ಬೆಂಗಳೂರು: ಜಯನಗರಕ್ಕೆ ಅನುದಾನ ಸ್ಥಗಿತಗೊಳಿಸಿದ ಹಿನ್ನೆಲೆಯಲ್ಲಿ ಅಲ್ಲಿ ವಾಸವಿರುವ ಸೆಲೆಬ್ರಿಟಿಗಳು ಹಾಗೂ ರಾಜಕಾರಣಿಗಳು ಅನುದಾನ ನೀಡುವಂತೆ ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ಅವರಿಗೆ ಮನವಿ ಮಾಡಿದ್ದಾರೆ.
ಸಹೋದರ ಡಿಕೆ ಶಿವಕುಮಾರ್ ಅವರೇ ದಯಮಾಡಿ ಅನುದಾನ ಕೊಡಿ. ರಾಮಮೂರ್ತಿ ಅವರು ಹೊಸದಾಗಿ ಶಾಸಕರಾಗಿದ್ದಾರೆ. ಕೆಲಸ ಮಾಡೋ ಉತ್ಸಾಹ ಇದೆ ಅನುದಾನ ಕೊಡಿ ಅಂತ ನಟಿ ತಾರಾ (Tara Anuradha) ಮನವಿ ಮಾಡಿದ್ದಾರೆ. ನಟ ಅನಿರುದ್ಧ ಕೂಡ ಜಯನಗರ ಕ್ಷೇತ್ರ ಅಭಿವೃದ್ಧಿಯಲ್ಲಿ ಹಿಂದೆ ಇದೆ, ಅನುದಾನ ಕೊಡಿ ಅಭಿವೃದ್ಧಿ ಕಾರ್ಯಗಳ ಆಗಲಿ ಎಂದು ಕೋರಿದ್ದಾರೆ.
ಇನ್ನೂ ನಟ ಅನಿರುದ್ಧ (Anirudh Jatkar) ಮಾತನಾಡಿ, ರಾಜಕೀಯ ಏನೇ ಇರಲಿ ಅನುದಾನ ಕೊಟ್ರೆ ಅಭಿವೃದ್ಧಿ ಕಾರ್ಯಗಳು ಆಗ್ತವೆ. ಮಳೆಯಿಂದಾಗಿ ರಸ್ತೆ ಗುಂಡಿಗಳು ಜಾಸ್ತಿ ಆಗ್ತಿವೆ. ಶಾಸಕ ರಾಮಮೂರ್ತಿ ಅವರನ್ನ ಕೇಳಿದ್ರೆ ಸರ್ಕಾರದಿಂದ ಅನುದಾನ ಬಂದಿಲ್ಲ ಅಂತಾರೆ ಎಂದು ಬೇಸರ ಹೊರಹಾಕಿದ್ದಾರೆ.
ಜಯನಗರದಲ್ಲಿ ಸಮಸ್ಯೆ ಇದೆ. ಅಭಿವೃದ್ಧಿ ವಿಚಾರದಲ್ಲಿ ಸಮಸ್ಯೆ ಇದೆ. ರಸ್ತೆಗಳು ಸರಿ ಇಲ್ಲ, ಗುಂಡಿ ಬಿದ್ದಿವೆ. ಹಂಪ್‌ಗಳು ಇಲ್ಲ, ವೈಜ್ಞಾನಿಕವಾಗಿ ಸಮಸ್ಯೆ ಇದೆ. ಶಾಸಕರನ್ನ ಕೇಳಿದ್ರೆ ಸರ್ಕಾರದಿಂದ ಅನುದಾನ ಬಂದಿಲ್ಲ ಅಂತಾರೆ. ಏನಾದ್ರು ಮನಸ್ತಾಪ ಇದ್ರೆ, ಬಗೆಹರಿಸಿಕೊಳ್ಳಿ ಅಭಿವೃದ್ಧಿ ವಿಚಾರದಲ್ಲಿ ಎಲ್ಲರಿಗೂ ಸಮನಾದ ಹಕ್ಕು ಇದೆ. ಆಗಾಗಿ ಅನುದಾನ ಕೊಡಿ ಎಂದು ಮನವಿ ಮಾಡಿದಾರೆ.
ಡಿಕೆಶಿ ಸಮರ್ಥನೆ ಏನು?
ಇತ್ತೀಚೆಗೆ ಜಯನಗರ ಕ್ಷೇತ್ರಕ್ಕೆ ಅನುದಾನ ಬಿಡುಗಡೆ ಮಾಡದ ವಿಚಾರವನ್ನ ಡಿಸಿಎಂ ಡಿಕೆಶಿವಕುಮಾರ್ ಮತ್ತೆ ಸಮರ್ಥನೆ ಮಾಡಿಕೊಂಡಿದ್ದರು. ಬಿಜೆಪಿ ಅವರು ವಿರೋಧ ಮಾಡಲಿ. ಮಾಡಲಿ ಅಂತಾನೇ ಸುಮ್ಮನೆ ಇರೋದು. ನಾನು ಎಲ್ಲರಿಗೂ ಅನುದಾನ ಕೊಟ್ಡಿದ್ದೇನೆ. ಡಿಸಿಎಂ ನಿಧಿಯ ಹಣ ಕೊಟ್ಟಿರೋದು. ಸಮಸ್ಯೆ ಇದೆ ಅಂತ 10 ಕೋಟಿ ಎಮರ್ಜೆನ್ಸಿ ಅಂತ ರಿಲೀಸ್ ಮಾಡಿದ್ದೇನೆ. ಜಯನಗರ ಬಹಳ ಚಿಕ್ಕ ಕ್ಷೇತ್ರ. ಅಲ್ಲಿ ದೊಡ್ಡ ಸಮಸ್ಯೆ ಇಲ್ಲ. ಆದರೂ ನನಗೆ ಅನುದಾನ ಕೊಡಬೇಕು ಅಂತ ಅರಿವಿದೆ. ಆದರೆ ಅವರು ಬಹಳ ದೊಡ್ಡ ಆರೋಪಗಳನ್ನ ಮಾಡಿದ್ರು. ಸ್ವಲ್ಪ ಆರೋಪಗಳನ್ನ ನೋಡಬೇಕು. ಜಾಸ್ತಿ ಬೇಕೋ, ಕಡಿಮೆ ಬೇಕೋ ಅಂತ ನೋಡಬೋಕಲ್ಲವಾ? ಅಂತ ಹೇಳಿದ್ದರು.
ಈಗಾಗಲೇ ಜಯನಗರಕ್ಕೆ 40 ಕೋಟಿ ಕೊಟ್ಟಿದ್ದೇವೆ. ಎಲ್ಲಾ ಕ್ಷೇತ್ರಕ್ಕೆ 600 ಕೋಟಿ ರೂ. ಪ್ರಾಜೆಕ್ಟ್ ಕೊಡ್ತಿದ್ದೇವೆ. ಆ ಕ್ಷೇತ್ರ ಒಂದಕ್ಕೆ 40 ಕೋಟಿ ಸೇರಿದೆ. ಆದರೆ ರಾಮಲಿಂಗಾರೆಡ್ಡಿ ಕ್ಷೇತ್ರಕ್ಕೆ ಇಲ್ಲವೇ ಇಲ್ಲ. ಕಣ್ಣಲ್ಲಿ ಬಂದು ನೋಡಬೇಕು ಅಂತ ಶಾಸಕರು ಕೇಳಿದ್ದಾರೆ. ಕ್ಷೇತ್ರಕ್ಕೆ ಹೋಗಿ ನೋಡ್ತೀನಿ. ಟೀಕೆ ಮಾಡೋರು ಮಾಡಲಿ. ಟೀಕೆ ಮಾಡೋರನ್ನ ಬೇಡ ಅನ್ನೋಕೆ ಆಗೊಲ್ಲ. ಮೊಟ್ಟೆಯಾದ್ರು ಹೊಡೆಯಲಿ, ಕಲ್ಲಾದ್ರು ಹೊಡೆಯಲಿ, ಕಪ್ಪು ಬಾವುಟವಾದ್ರು ತೋರಿಸಲಿ ಅಂತ ತಮ್ಮ ನಡೆ ಸಮರ್ಥನೆ ಮಾಡಿಕೊಂಡಿದ್ದರು.