿಗೆ ವಿಶೇಷ ಸೆಲ್ ಒದಗಿಸುವ ಅಗತ್ಯವಿಲ್ಲ. ಕಸಬ್‌ಗೆ ನೀಡಲಾದಂತಹ ಬಿರಿಯಾನಿ ಮತ್ತು ಸೌಲಭ್ಯ ಕೂಡ ಕೊಡಬಾರದು. ಭಯೋತ್ಪಾದಕರಿಗೆ ಪ್ರತ್ಯೇಕ ಕಾನೂನು ಇರಬೇಕು. ಉಗ್ರರನ್ನು 2-3 ತಿಂಗಳೊಳಗೆ ಗಲ್ಲಿಗೇರಿಸುವಂತಹ ವ್ಯವಸ್ಥೆ ಜಾರಿಯಲ್ಲಿರಬೇಕು ಎಂದು ತಿಳಿಸಿದ್ದಾರೆ.
ಮುಂಬೈ ದಾಳಿ ನಡೆದಾಗ ದಕ್ಷಿಣ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್‌ನಲ್ಲಿ ತೌಫಿಕ್ ಚಹಾ ಅಂಗಡಿ ಇಟ್ಟುಕೊಂಡಿದ್ದರು. ದಾಳಿ ಸಂದರ್ಭದಲ್ಲಿ ಅನೇಕ ಜನರನ್ನು ರಕ್ಷಿಸಲು ತೌಫಿಕ್ ನೆರವಾಗಿದ್ದರು. ಗಾಯಗೊಂಡವರನ್ನು ಆಸ್ಪತ್ರೆಗೆ ಕೊಂಡೊಯ್ಯಲು ಸಹಾಯ ಮಾಡಿದ್ದರು. ಇದನ್ನೂ ಓದಿ: ಮುಂಬೈ ದಾಳಿಕೋರ ರಾಣಾ ತನ್ನ ಪ್ರಜೆಯಲ್ಲ – ದಿಢೀರ್ ಪಾಕ್ ಸ್ಪಷ್ಟನೆ
166 ಅಮಾಯಕರ ಜೀವಗಳನ್ನು ಬಲಿತೆಗೆದುಕೊಂಡ 2008 ರ ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿರುವ ಆರೋಪವನ್ನು ರಾಣಾ ಎದುರಿಸುತ್ತಿದ್ದಾನೆ. ಅಮೆರಿಕವು ಉಗ್ರನನ್ನು ಭಾರತಕ್ಕೆ ಹಸ್ತಾಂತರಿಸಿದೆ.