ಬೆಂಗಳೂರು: ಮಹಿಳೆಯರ ಉಚಿತ ಬಸ್ ಪ್ರಯಾಣಕ್ಕೆ ಚಾಲನೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಮಗೆ ಎಷ್ಟೇ ಕಷ್ಟ ಬರಲಿ ನಾವು ಪ್ರಣಾಳಿಕೆಯಲ್ಲಿ ಘೋಷಿಸಿರುವ 5 ಗ್ಯಾರಂಟಿಗಳನ್ನು ಈಡೇರಿಸಿಯೇ ಈಡೇರಿಸುತ್ತೇವೆ ಎಂದು ಶಪಥ ಮಾಡಿದರು.
ಉಚಿತ ಬಸ್ ಪ್ರಯಾಣಕ್ಕೆ ಚಾಲನೆ ನೀಡಿದ ಬಳಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ 600 ಭರವಸೆ ಕೊಟ್ಟಿತ್ತು. 60 ಭರವಸೆ ಕೂಡ ಕೊಟ್ಟಿಲ್ಲ. ಅದರ ಬಗ್ಗೆ ಚರ್ಚೆ ಮಾಡಿಲ್ಲ. ನಮ್ಮ ಗ್ಯಾರಂಟಿ ಬಗ್ಗೆ ಚರ್ಚೆ ಮಾಡುತ್ತಾರೆ. ಅದಕ್ಕೆ ಕೆಲವು ಮಾಧ್ಯಮಗಳು ಕೈ ಜೋಡಿಸಿವೆ. ನಮಗೆ ಯಾವುದೇ ಜಾತಿ, ಧರ್ಮದ ಎಲ್ಲೆ ಇಲ್ಲ. ಎಲ್ಲಾ ಜಾತಿ-ಧರ್ಮದ ಬಡವರಿಗೆ ಆರ್ಥಿಕವಾಗಿ, ಸಾಮಾಜಿಕ ಶಕ್ತಿ ತುಂಬೋ ಕೆಲಸ ಮಾಡುತ್ತೆ. ಗೇಲಿ ಮಾತುಗಳಿಂದ ವಿಚಲಿತರಾಗಿಲ್ಲ. ಹಿಂದೆ ನುಡಿದಂತೆ ನಡೆದಿದೆ ಎಂದರು.
2013-2018 ರಲ್ಲಿ 168 ಭರವಸೆಯಲ್ಲಿ 158 ಭರವಸೆ ಈಡೇರಿಸಿ ಕೊಟ್ಟ ಮಾತು ಈಡೇರಿಸಿದ್ದೇವೆ. ಕೊಟ್ಟ ಮಾತಂತೆ ನಡೆದುಕೊಳಲ್ಲ ಅಂದ್ರು. ಕೆಲವರು ದಿವಾಳಿ ಆಗುತ್ತೆ ಅಂದರು. ಆದರೆ ನಮಗೆ ಎಷ್ಟೇ ಕಷ್ಟ ಬರಲಿ 5 ಗ್ಯಾರಂಟಿ ಈಡೇರಿಸುತ್ತೇವೆ. ನಾನು ಸಿಎಂ ಆಗಿ ಹೇಳ್ತಿದ್ದೇನೆ. ಕೊಟ್ಟ ಮಾತು ಈಡೇರಿಸುತ್ತೇವೆ. 59 ಸಾವಿರ ಕೋಟಿ 5 ಯೋಜನೆ ಜಾರಿಗೆ ಬೇಕು. ಈಗಾಗಲೇ ಬಜೆಟ್ ಮಂಡನೆ ಆಗಿದೆ. ಹಣಕಾಸು ಹೊಂದಿಸುವ ಕೆಲಸ ಮಾಡ್ತೀವಿ ಎಂದು ಸಿಎಂ ಭರವಸೆ ನೀಡಿದರು. ಇದನ್ನೂ ಓದಿ: ‘ಶಕ್ತಿ’ ಯೋಜನೆ ಹೆಸರಿನ ಹಿಂದಿನ ಸೀಕ್ರೆಟ್ ರಿವೀಲ್ ಮಾಡಿದ ಸಿಎಂ!
ಗೃಹಜ್ಯೋತಿ ಜುಲೈ 1 ರಿಂದ ಜಾರಿ ಆಗುತ್ತದೆ. ಗೃಹಲಕ್ಷ್ಮಿ ಯೋಜನೆ ಆಗಸ್ಟ್ 16 ಕ್ಕೆ ಜಾರಿ ಆಗುತ್ತೆ. ಸದ್ಯ 40 ಸಾವಿರ ಕೋಟಿ ಹಣ ಬೇಕು. ಎಷ್ಟು ಹಣ ಖರ್ಚು ಮಾಡ್ತೀವಿ ಅನ್ನೋದು ಮುಖ್ಯ ಅಲ್ಲ. ಯಾರಿಗೆ ಯೋಜನೆ ಕೊಡ್ತೀವಿ ಅನ್ನೋದು ಮುಖ್ಯ. 7 ಕೆ.ಜಿ ಅಕ್ಕಿ ಕೊಡ್ತಿದ್ದೆವು, 5 ಕೆಜಿಗೆ ಇಳಿಸಿದ್ರು. ಯಾಕೆ ಅಂದ್ರೆ ಹಣ ಇಲ್ಲ ಅಂದ್ರು. ಅದಕ್ಕೆ ಅಧಿಕಾರ ಬಿಟ್ಟು ಹೋಗಿ ಅಂದ್ವಿ. ನಾವು 10 ಕೆ.ಜಿ ಆಹಾರ ಧಾನ್ಯ ಕೊಡ್ತೀವಿ. ಇದಕ್ಕೆ 10 ಸಾವಿರ ಕೋಟಿ ಬೇಕು. ಬಡವರು ಎರಡು ಹೊತ್ತು ಊಟ ಮಾಡಬೇಕು. ಯಾರೂ ಹಸಿವಿನಿಂದ ಬಳಲಬಾರದು. ಹಸಿವಿನ ನೋವು ಗೊತ್ತಿರೋರಿಗೆ ಅದರ ಕಷ್ಟ ಗೊತ್ತು. ಹೊಟ್ಟೆ ತುಂಬಿಸಿಕೊಂಡು ಅಜೀರ್ಣ ಮಾಡಿಕೊಳ್ಳೋರಿಗೆ ಅ ಬೆಲೆ ಗೊತ್ತಾಗಲ್ಲ ಎಂದು ಟೀಕಾಕಾರರಿಗೆ ಟಾಂಗ್ ನೀಡಿದರು. ಇದನ್ನೂ ಓದಿ: ಕಪ್ಪು ಹಣ ತಂದು ನಮ್ಮ ಅಕೌಂಟ್‌ಗೆ ಹಾಕ್ಲಿಲ್ಲ; ಬಿಜೆಪಿ ವಿರುದ್ಧ ನಾವು ಅಭಿಯಾನ ಮಾಡ್ಬೇಕಾಗುತ್ತೆ – ಡಿಕೆಶಿ
ಇವತ್ತಿಂದ ಉಚಿತವಾಗಿ ಬಸ್ ನಲ್ಲಿ ಓಡಾಡಬಹುದು. ಸ್ಮಾರ್ಟ್ ಕಾರ್ಡ್ ಕೂಡಾ ಫ್ರೀಯಾಗಿ ಕೊಡ್ತೀವಿ. ವಿದ್ಯಾರ್ಥಿನಿಯರಿಗೂ ಫ್ರೀ ಕೊಡ್ತೀವಿ. ಅದಕ್ಕೆ ಕೊಂಕು ಮಾತಾಡ್ತಾರೆ. ಈ ಯೋಜನೆಗಳಿಗೆ ಮಧ್ಯವರ್ತಿಗಳಿಲ್ಲ. ನೇರವಾಗಿ ಫಲಾನುಭವಿಗಳಿಗೆ ಹೋಗುತ್ತದೆ. ರೈತರ ಸಾಲಮನ್ನಾ ಮಾಡದೇ ಬಂಡವಾಳ ಶಾಹಿಗಳ ಸಾಲ ಮನ್ನಾ ಮಾಡಿದವರು ನಮ್ಮ ವಿರುದ್ಧ ಮಾತಾಡ್ತಾರೆ ಎಂದರು.
ಶ್ರೀಮಂತರ ಜೇಬಿನಲ್ಲಿ ಹಣ ಇದ್ದರೆ ಉಪಯೋಗ ಆಗಲ್ಲ. ಬಡವರ ಜೇಬಿನಲ್ಲಿ ಹಣ ಇದ್ದರೆ ಉಪಯೋಗ ಆಗುತ್ತೆ. ಬಡವರ ಜೇಬಿಗೆ ದುಡ್ಡು ಇಡೋದು ಕಾಂಗ್ರೆಸ್ ಕೆಲಸ. ಶ್ರೀಮಂತರ ಜೇಬಿಗೆ ಇಡೋದು ನಮ್ಮ ಕೆಲಸ ಅಲ್ಲ. 5 ಗ್ಯಾರಂಟಿ ಜಾರಿಗೆ ಕೊಡೋದು ನೂರಕ್ಕೆ ನೂರು ಗ್ಯಾರಂಟಿ ಎಂದರು.