ಇಸ್ಲಾಮಾಬಾದ್: ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು (ICC Champions Trophy) ಆಯೋಜಿಸಿ ಪಾಕಿಸ್ತಾನ (Pakistan) 85 ಮಿಲಿಯನ್ ಡಾಲರ್ (ಅಂದಾಜು 869 ಕೋಟಿ ರೂ.) ನಷ್ಟ ಅನುಭವಿಸಿದೆ ಎಂದು ವರದಿಯಾಗಿದೆ.
ಚಾಂಪಿಯನ್ಸ್ ಟ್ರೋಫಿಗಾಗಿ ಸಾಲ ಮಾಡಿ ಮೈದಾನವನ್ನು ನವೀಕರಿಸಿದ್ದ ಪಾಕಿಸ್ತಾನ ಈಗ ಟೂರ್ನಿ ಆಯೋಜಿಸಿ ಭಾರೀ ಸಂಕಷ್ಟಕ್ಕೆ ತುತ್ತಾಗಿದೆ.
ಪಾಕಿಸ್ತಾನ ಕಳೆದ 29 ವರ್ಷಗಳಿಂದ ಯಾವುದೇ ಐಸಿಸಿ ಕೂಟವನ್ನು ಆಯೋಜಿಸಿರಲಿಲ್ಲ. 2021 ರಲ್ಲಿ ಚಾಂಪಿಯನ್ಸ್ ಟ್ರೋಫಿ ಆಯೋಜಿಸುವ ಹಕ್ಕನ್ನು ಪಾಕಿಸ್ತಾನ ಪಡೆದುಕೊಂಡಿತ್ತು.
ಚಾಂಪಿಯನ್ಸ್ ಟ್ರೋಫಿಗಾಗಿ ಲಾಹೋರ್, ಕರಾಚಿ ಮತ್ತು ರಾವಲ್ಪಿಂಡಿ ಕ್ರೀಡಾಂಗಣಗಳನ್ನು ನವೀಕರಿಸಿತ್ತು. ಈ ನವೀಕರಣಕ್ಕೆ ಆರಂಭದಲ್ಲಿ 383 ಕೋಟಿ ರೂ. ಬಜೆಟ್ ಮಾಡಿತ್ತು. ಆದರೆ ನಿರೀಕ್ಷೆ ಮೀರಿ 178 ಕೋಟಿ ರೂ. ಏರಿಕೆಯಾದ ಕಾರಣ ಬಜೆಟ್ 561 ಕೋಟಿ ರೂ.ಗೆ ತಲುಪಿತು. ಇಷ್ಟೇ ಅಲ್ಲದೇ ಇತರ ಸಿದ್ಧತೆಗಳಿಗಾಗಿ ಇನ್ನೂ 347 ಕೋಟಿ ರೂ. ಖರ್ಚು ಮಾಡಿತ್ತು.
ಟೂರ್ನಿಯಲ್ಲಿ ಕೇವಲ ಒಂದೇ ಒಂದು ಪಂದ್ಯವನ್ನು ಪಾಕಿಸ್ತಾನ ತವರಿನಲ್ಲಿ ಆಡಿತ್ತು. ನ್ಯೂಜಿಲೆಂಡ್ ವಿರುದ್ಧದ ಪಂದ್ಯ ಸೋತಿದ್ದರೆ ಬಾಂಗ್ಲಾದೇಶದೊಂದಿಗಿನ ಪಂದ್ಯ ಮಳೆಯಿಂದ ರದ್ದಾಗಿತ್ತು. ಇನ್ನು ಭಾರತದ (Team India) ಎಲ್ಲಾ ಪಂದ್ಯಗಳು ದುಬೈನಲ್ಲಿ (Dubai) ನಡೆದಿತ್ತು. ಭಾರತದ ಜೊತೆಗಿನ ಪಂದ್ಯದಲ್ಲೂ ಪಾಕಿಸ್ತಾನ ಸೋತಿತ್ತು. ಇದನ್ನೂ ಓದಿ: ಜಿಯೋ ಗ್ರಾಹಕರಿಗೆ ಮಾತ್ರ ಐಪಿಎಲ್ ವೀಕ್ಷಣೆ ಉಚಿತ! – ಎಷ್ಟು ರಿಚಾರ್ಜ್ ಮಾಡಿದ್ರೆ ಫ್ರೀ?
ಐಸಿಸಿಗೆ ಹೆಚ್ಚು ಆದಾಯ ಬರುವುದೇ ಭಾರತದ ಪಂದ್ಯದಿಂದ. ಭಾರತದ ಪಂದ್ಯಗಳು ದುಬೈನಲ್ಲಿ ನಡೆದ ಕಾರಣ ಪಾಕಿಸ್ತಾನಕ್ಕೆ ಬಲವಾದ ಪೆಟ್ಟು ಬಿದ್ದಿತ್ತು. ಇದರ ಜೊತೆ ಪಾಕ್ ಲೀಗ್‌ನಲ್ಲಿ ಹೊರ ಬಿದ್ದ ಕಾರಣ ಪ್ರೇಕ್ಷಕರು ಪಂದ್ಯ ವೀಕ್ಷಿಸಲು ಮೈದಾನಕ್ಕೆ ಬರಲಿಲ್ಲ. ಟಿಕೆಟ್ ಮಾರಾಟ ಮತ್ತು ಹೋಸ್ಟಿಂಗ್ ಹಕ್ಕುಗಳಿಂದ ಪಾಕಿಸ್ತಾನ ಕೇವಲ 52 ಕೋಟಿ ರೂ. ಗಳಿಸಿದೆ ಎಂದು ವರದಿಯಾಗಿದೆ.
ಈ ನಷ್ಟವನ್ನು ತುಂಬಲು ಪಾಕಿಸ್ತಾನ ಈಗ ಹಲವು ಕ್ರಮಗಳನ್ನು ಕೈಗೊಂಡಿದೆ. ರಾಷ್ಟ್ರೀಯ T20 ಚಾಂಪಿಯನ್‌ಶಿಪ್‌ಗಾಗಿ ಪಂದ್ಯ ಶುಲ್ಕವನ್ನು 90% ರಷ್ಟು ಕಡಿಮೆ ಮಾಡಲು ಮತ್ತು ಮೀಸಲು ಆಟಗಾರರ ಪಾವತಿಗಳನ್ನು 87.5% ರಷ್ಟು ಕಡಿಮೆ ಮಾಡಲು ಆಡಳಿತ ಮಂಡಳಿ ನಿರ್ಧರಿಸಿದೆ.
ಆಟಗಾರರಿಗೆ 5 ಸ್ಟಾರ್ ವಸತಿ ಸೌಕರ್ಯಗಳನ್ನು ನೀಡಲಾಗುತ್ತಿತ್ತು. ಇನ್ನು ಮುಂದೆ ಎಕಾನಮಿ ದರ್ಜೆಯ ಹೋಟೆಲ್‌ನಲ್ಲಿ ಆಟಗಾರರು ತಂಗಬೇಕಾಗುತ್ತದೆ. ಅಷ್ಟೇ ಅಲ್ಲದೇ ಮುಂದಿನ ಕ್ರಿಕೆಟ್ ಪಂದ್ಯಗಳ ಟಿಕೆಟ್ ಬೆಲೆಯನ್ನು ಎರಡು ಪಟ್ಟು ಹೆಚ್ಚಿಲು ಚಿಂತನೆ ನಡೆಸಿದೆ.