– ನಮ್ಮೂರು ಜಪಾನ್ ಮಾಡೋದು ಬೇಡ. ನಮ್ಮನ್ನು ಜೋಪಾನ ಮಾಡಿ ಎಂದ ಸ್ವಾಮೀಜಿ
ಕೊಪ್ಪಳ: ಬಲ್ಡೋಟಾ ಕಾರ್ಖಾನೆಗೆ (Baldota Factory) ಇತಿಶ್ರೀ ಇಡುವುದು ನನಗೆ ಗೊತ್ತು, ಎಷ್ಟೇ ತಂತ್ರಜ್ಞಾನ ಬೆಳೆದರೂ ಗೂಗಲ್‌ನಿಂದ ರೊಟ್ಟಿ ಡೌನ್‌ಲೋಡ್ ಮಾಡಲಾಗುವುದಿಲ್ಲ. ನನ್ನದು ಇದೇ ಮೊದಲು, ಇದೇ ಕೊನೆಯ ಹೋರಾಟವಾಗಬೇಕು ಎಂದು ಗವಿಸಿದ್ದೇಶ್ವರ ಸ್ವಾಮೀಜಿ ಹೇಳಿದರು.
Advertisement
ಕೊಪ್ಪಳದ ತಾಲೂಕು ಕ್ರೀಡಾಂಗಣದಲ್ಲಿ ಕೊಪ್ಪಳ ಬಂದ್ ಹಿನ್ನೆಲೆ ನಡೆದ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಅವರು, ಮಠದ ಭಕ್ತರಿಗಾಗಿ ನನ್ನ ಎಲ್ಲ ಇತಿ-ಮಿತಿ ಬದಿಗಿಟ್ಟು ಹೋರಾಟಕ್ಕೆ ಬಂದಿದ್ದೇನೆ. ನಮ್ಮ ಸಮಸ್ಯೆಯನ್ನು ತಾತ್ವಿಕವಾಗಿ, ಸಾತ್ವಿಕವಾಗಿ ಹಾಗೂ ಪ್ರೇಮದಿಂದ ಸರ್ಕಾರಕ್ಕೆ ತಿಳಿಸುವುದು ನನ್ನ ಕರ್ತವ್ಯ. ಅದನ್ನು ನಾನು ಮಾಡಿದ್ದೇನೆ. ಜೊತೆಗೆ ಮುಂದೆ ಏನು ಮಾಡಬೇಕು ಎಂಬುವುದು ನನಗೆ ಗೊತ್ತಿದೆ. ಗವಿಸಿದ್ದೇಶ್ವರನ ಇಚ್ಛೆಯಂತೆ ನಾನು ಮುಂದುವರೆಯುತ್ತೇನೆ ಎಂದು ಹೇಳಿದರು.ಇದನ್ನೂ ಓದಿ: ಹಾಸನದಲ್ಲಿ ನಿಲ್ಲದ ಕಾಡಾನೆ, ಮಾನವನ ಸಂಘರ್ಷ – ಆನೆ ದಾಳಿಗೆ ಯುವಕ ಬಲಿ
Advertisement
Advertisement
ಮಠದ ಜಾತ್ರೆ, ದಾಸೋಹ ಭಕ್ತರಿಂದಲೇ ನಡೆಯುತ್ತದೆ. ಇಂತಹ ಭಕ್ತರು ಸಮಸ್ಯೆಗೆ ಸಿಲುಕಿದ್ದರಿಂದ ನಾನು ಹೊರಗೆ ಬರಲೇಬೇಕಾಯಿತು. ನನ್ನ ಆತ್ಮಸಾಕ್ಷಿಗೆ ಕೇಳಿ ಹೋರಾಟಕ್ಕೆ ಬಂದಿದ್ದೇನೆ. ನಮ್ಮ ಮಕ್ಕಳ ಭವಿಷ್ಯಕ್ಕಾಗಿ ನಾನು ನನ್ನ ಎಲ್ಲ ಗಡಿ ದಾಡಿ, ಇಲ್ಲಿಗೆ ಬಂದಿದ್ದೇನೆ. ಈಗಲೂ ನಾನು ಜಾತ್ರೆಯಲ್ಲಿ ಹೇಳಿದೆ ಮಾತಿಗೆ ಬದ್ಧನಾಗಿದ್ದೇನೆ. ನಾನು ಯಾವುದೇ ಕಾರಣಕ್ಕೂ ನೇತೃತ್ವ ವಹಿಸುವುದಿಲ್ಲ. ಇದು ನನ್ನ ಮೊದಲ ಮತ್ತು ಕೊನೆಯ ಹೋರಾಟ ಎಂದು ಸ್ಪಷ್ಟಪಡಿಸಿದರು.
Advertisement
ಸರ್ಕಾರದ ವಿರುದ್ಧ ನಾವು ಧ್ವನಿ ಎತ್ತಿದ್ದೇವೆ. ನಾನು ಮುಂದೆ ಎಲ್ಲಿಯೂ ಬರುವುದಿಲ್ಲ. ಸರ್ಕಾರ ನಮಗೆ ತಾಯಿ ಇದ್ದಂತೆ. ನಮಗೆ ಆರೋಗ್ಯಯುತವಾದ ಕೊಪ್ಪಳ ಕೊಡಿ ಎಂದು ಕೇಳಿಕೊಳ್ಳುತ್ತೇವೆ. ಇದರ ಹೊರತಾಗಿ ದುಡಿಯುವುದನ್ನು ಬಿಟ್ಟು ಹೊಡೆದಾಡುವುದನ್ನು ನಾನು ಕಲಿಸುವುದಿಲ್ಲ. ನಾವು ಯಾವ ಸರ್ಕಾರದ ವಿರುದ್ಧವೂ ಗುಡುಗುವುದಿಲ್ಲ. ನಮ್ಮೂರು ಜಪಾನ್ ಮಾಡುವುದು ಬೇಡ. ನಮ್ಮನ್ನು ಜೋಪಾನ ಮಾಡಿ ಅಂತಾ ನಾನು ಕೇಳಿಕೊಳ್ಳಬಲ್ಲೆ ಎಂದು ಮುಂದಿನ ಹೋರಾಟದಿಂದ ವಿಮುಕ್ತರಾದರು. ಸಚಿವ ಶಿವರಾಜ ತಂಗಡಗಿ, ಸೋಲಿಲ್ಲದ ಸರದಾರ ರಾಘವೇಂದ್ರ ಹಿಟ್ನಾಳ, ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಕೊಪ್ಪಳ ಜಿಲ್ಲೆಯವರು. ನಿಮ್ಮ ಒಂದು ಪತ್ರವಿಲ್ಲದೇ ಒಬ್ಬ ಸಣ್ಣ ಆಫೀಸರ್ ಕೂಡ ಬದಲಾಗುವುದಿಲ್ಲ. ಆದರೆ ಇಂತಹ ದೊಡ್ಡ ಫ್ಯಾಕ್ಟರಿ ಬಂದರೂ ಸುಮ್ಮನೇ ಕೂತಿರುವುದು ಸರಿಯಲ್ಲ. ನೀವು ಮೂವರು ಸೇರಿ ಏನು ಮಾಡುತ್ತೀರಿ ಗೊತ್ತಿಲ್ಲ. ಕಾರ್ಖಾನೆ ಆರಂಭ ರದ್ದು ಆದೇಶ ತೆಗೆದುಕೊಂಡು ಕೊಪ್ಪಳಕ್ಕೆ ಬರಬೇಕು ಎಂದು ರಾಘವೇಂದ್ರ ಹಿಟ್ನಾಳ, ರಾಜಶೇಖರ ಹಿಟ್ನಾಳ ಸೇರಿ ಆಡಳಿತ ಪಕ್ಷದ ಜನಪ್ರತಿನಿಧಿಗಳಿಗೆ ತಾಕೀತು ಮಾಡಿದರು. ಇನ್ನು ಉಳಿದವರೆಲ್ಲ ಅವರಿಗೆ ಸಹಕಾರ ನೀಡಬೇಕು ಎಂದು ಸೂಚಿಸಿದರು.
ಒಂದು ದೇಶದ ಪ್ರಗತಿಯಲ್ಲಿ ಕಾರ್ಖಾನೆಗಳು ಬೇಕು. ಆದರೆ, ಎಷ್ಟು ಬೇಕು? ಯಾವ ಭಾಗಕ್ಕೆ ಎಷ್ಟು ಬೇಕು? ಎಂಬುದು ಮುಖ್ಯ. ಈಗಾಗಲೇ ಕೇವಲ ಕೊಪ್ಪಳ ತಾಲೂಕಿನಲ್ಲಿ 202 ಕಾರ್ಖಾನೆ ಇವೆ. ಇದರಲ್ಲಿ 20ಕ್ಕೂ ಹೆಚ್ಚು ದೂಳು ಉಗುಳುವ ಕಾರ್ಖಾನೆ ಇವೆ. ಕೊಪ್ಪಳ ತಾಲೂಕಿನ ಸುತ್ತಲೂ ಕಾರ್ಖಾನೆ ಆಗುತ್ತಿವೆ. ಇದರಿಂದ ಇಲ್ಲಿನ ಜನರು ಕೊಪ್ಪಳ ಬಿಟ್ಟು ಎಲ್ಲಿಗೆ ಹೋಗಬೇಕು. ಮಗುವಿನ ಮುಖದ ಮೇಲೆ ಒಂದು ಕಾಡಿಗೆ ಇದ್ದರೆ ಚಂದ. ಆದರೆ, ಮುಖದ ತುಂಬೆಲ್ಲ ಕಾಡಿಗೆ ಇದ್ದರೆ ಹೇಗೆ ಎಂದು ಮಾರ್ಮಿಕವಾಗಿ ನುಡಿದರು.
ನಾನು ಗವಿಸಿದ್ದೇಶ್ವರ ಅಜ್ಜನನ್ನು ಪ್ರೀತಿಸಿದಷ್ಟೇ ನಿಮ್ಮನ್ನೂ ಪ್ರೀತಿಸುತ್ತೇನೆ. ರಾಜ್ಯದ ಮುಖ್ಯಮಂತ್ರಿ ವಿರುದ್ಧ ಗವಿಶ್ರೀ ಗುಡುಗು ಎಂದು ಬರೆದಿದ್ದಾರೆ. ನಾನು ಗುಡುಗು ಹಾಕುವವನಲ್ಲ. ನನ್ನ ಮೇಲೆಯೇ ಗುಡುಗಿ ಹೋಗಿದ್ದಾರೆ. ಗುಡುಗಿದವ ಹುಡುಗಿ ಹೋಗುತ್ತಾನೆ ಎಂದು ಸುಮ್ಮನಾಗಿದ್ದೇನೆ. ನಾನು ಸಿಎಂ ಸ್ಥಾನಕ್ಕೆ ಗೌರವ ನೀಡುತ್ತೇನೆ. ನಾನು ಬಂದ್ ಮಾಡುವುದು, ಹೋರಾಟ ಮಾಡುವುದನ್ನು ನಾನು ಕಲಿಸಲ್ಲ. ನಾನು ಭಕ್ತರಿಗೆ ಬಡಿದಾಟ ಕಲಿಸುವುದಿಲ್ಲ. ನಿಮ್ಮ ಭಕ್ತಿಯನ್ನು ನಾನು ಬೇರೆ ವಿಚಾರಕ್ಕೆ ಬಳಕೆ ಮಾಡಿಕೊಳ್ಳುವಷ್ಟು ಅಜ್ಞಾನ ನನ್ನಲ್ಲಿ ಇಲ್ಲ ಎಂದರು.
ಜರ್ಮನ್ ತಂತ್ರಜ್ಞಾನ ಬಳಸಿ, ಕಾರ್ಖಾನೆ ನಿರ್ಮಾಣ ಮಾಡುತ್ತೇವೆ ಎಂದು ಬಲ್ದೋಟಾ ಸಂಸ್ಥೆ ಹೇಳಿಕೊಂಡಿದೆ. ಸರ್ಕಾರ ಮೊದಲು ಇರುವ ಕಾರ್ಖಾನೆಗೆ ಈ ಟೆಕ್ನಾಲಜಿ ಬಳಸಿ, ಮಾಲಿನ್ಯ ಕಡಿಮೆ ಮಾಡಲಿ. ಹುಟ್ಟುವ ಮಕ್ಕಳು ನಪುಂಸಕರಾಗುತ್ತಿದ್ದಾರೆ. ಕ್ಯಾನ್ಸರ್, ಅಸ್ತಮಾಕ್ಕೆ ತುತ್ತಾಗುತ್ತಿದ್ದಾರೆ. ಎಷ್ಟೇ ತಂತ್ರಜ್ಞಾನ ಬೆಳೆದರೂ ಗೂಗಲ್‌ನಿಂದ ರೊಟ್ಟಿ ಡೌನ್‌ಲೋಡ್ ಮಾಡಲು ಆಗುವುದಿಲ್ಲ. ರೊಟ್ಟಿಗಾಗಿ ಭೂಮಿ ತಾಯಿ ಬೇಕು. ಕೊಪ್ಪಳಕ್ಕೆ ಒಂದು ವಿಶೇಷ ಕೈಗಾರಿಕೆ ನೀತಿ ಬೇಕಿದೆ. ಇಲ್ಲಿಗೆ ಬಂದ ಕಾರ್ಖಾನೆ ಎಷ್ಟು? ಆಗಿರುವ ಸಮಸ್ಯೆ ಎಷ್ಟು? ಎಂಬುದರ ಬಗ್ಗೆ ಅಧ್ಯಯನ ಆಗಬೇಕು. ಕಿರ್ಲೋಸ್ಕರ್ ಇಲ್ಲಿಗೆ ಬಂದು 20-30 ವರ್ಷ ಆಯ್ತು. ಇವರಿಗೆಲ್ಲ ಗಿಣಿಗೇರದಲ್ಲಿ ಒಂದು ಸಿಬಿಎಸ್‌ಸಿ ಶಾಲಾ, ಆಸ್ಪತ್ರೆ ಮಾಡುವಷ್ಟು ಬಡತನ ಇದೆಯಾ? ಎಂದು ಪ್ರಶ್ನಿಸಿದರು.ಇದನ್ನೂ ಓದಿ: ಪತ್ನಿ ನೀಡಿದ ಅರ್ಜಿಯಲ್ಲಿ ವೈಟ್ನರ್ ಬಳಕೆ ಮಾಡಿದ್ದು ತಿಳಿದಿಲ್ಲ: ಲೋಕಾ ಪೊಲೀಸರಿಗೆ ಸಿಎಂ ನೀಡಿದ ಉತ್ತರದಲ್ಲಿ ಏನಿದೆ?