ನವದೆಹಲಿ: ಇನ್ಮುಂದೆ ನಮ್ಮ ನೆರೆಯ ದೇಶಗಳಾದ ಭೂತಾನ್ ಹಾಗೂ ನೇಪಾಳಕ್ಕೆ ಪ್ರಯಾಣಿಸಲು 15 ವರ್ಷದೊಳಗಿನ ಮಕ್ಕಳಿಗೆ ಮತ್ತು 65 ವರ್ಷ ಮೇಲ್ಪಟ್ಟವರಿಗೆ ವಿಸಾದ ಅಗತ್ಯವಿಲ್ಲ, ಆಧಾರ್ ಕಾರ್ಡ್ ಇದ್ದರೆ ಸಾಕು ಎಂದು ಗೃಹ ಸಚಿವಾಲಯ ಮಾಹಿತಿ ನೀಡಿದೆ.
ಭಾರತೀಯರು ಪಾಸ್‍ಪೋರ್ಟ್ ಹೊಂದಿದ್ದರೆ, ಭಾರತ ಸರ್ಕಾರ ನೀಡಿದ ಫೋಟೋ ಗುರುತಿನ ಚೀಟಿ ಅಥವಾ ಚುನಾವಣಾ ಆಯೋಗ ನೀಡಿದ ಚುನಾವಣಾ ಗುರುತಿನ ಚೀಟಿ ಇದ್ದರೆ ವೀಸಾ ಬೇಕಾಗಿಲ್ಲ, ಹಾಗೆಯೇ ಈ ಎರಡು ದೇಶಗಳಿಗೆ ಹೋಗಬಹುದು ಎಂದು ಸಚಿವಾಲಯ ತಿಳಿಸಿದೆ.
ಮೊದಲೆಲ್ಲ 65 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು 15 ವರ್ಷದೊಳಗಿನವರು ನೇಪಾಳ ಮತ್ತು ಭೂತಾನ್‍ಗೆ ಹೋಗುವುದಕ್ಕೆ ಗುರುತು ಪರಿಶೀಲನೆಗಾಗಿ ಹಲವು ದಾಖಲೆಗಳನ್ನು ನೀಡಬೇಕಾಗಿತ್ತು. ಗುರುತಿಗಾಗಿ ಪಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಕೇಂದ್ರ ಸರ್ಕಾರದ ಆರೋಗ್ಯ ಸೇವೆ ಕಾರ್ಡ್ ಅಥವಾ ರೇಷನ್ ಕಾರ್ಡ್‍ನ್ನು ಮಾತ್ರ ಸಲ್ಲಿಸಲು ಅವಕಾಶವಿತ್ತು. ಆದರೆ ಆಧಾರ್ ಕಾರ್ಡ್‍ನ್ನು ಸಲ್ಲಿಸಲು ಅವಕಾಶವಿರಲಿಲ್ಲ.
ಆದರೆ ಇನ್ಮುಂದೆ ಹಾಗೆ ಆಗಲ್ಲ. ಯಾಕೆಂದರೆ ಆಧಾರ್ ಕಾರ್ಡ್ ಅನ್ನು ಕೂಡ ಗುರುತಿನ ದಾಖಲೆಗಳಾಗಿ ಪರಿಗಣಿಸಬಹುದು. ಅಲ್ಲದೆ ಪ್ರಯಾಣಿಕರು ಆಧಾರ್ ಕಾರ್ಡ್ ಅನ್ನು ಪ್ರಯಾಣ ದಾಖಲೆಯಾಗಿ ಬಳಸಿಕೊಳ್ಳಲು ಅನುಮತಿ ನೀಡಲಾಗಿದೆ ಎಂದು ಗೃಹ ಸಚಿವಾಲಯದ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅಷ್ಟೇ ಅಲ್ಲದೆ 15 ರಿಂದ 18 ವರ್ಷದೊಳಗಿನ ಯುವಕ-ಯುವತಿಯರಿಗೆ ಭಾರತ ಮತ್ತು ನೇಪಾಳಕ್ಕೆ ಪ್ರಯಾಣಿಸಲು ಶಾಲೆಯ ಪ್ರಾಂಶುಪಾಲರಿಂದ ಪಡೆದ ಗುರುತಿನ ಚೀಟಿಯನ್ನು ಬಳಸಬಹುದಾಗಿದೆ. ಹಾಗೆಯೇ ಒಂದೇ ಕುಟುಂಬ ಹಲವರು ಒಟ್ಟಾಗಿ ಪ್ರಯಾಣಿಸುವ ಸಂದರ್ಭದಲ್ಲಿ ಎಲ್ಲರಿಗೂ ಪಾಸ್‍ಪೋರ್ಟ್ ಅಥವಾ ಚುನಾವಣೆ ಐಡಿಗಳನ್ನು ತೋರಿಸುವ ಅಗತ್ಯವಿಲ್ಲ. ಬದಲಿಗೆ ಆ ಕುಟುಂಬಸ್ಥರಲ್ಲಿ ಹಿರಿಯರಾದವರು ಸರ್ಕಾರದಿಂದ ಮಾನ್ಯತೆ ಪಡೆದ ದಾಖಲೆಗಳನ್ನು ಹೊಂದಿದ್ದರೆ ಸಾಕು ಎಂದು ಗೃಹ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಹಾಗೆಯೇ ಭಾರತೀಯರು ಭೂತಾನ್‍ಗೆ ತೆರಳಲು ಅವರ ಬಳಿ 6 ತಿಂಗಳು ಅವಧಿ ಇರುವ ಭಾರತದ ಪಾಸ್‍ಪೋರ್ಟ್ ಅಥವಾ ಚುನಾವಣೆ ಐಡಿ ಇರಬೇಕು. ಪ್ರತಿ ದಿನವು ಭೂತಾನ್ ಹಾಗೂ ಭಾರತ ಗಡಿ ಭಾಗದಲ್ಲಿ 8 ರಿಂದ 10 ಸಾವಿರ ಕೂಲಿ ಕಾರ್ಮಿಕರು ಓಡಾಡುತ್ತಾರೆ. ಅಲ್ಲದೆ ನೇಪಾಳದಲ್ಲಿ ಸುಮಾರು 6 ಲಕ್ಷ ಭಾರತೀಯರು ವಾಸವಾಗಿದ್ದಾರೆ. ಆದರಿಂದ ಆಧಾರ್ ಕಾರ್ಡ್ ಅನ್ನು ಗುರುತಿನ ದಾಖಲೆಯಾಗಿ ಪರಿಗಣಿಸಲು ಗೃಹ ಸಚಿವಾಲಯ ನಿಯಮ ಜಾರಿಗೊಳಿಸಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv