ಮುಂಬೈ: ವಿರಾಟ್ ಕೊಹ್ಲಿ ನಾಯಕ ಸ್ಥಾನದಿಂದ ಇಳಿದ ಬಳಿಕ ಮುಂದಿನ ಟೀಂ ಇಂಡಿಯಾದ ಟೆಸ್ಟ್ ನಾಯಕ ಯಾರು ಎಂಬ ಅಭಿಮಾನಿಗಳ ಪ್ರಶ್ನೆಗೆ ಬಿಸಿಸಿಐ ಪ್ರತಿಕ್ರಿಯಿಸಿದೆ.
ಮಾಧ್ಯಮದ ಜೊತೆ ಮಾತನಾಡಿದ ಬಿಸಿಸಿಐನ ಉನ್ನತ ಅಧಿಕಾರಿಯೊಬ್ಬರು, ಮುಂದಿನ ಟೆಸ್ಟ್ ನಾಯಕನ ಹೆಸರನ್ನು ಆಯ್ಕೆ ಸಮಿತಿ ಶಿಫಾರಸು ಮಾಡುತ್ತದೆ ಮತ್ತು ಇನ್ನೂ ಯಾವುದೇ ಹೆಸರನ್ನು ಚರ್ಚಿಸಲಾಗಿಲ್ಲ ಎಂದು ಹೇಳಿದ್ದಾರೆ.
ಕೆಎಲ್ ರಾಹುಲ್ ಪ್ರಮುಖ ಆಯ್ಕೆಯಾಗಿದ್ದಾರೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅಧಿಕಾರಿ, ಆಯ್ಕೆದಾರರು ಎಲ್ಲಾ ಆಯ್ಕೆಗಳನ್ನು ಪರಿಶಿಲಿಸಿ ಅಂತಿಮವಾಗಿ ಶಿಫಾರಸು ಮಾಡುತ್ತಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕೊಹ್ಲಿ ನಾಯಕತ್ವ ತ್ಯಜಿಸಲು ಇದೇ ಕಾರಣ!
ರೋಹಿತ್ ಶರ್ಮಾ ಅವರು ತಂಡದ ನಿಯೋಜಿತ ಉಪನಾಯಕರಾಗಿದ್ದು, ವಿರಾಟ್ ಕೊಹ್ಲಿ ಬದಲಿಗೆ ಯಾರನ್ನು ಟೆಸ್ಟ್ ನಾಯಕರನ್ನಾಗಿ ಮಾಡಬೇಕೆಂದು ನಿರ್ಧರಿಸಲು ಸಾಕಷ್ಟು ಸಮಯ ಬೇಕು. ಬಿಸಿಸಿಐ ಆಯ್ಕೆ ಸಮಿತಿಯ ಸದಸ್ಯರು ಸರಿಯಾದ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.
ವಿರಾಟ್ ಕೊಹ್ಲಿ ಒಟ್ಟು 68 ಪಂದ್ಯಗಳಲ್ಲಿ ಟೀಂ ಇಂಡಿಯಾವನ್ನು ಮುನ್ನಡೆಸಿದ್ದರು. ಈ ಪೈಕಿ 40 ರಲ್ಲಿ ಜಯ, 11 ಪಂದ್ಯ ಡ್ರಾ, 17 ಪಂದ್ಯವನ್ನು ಭಾರತ ಸೋತಿತ್ತು. ಯಶಸ್ವಿ ನಾಯಕನಾಗಿ ತಂಡವನ್ನು ಮುನ್ನಡೆಸಿದ್ದ ಕಾರಣ ನೂತನ ನಾಯಕನ ಮುಂದೆ ಭಾರೀ ಸವಾಲಿದೆ. ಇದನ್ನೂ ಓದಿ: ಸರಿಯಾಗಿ ನೆನಪಿದೆ.. ನೀವು ಭಾರತದ ನಾಯಕರಾಗ್ತೀರಿ ಎಂದಿದ್ದು: ಅನುಷ್ಕಾ ಶರ್ಮಾ