– ವಕ್ಫ್ ಭೂಮಿಗಳಲ್ಲಿ 5 ಸ್ಟಾರ್ ಹೋಟೆಲ್, ಶೋ ರೂಂಗಳು ತಲೆಯೆತ್ತಿವೆ: ರವಿಶಂಕರ್ ಪ್ರಸಾದ್
ನವದೆಹಲಿ: ವಕ್ಫ್ ತಿದ್ದುಪಡಿ ಮಸೂದೆಗೆ (Waqf Amendment Bill) ಮುಸ್ಲಿಂ ಸಮುದಾಯ ವಿರೋಧ ವ್ಯಕ್ತಪಡಿಸುತ್ತಿರುವ ಬಗ್ಗೆ ಬಿಜೆಪಿ ಸಂಸದ ರವಿಶಂಕರ್ ಪ್ರಸಾದ್ (Ravi Shankar Prasad) ಪ್ರತಿಕ್ರಿಯೆ ನೀಡಿದ್ದಾರೆ. ಯಾವುದೇ ಮಸೀದಿ, ಪೂಜಾ ಸ್ಥಳ ಅಥವಾ ‘ಕಬ್ರಸ್ತಾನ್’ (ಸ್ಮಶಾನ) ಮುಟ್ಟುವುದಿಲ್ಲ ಎಂದು ಮಸೂದೆ ಕುರಿತು ಸ್ಪಷ್ಟಪಡಿಸಿದ್ದಾರೆ.
ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಅಂಗೀಕಾರಗೊಂಡಿರುವ ವಕ್ಫ್ (ತಿದ್ದುಪಡಿ) ಮಸೂದೆಯು ಮುಸ್ಲಿಂ ಸಮುದಾಯದ ಮಹಿಳೆಯರಿಗೆ ಪ್ರಯೋಜನವನ್ನು ನೀಡುತ್ತದೆ. ಪಾರದರ್ಶಕತೆಯನ್ನು ಖಚಿತಪಡಿಸುತ್ತದೆ ಎಂದು ಪ್ರಸಾದ್ ತಿಳಿಸಿದ್ದಾರೆ.
ವಿಷಯವು ತುಂಬಾ ಸರಳ ಮತ್ತು ನೇರವಾಗಿದೆ. ವಕ್ಫ್ ಅನ್ನು ರಚಿಸಿದ ‘ವಖಿಫ್’ನ ಉದ್ದೇಶವನ್ನು ವ್ಯವಸ್ಥಾಪಕರಾಗಿರುವ ‘ಮುತ್ತವಲಿ’ ಸರಿಯಾಗಿ ಕಾರ್ಯಗತಗೊಳಿಸುತ್ತಿದ್ದಾರೆಯೇ ಅಥವಾ ಇಲ್ಲವೇ ಎಂಬುದಷ್ಟೇ ಇದರ ಉದಾತ್ತ ಉದ್ದೇಶವಾಗಿದೆ. ವಕ್ಫ್ ಧಾರ್ಮಿಕ ಸಂಸ್ಥೆಯಲ್ಲ. ಅದು ಕಾನೂನುಬದ್ಧ ಅಥವಾ ಶಾಸನಬದ್ಧ ಸಂಸ್ಥೆಯಾಗಿದೆ. ‘ಮುತ್ತವಲಿ’ ಕೇವಲ ಸೂಪರಿಂಟೆಂಡೆಂಟ್ ಅಥವಾ ವ್ಯವಸ್ಥಾಪಕ. ಆಸ್ತಿಯ ಮೇಲೆ ಅವರಿಗೆ ಯಾವುದೇ ಹಕ್ಕುಗಳಿಲ್ಲ. ಏಕೆಂದರೆ ವಕ್ಫ್ ಅನ್ನು ರಚಿಸಿದ ನಂತರ, ಆಸ್ತಿ ಅಲ್ಲಾಹನದ್ದಾಗಿರುತ್ತದೆ. ಮಸೂದೆ ಮುಸ್ಲಿಂ ಮಹಿಳೆಯರಿಗೆ ಸಬಲೀಕರಣ ನೀಡುತ್ತದೆ. ವಿಧವೆಯರು ಮತ್ತು ಶೋಷಣೆಗೆ ಒಳಗಾದ ಜನತೆಗೆ ಸಹಕಾರಿಯಾಗಿದೆ ಎಂದು ಹೇಳಿದ್ದಾರೆ.
ನಾನು ಹುಟ್ಟಿದ ನಗರವಾದ ಪಾಟ್ನಾದ ಡಾಕ್ ಬಂಗಲೋ ಬಳಿಯ ಪ್ರದೇಶಗಳಲ್ಲಿ ಸಾಕಷ್ಟು ವಕ್ಫ್ ಭೂಮಿ ಇದೆ. ಆದರೆ ಅಲ್ಲಿ ಪಂಚತಾರಾ ಹೋಟೆಲ್‌ಗಳು ಮತ್ತು ಶೋ ರೂಂಗಳು ತಲೆ ಎತ್ತಿವೆ. ಭಾರತವು ವಿಶ್ವದಲ್ಲೇ ಅತಿ ಹೆಚ್ಚು ವಕ್ಫ್ ಆಸ್ತಿಗಳನ್ನು ಹೊಂದಿದೆ. ಅಲ್ಲಿ ಎಷ್ಟು ಆಸ್ಪತ್ರೆಗಳು, ವಿಶ್ವವಿದ್ಯಾಲಯಗಳು ಮತ್ತು ತರಬೇತಿ ಕೇಂದ್ರಗಳನ್ನು ನಿರ್ಮಿಸಲಾಗಿದೆ ಎಂದು ಪ್ರಶ್ನಿಸಿದ್ದಾರೆ.