ಮಡಿಕೇರಿ: ಮೇ 4ರಿಂದ ಗ್ರೀನ್ ಝೋನ್ ಗಳಲ್ಲಿ ಲಾಕ್ ಡೌನ್ ಸಂಪೂರ್ಣ ಸಡಿಲಿಕೆ ಆಗುತ್ತದೆ ಎನ್ನುವ ನಿರೀಕ್ಷೆಯಲ್ಲಿದ್ದ ಕೊಡಗಿನ ಜನರಿಗೆ ನಿರಾಸೆಯಾಗಿದೆ. ಕೊಡಗು ಜಿಲ್ಲೆಯಲ್ಲಿ ಎಂದಿನಂತೆ ಲಾಕ್ ಡೌನ್ ಮುಂದುವರೆಸುವುದಾಗಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.
ಲಾಕ್‍ಡೌನ್ ಸಡಿಲಿಕೆ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಗೆ ಮೂರುವರೆಯಿಂದ ನಾಲ್ಕು ಸಾವಿರ ಜನ ಹೊರ ಜಿಲ್ಲೆ ಮತ್ತು ರಾಜ್ಯಗಳಿಂದ ಬರುವ ನಿರೀಕ್ಷೆ ಇದೆ. ಹೀಗಾಗಿ ಲಾಕ್‍ಡೌನ್ ಮುಂದುವರಿಸಲು ಚಿಂತನೆ ನಡೆಸಲಾಗಿದೆ. ಈ ಹಿಂದಿನಂತೆ ಭಾನುವಾರ, ಸೋಮವಾರ, ಬುಧವಾರ ಮತ್ತು ಶುಕ್ರವಾರ ನಾಲ್ಕು ದಿನಗಳು ಬೆಳಗ್ಗೆ 6ರಿಂದ ಸಂಜೆ 4 ಗಂಟೆಯವರೆಗೆ ವ್ಯಾಪಾರ ವಹಿವಾಟು ನಡೆಯಲಿದೆ. ಜ್ಯುವೆಲ್ಲರಿ ಶಾಪ್ ಗಳು ಕೂಡ ತೆರೆಯಲಿದ್ದು, ಈ ನಾಲ್ಕು ದಿನಗಳು ಮಾತ್ರವೇ ತೆರೆದಿರಲಿವೆ. ಲಿಕ್ಕರ್ ಶಾಪ್‍ಗಳಿಗೂ ಕೂಡ ನಾಲ್ಕು ದಿನಗಳು ಮಾತ್ರ ಅವಕಾಶ ನೀಡಲಾಗಿದ್ದು, ಬೆಳಗ್ಗೆ 9 ರಿಂದ ಸಂಜೆ 4 ಗಂಟೆ ವರೆಗೆ ಅವಕಾಶ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
Advertisement
Advertisement
ಗಡಿ ಭಾಗವಾದ ಕುಟ್ಟ, ಮಾಕುಟ್ಟ ಮತ್ತು ಕರಿಕೆ ಭಾಗಗಳಲ್ಲಿ ಮದ್ಯಮಾರಾಟಕ್ಕೆ ಅವಕಾಶ ಇಲ್ಲ. ಜಿಲ್ಲೆಯಲ್ಲಿ ಸರ್ಕಾರಿ ಅಥವಾ ಖಾಸಗಿ ಸೇರಿದಂತೆ ಯಾವುದೇ ಸಾರ್ವಜನಿಕ ಸಾರಿಗೆ ವ್ಯವಸ್ಥೆಯೂ ಇರುವುದಿಲ್ಲ. ಆದರೆ ಬೇಡಿಕೆ ಮೇರೆಗೆ ಬೆಳಗ್ಗೆ 6 ರಿಂದ ಸಂಜೆ 4 ಗಂಟೆವರೆಗೆ ಆಟೋಗಳ ಓಡಾಟಕ್ಕೆ ಅನುವು ಮಾಡಿಕೊಡಲಾಗಿದೆ. ಉಳಿದಂತೆ ಎಲ್ಲವೂ ಹಿಂದಿನಂತೆ ಮುಂದುವರೆಯಲಿದೆ ಎಂದಿದ್ದಾರೆ.
Advertisement
ಹೊರ ಜಿಲ್ಲೆ ಮತ್ತು ರಾಜ್ಯಗಳಿಂದ ಜಿಲ್ಲೆಗೆ ಬರುತ್ತಿರುವವರ ತಪಾಸಣೆಗಾಗಿ ಕೊಡಗಿನ ಕೊಪ್ಪಗೇಟ್, ಸುಳ್ಳದಲ್ಲಿ ಚೆಕ್ ಪೋಸ್ಟ್ ತೆರೆಯಲಾಗಿದೆ. ಈ ಸ್ಥಳಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ನಡೆಸಲಾಗುವುದು. ರೋಗ ಲಕ್ಷಣಗಳು ಇದ್ದಲ್ಲಿ ಅಲ್ಲಿಯೇ ಕ್ವಾರಂಟೈನ್ ಗೆ ಒಳಪಡಿಸಲಾಗುವುದು. ಯಾವುದೇ ರೋಗ ಲಕ್ಷಣಗಳು ಇಲ್ಲದಿದ್ದರೆ, ಅವರ ಮನೆಗಳಿಗೆ ತೆರಳಲು ಅವಕಾಶವಿದೆ. ಇವರನ್ನು ಹೋಮ್ ಕ್ವಾರಂಟೈನ್‍ನಲ್ಲಿಡಲಾಗುವುದು ಎಂದು ವಿವರಿಸಿದರು.
Advertisement
ಜಿಲ್ಲೆಯಲ್ಲಿ ಯಾರೇ ಮನೆಯಿಂದ ಹೊರಗೆ ಬರಬೇಕಾದರೆ ಮಾಸ್ಕ್ ಧರಿಸುವುದು ಕಡ್ಡಾಯ. ಒಂದು ವೇಳೆ ಮಾಸ್ಕ್ ಹಾಕದೇ ಮನೆಯಿಂದ ಹೊರಗೆ ಬಂದಲ್ಲಿ ನೂರು ರೂಪಾಯಿ ದಂಡ ವಿಧಿಸಲಾಗುವುದು. ಬೀದಿಯಲ್ಲಿ ಉಗುಳಿದರೂ ದಂಡ ಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ.