ಕಾರವಾರ: ಕೇವಲ 3 ಕಿ.ಮೀ ರಸ್ತೆ ತೀರಾ ದುರ್ಘಮವಾದ ಕಾರಣಕ್ಕೆ ಇಲ್ಲೊಂದು ಕುಗ್ರಾಮದ ಯುವಕ-ಯುವತಿಯರಿಗೆ ದಶಕಗಳಿಂದ ಕಂಕಣ ಭಾಗ್ಯವೇ ಕೂಡಿಬರುತ್ತಿಲ್ಲ. ಎರೆಡೆರಡು ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ ಮಾಡಿ ಸಮಸ್ಯೆ ಬಗ್ಗೆ ವಿಸ್ತೃತ ವರದಿ ಸಲ್ಲಿಸಿದರೂ ಜನಪ್ರತಿನಿಧಿಗಳು ಹಾಗೂ ಸರ್ಕಾರದ ದಿವ್ಯ ನಿರ್ಲಕ್ಷ್ಯದಿಂದಾಗಿ ಜನರು ಆರೋಗ್ಯ, ಶಿಕ್ಷಣ ಮಾತ್ರವಲ್ಲದೆ ಮದುವೆಯಿಂದಲೂ ವಂಚಿತರಾಗಿ ನರಕಯಾತನೆ ಅನುಭವಿಸುವಂತಾಗಿದೆ.
ಕುಮಟಾ ತಾಲೂಕಿನ ಸೊಪ್ಪಿನ ಹೊಸಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೇದಿನಿ ಕುಗ್ರಾಮದಲ್ಲಿ ಇಂತಹದೊದು ದಯನೀಯ ಸ್ಥಿತಿ ಇದೆ. ಊರಿಗೆ ಸರಿಯಾದ ರಸ್ತೆ ಇಲ್ಲದ ಕಾರಣಕ್ಕೆ ಸಂಬಂಧ ಬೆಳೆಸಲು ಜನರು ಹಿಂದೇಟು ಹಾಕುತ್ತಿದ್ದು, ಪರಿಣಾಮ ಸುಮಾರು 15ಕ್ಕೂ ಹೆಚ್ಚು ಯುವಕ-ಯುವತಿಯರು ಮದುವೆಗೆ ಬಂದು ದಶಕಗಳು ಕಳೆದರೂ ಮದುವೆ ಮಾಡಲಾಗದ ಸ್ಥಿತಿ ಇಲ್ಲಿನ ಪಾಲಕರದ್ದಾಗಿದೆ.
ಮಕ್ಕಳಿಗೆ ಸಂಬಂಧ ಬೆಳೆಸುವುದಕ್ಕಾಗಿ ಹತ್ತಾರು ಬಾರಿ ಘಟ್ಟ ಇಳಿದು ಊರೂರು ಸುತ್ತಿದರೂ ಕೂಡ ಕಾಲು ಸವೆಯುತ್ತಿದೆಯೇ ವಿನಃ ಸಂಬಂಧಗಳು ಕೂಡಿ ಬರುತ್ತಿಲ್ಲ. ಕೆಲವು ಸಂಬಂಧಗಳು ಕೂಡಿ ಬಂದರೂ ಮನೆ ನೋಡಲು ಬಂದಾಗ ರಸ್ತೆ ನೆಪ ಹೇಳಿ ಸಂಪರ್ಕಕ್ಕೆ ಸಿಗದಂತೆ ದೂರಾಗುತ್ತಿದ್ದಾರೆ. ಪರಿಣಾಮ ದಶಕಗಳಿಂದ ಗ್ರಾಮದಲ್ಲಿ ಮದುವೇ ನಡೆದಿಲ್ಲ. ಮಕ್ಕಳ ಮದುವೇ ಮಾಡಲಾಗದೇ ಅದೇಷ್ಟೋ ತಂದೆ-ತಾಯಿಯರು ಚಿಂತೆಗೆ ಜಾರಿದ್ದು ಆರೋಗ್ಯ ಸಮಸ್ಯೆ ಕಾಡತೊಡಗಿದೆ.
ರಸ್ತೆ ಸರಿ ಇಲ್ಲದ ಕಾರಣಕ್ಕೆ ಗ್ರಾಮದಲ್ಲಿ ಯಾರೇ ಅನಾರೋಗ್ಯಕ್ಕೆ ತುತ್ತಾದರೂ ಕೂಡ ಕಂಬಳಿ ಜೋಳಿಗೆ ಕಟ್ಟಿ ಹೊರಬೇಕಾದ ಸ್ಥಿತಿ ಇದೆ. ಕಳೆದ ಕೆಲ ವರ್ಷದ ಹಿಂದೆ ಇದೇ ರೀತಿ ಬಾಣಂತಿಯೊಬ್ಬರನ್ನು ಮಧ್ಯ ರಾತ್ರಿ ಕೊಂಡೊಯ್ಯುವಾಗ ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ತಲುಪಲಾಗದೆ ಮಾರ್ಗಮಧ್ಯದಲ್ಲಿಯೇ ಸಾವಾಗಿದ್ದು, ಇದೀಗ ಅವರ ಮಕ್ಕಳು ಅನಾಥರಾಗಿದ್ದಾರೆ ಎನ್ನುತ್ತಾರೆ ಗ್ರಾಮದ ಹಿರಿಯರಾದ ಗಣಪ ಗೌಡ. ಊರಿನಲ್ಲಿರುವ ಶಾಲೆ ಮುರಿದು ವರ್ಷ ಕಳೆದರೂ ಮಂಜೂರಾದ ಕಟ್ಟಡ ನಿರ್ಮಾಣವಾಗಿಲ್ಲ. ಇದರಿಂದ ಅಂಗನವಾಡಿಯಲ್ಲಿ ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿದೆ. ಇಲ್ಲಿ ಕೇವಲ ಐದನೇ ತರಗತಿವರೆಗೆ ಮಾತ್ರ ಇರುವ ಕಾರಣ ಮುಂದೆ ಓದಲಾಗದೆ ಬಹುತೇಕ ಮಕ್ಕಳು ಅರ್ಧಕ್ಕೆ ಶಿಕ್ಷಣ ಮೊಟಕುಗೊಳಿಸಿ ಚಿಕ್ಕವಯಸ್ಸಿನಲ್ಲೇ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ವಿದ್ಯುತ್, ಪಡಿತರ ಸೇರಿದಂತೆ ಸರ್ಕಾರದ ಸೌಲಭ್ಯಗಳು ಕೊಟ್ಟರೂ ಸಿಗಲಾಗದ ಸ್ಥಿತಿ ಗ್ರಾಮಸ್ಥರದ್ದಾಗಿದೆ.
ಗ್ರಾಮದಲ್ಲಿ ಸುಮಾರು 60 ಮನೆಗಳಿದ್ದು, 350 ಕ್ಕೂ ಹೆಚ್ಚು ಜನಸಂಖ್ಯೆ ಇದೆ. ಕುಮಟಾ-ಸಿದ್ದಾಪುರ ಮುಖ್ಯ ರಸ್ತೆಯಿಂದ 8 ಕಿ.ಮೀ ದೂರ ಇರುವ ಗ್ರಾಮಕ್ಕೆ 3 ಕಿ.ಮೀ ರಸ್ತೆ ಮಾತ್ರ ತೀರಾ ಇಳಿಜಾರಾಗಿದೆ. ಈ 3 ಕಿ.ಮೀ ಪ್ರದೇಶದಲ್ಲಿ ರಸ್ತೆ ನಿರ್ಮಾಣವಾದಲ್ಲಿ ಊರಿನ ಅರ್ಧಕ್ಕರ್ಧ ಸಮಸ್ಯೆಗೆ ಪರಿಹಾರ ಸಿಗಲಿದೆ. ಆದರೆ ಇದೀಗ ರಸ್ತೆ ಇಲ್ಲದ ಕಾರಣಕ್ಕೆ ಅನಾರೋಗ್ಯಕ್ಕೆ ಒಳಗಾದವರನ್ನು ಕಂಬಳಿ ಜೋಳಿಗೆ ಕಟ್ಟಿ ಸಾಗಿಸ ಸದ್ಯ ಗ್ರಾಮಕ್ಕೆ 12 ಅಡಿ ಅಗಲದ ರಸ್ತೆ ಇದೆಯಾದರೂ ಪ್ರತಿ ಮಳೆಗಾಲದಲ್ಲಿ ಹಾಳಾಗುತ್ತಿದೆ. ಪ್ರತಿ ವರ್ಷವೂ ಗ್ರಾಮಸ್ಥರೇ ಶ್ರಮದಾನದ ಮೂಲಕ ಬೈಕ್ ಓಡಾಟಕ್ಕೆ ಸಾಧ್ಯವಾಗುವಂತೆ ರಸ್ತೆ ನಿರ್ಮಾಣ ಮಾಡಿಕ್ಕೊಳ್ಳುತ್ತಿದ್ದಾರೆ.