ಬೆಂಗಳೂರು: ಇಂದಿರಾ ಕ್ಯಾಂಟೀನ್ ನಡೆಸಲು ದುಡ್ಡಿಲ್ಲ, ಮುಚ್ಚುವ ಹಂತ ತಲುಪಿವೆ ಎಂದು ಸ್ವತಃ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಹೇಳಿದ್ದಾರೆ.
ಇಂದು ನಡೆದ ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ಈ ಕುರಿತು ಉತ್ತರಿಸಿದ ಅವರು, ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 173 ಇಂದಿರಾ ಕ್ಯಾಂಟೀನ್, 18 ಮೊಬೈಲ್ ಕ್ಯಾಂಟಿನ್ ಇವೆ. 14.40 ಕೋಟಿ ಜನ ಈವರೆಗೆ ಊಟ ಮಾಡಿದ್ದಾರೆ. ಈ ಹಿಂದೆ ರಾಜ್ಯ ಸರ್ಕಾರ ಘೋಷಣೆ ಮಾಡಿ ಹಣ ಬಿಡುಗಡೆ ಮಾಡಿತ್ತು. ವಿವಿಧ ಕಾಮಗಾರಿಗೆ ಹೆಚ್ಚುವರಿಯಾಗಿ 24.37 ಕೋಟಿ ರೂ. ಖರ್ಚಾಗಿದೆ. ರಾಜ್ಯ ಸರ್ಕಾರ 15 ಕೋಟಿ ಮಾತ್ರ ಬಿಡುಗಡೆ ಮಾಡಿತು ಎಂದು ತಿಳಿಸಿದ್ದಾರೆ.
Advertisement
Advertisement
2019-20 ರ ಸಾಲಿನ ಬಜೆಟ್ ನಲ್ಲಿ 210 ಕೋಟಿ ರೂ. ಅನುದಾನ ಮೀಸಲಿಡುವಂತೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದೆ. ಆದರೆ ರಾಜ್ಯ ಸರ್ಕಾರ ಇಂದಿರಾ ಕ್ಯಾಂಟೀನಿಗೆ ಯಾವುದೇ ಹಣ ಮೀಸಲಿಡಲಿಲ್ಲ. ಎರಡು ಮತ್ತು ಮೂರನೇ ಪತ್ರವನ್ನು ಕೂಡ ಬರೆದಿದ್ದೆ. ಇವತ್ತಿಗೂ ಸರ್ಕಾರವಾಗಲಿ, ಪಾಲಿಕೆಯಲ್ಲಾಗಲಿ ಹಣ ಮೀಸಲಿಟ್ಟಿಲ್ಲ. ಇದೀಗ ಮುಚ್ಚುವ ಪರಿಸ್ಥಿತಿ ಬಂದಿದ್ದು, ನೀವು ಚರ್ಚಿಸಿ ನಿರ್ಧಾರ ಮಾಡಿ ಎಂದು ಬಿಬಿಎಂಪಿ ಸದಸ್ಯರ ಮುಂದೆ ವಿವರಿಸಿದರು.
Advertisement
ಆಯುಕ್ತರ ಈ ಹೇಳಿಕೆಯಿಂದ ಇಂದಿರಾ ಕ್ಯಾಟೀನ್ ಭವಿಷ್ಯ ಮುಂದಿನ 15 ದಿನಗಳಲ್ಲಿ ನಿರ್ಧಾರವಾಗಲಿದೆ. ಈ ಸುದ್ದಿ ಹೊರ ಬೀಳುತ್ತಲೇ ಕಾಂಗ್ರೆಸ್ ನಾಯಕರು ಕೆಂಡಾಮಂಡಲರಾಗಿದ್ದು, ಬಿಜೆಪಿ ಇಂದಿರಾ ಮುಚ್ಚಲು ಮುಂದಾದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು ಎಚ್ಚರಿಕೆ ನೀಡಿದ್ದಾರೆ.
Advertisement
ಇಂದಿರಾ ಕ್ಯಾಂಟೀನ್ ಕಟ್ಟಡ ಹಾಗೂ ಗ್ರಾಹಕರ ಸಂಖ್ಯೆಯಲ್ಲಿ ಗೋಲ್ ಮಾಲ್ ನಡೆದಿದೆ ಎಂದು ಪಬ್ಲಿಕ್ ಟಿವಿ ವರದಿ ಮೂಲಕ ಬೆಳಕು ಚೆಲ್ಲಿತ್ತು. ಅಕ್ರಮದ ವಾಸನೆ ಕೇಳಿ ಬಂದ ಹಿನ್ನೆಲೆಯಲ್ಲಿ ಸರ್ಕಾರ ತನಿಖೆಗೆ ಆದೇಶ ನೀಡಿದೆ.