ಇನ್ನು ಮುಂದೆ ಕಾರ್ಡ್ ಬೇಡ – UPI ಬಳಸಿ ATMನಿಂದ ಕ್ಯಾಶ್ ಪಡೆಯಬಹುದು

Public TV
2 Min Read
UPI ATM

ನವದೆಹಲಿ: ಮೊಬೈಲ್ ಸಾಧನಗಳ ಮೂಲಕ ತಕ್ಷಣವೇ ಹಣವನ್ನು ವರ್ಗಾವಣೆ ಮಾಡುವಲ್ಲಿ ಏಕೀಕೃತ ಪಾವತಿಗಳ ಇಂಟರ್‌ಫೇಸ್ (UPI) ದೇಶದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪಾವತಿ ವಿಧಾನವಾಗಿದೆ. ಇಲ್ಲಿಯವರೆಗೆ ಎಟಿಎಂ ಕಾರ್ಡ್‌ಗಳನ್ನು ಬಳಸಿ ಎಟಿಎಂನಿಂದ (ATM) ಹಣವನ್ನು ಪಡೆಯಬಹುದಿತ್ತು. ಇನ್ನು ಮುಂದೆ ಹಣ ವಿತ್‌ಡ್ರಾ ಮಾಡಲು ಡೆಬಿಟ್ ಕಾರ್ಡ್ ಅಗತ್ಯವಿರುವುದಿಲ್ಲ. ಕೇವಲ ಯುಪಿಐ ಬಳಸಿ ಎಟಿಎಂನ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದರಾಯ್ತು. ತಕ್ಷಣವೇ ಕ್ಯಾಶ್ ನಿಮ್ಮ ಕೈ ಸೇರುತ್ತದೆ.

ಮಂಗಳವಾರ ಮುಂಬೈನಲ್ಲಿ ನಡೆದ ಗ್ಲೋಬಲ್ ಫಿನ್‌ಟೆಕ್ (FinTech) ಫೆಸ್ಟ್‌ನಲ್ಲಿ ಈ ಕಾರ್ಡ್ ಬಳಕೆ ಮಾಡದೆ ಹಣವನ್ನು ತೆಗೆದುಕೊಳ್ಳುವ ‘ಯುಪಿಐ ಎಟಿಎಂ’ (UPI ATM) ಅನ್ನು ಮೊದಲ ಬಾರಿಗೆ ಪ್ರದರ್ಶಿಸಲಾಗಿದೆ. ಭಾರತದ ಮೊದಲ ಯುಪಿಐ ಎಟಿಎಂ ಇದಾಗಿದ್ದು, ಜನರು ಪ್ರತಿ ಬಾರಿ ಎಟಿಎಂ ಹೋದಾಗ ಕಾರ್ಡ್ ಅನ್ನು ಎತ್ತಿಕೊಂಡು ಹೋಗುವ ಅಗತ್ಯವನ್ನು ಕಡಿಮೆ ಮಾಡುತ್ತದೆ. ನೆಟ್ಟಿಗರು ಈ ಹೊಸ ಫೀಚರ್ ಅನ್ನು ‘ಗೇಮ್ ಚೇಂಜರ್’ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

UPI ATM 1

ಗುರುವಾರ ಕೇಂದ್ರ ಸಚಿವ ಪೀಯೂಷ್ ಗೋಯಲ್ ಮೈಕ್ರೋಬ್ಲಾಗಿಂಗ್ ಸೈಟ್ ಎಕ್ಸ್‌ನಲ್ಲಿ ಇದಕ್ಕೆ ಸಂಬಂಧಪಟ್ಟ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ವೀಡಿಯೋದಲ್ಲಿ ಫಿನ್‌ಟೆಕ್‌ನ ಪ್ರಭಾವಿ ರವಿಸುತಂಜನಿ ಅವರು ಯುಪಿಐ ಬಳಸಿ ಎಟಿಎಂನಿಂದ ಹಣವನ್ನು ಹೇಗೆ ಪಡೆದರು ಎಂಬುದನ್ನು ತೋರಿಸಿದ್ದಾರೆ. ಇದನ್ನೂ ಓದಿ: ಜಿ20 ಶೃಂಗಸಭೆಯಲ್ಲಿ ಭಗವದ್ಗೀತೆಯ ನೀತಿಗಳನ್ನು ಹರಡಲಿರುವ ಗೀತಾ ಅಪ್ಲಿಕೇಷನ್!

ವೀಡಿಯೋದಲ್ಲೇನಿದೆ?
ಮೂಲತಃ ವೀಡಿಯೋವನ್ನು ಪೋಸ್ಟ್ ಮಾಡಿರುವ ರವಿಸುತಂಜನಿ ಮೊದಲು ಎಟಿಎಂ ಪರದೆ ಮೇಲೆ ತೋರಿಸುವ ಯುಪಿಐ ಕಾರ್ಡ್‌ಲೆಸ್ ಕ್ಯಾಶ್ ಆಯ್ಕೆಯ ಮೇಲೆ ಕ್ಲಿಕ್ ಮಾಡುತ್ತಾರೆ. ನಂತರ ತಾವು ಪಡೆಯಲು ಬಯಸುವ ಮೊತ್ತವನ್ನು ನಮೂದಿಸುತ್ತಾರೆ. ಈ ವೇಳೆ ಎಟಿಎಂ ಸ್ಕ್ರೀನ್‌ನಲ್ಲಿ ಕ್ಯೂಆರ್ ಕೋಡ್ ಗೋಚರಿಸುತ್ತದೆ. ಬಳಿಕ ಅವರು ಭೀಮ್ ಆ್ಯಪ್ ಅನ್ನು ಬಳಸಿಕೊಂಡು ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡುತ್ತಾರೆ. ನಂತರ ತಮ್ಮ ಯುಪಿಐ ಪಿನ್ ಅನ್ನು ನಮೂದಿಸುತ್ತಾರೆ. ಇದಾದ ಬಳಿಕ ಅವರು ಹಣವನ್ನು ಸಂಗ್ರಹಿಸುತ್ತಾರೆ.

ರವಿಸುತಂಜನಿ ಅವರ ವೀಡಿಯೋವನ್ನು ಹಂಚಿಕೊಂಡಿರುವ ಗೋಯಲ್ ‘ಯುಪಿಐ ಎಟಿಎಂ: ಫಿನ್‌ಟೆಕ್‌ನ ಭವಿಷ್ಯ ಇಲ್ಲಿದೆ!’ ಎಂದು ಬರೆದಿದ್ದಾರೆ. ಈ ವಿಶೇಷ ಎಟಿಎಂ ಅನ್ನು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಅಭಿವೃದ್ಧಿಪಡಿಸಿದೆ. ಮತ್ತು ಎನ್‌ಸಿಆರ್ ಕಾರ್ಪೊರೇಷನ್ ನಡೆಸುತ್ತಿದೆ.

ಯುಪಿಐ ಎಟಿಎಂ ಸಾಮಾನ್ಯ ಎಟಿಎಂನಂತೆಯೇ ಕಾರ್ಯನಿರ್ವಹಿಸುತ್ತದೆ. ಅನುಮತಿಸಲಾದ ಉಚಿತ ಬಳಕೆಯ ಮಿತಿಯನ್ನು ಮೀರಿ ಹಣ ಪಡೆದುಕೊಂಡರೆ ಶುಲ್ಕ ಅನ್ವಿಯಿಸಬಹುದು. ಇದು ಪ್ರಸ್ತುತ ಭೀಮ್ ಯುಪಿಐ ಅಪ್ಲಿಕೇಶನ್‌ನಲ್ಲಿ ಮಾತ್ರ ಲಭ್ಯವಿದೆ. ಶೀಘ್ರವೇ ಗೂಗಲ್ ಪೇ, ಫೋನ್ ಪೇ ಹಾಗೂ ಪೇಟಿಎಂನಂತಹ ಇತರ ಅಪ್ಲಿಕೇಶನ್‌ಗಳಲ್ಲಿ ಬಳಕೆಗೆ ಬರುವ ಸಾಧ್ಯತೆಯಿದೆ. ಈ ಸೇವೆ ಇನ್ನು ಕೂಡಾ ಸಾರ್ವಜನಿಕವಾಗಿ ನಿಯೋಜಿಸಲಾಗಿಲ್ಲ. ಮುಂದೆ ಹಂತ ಹಂತವಾಗಿ ಹೊರತರುವ ಸಾಧ್ಯತೆಯಿದೆ. ಇದನ್ನೂ ಓದಿ: ಸರ್ಕಾರಿ ಅಧಿಕಾರಿಗಳಿಗೆ ಐಫೋನ್ ನಿಷೇಧಿಸಿದ ಚೀನಾ

Web Stories

Share This Article