ಚಾಮರಾಜನಗರ: ಲೋಕಸಭಾ ಚುನಾವಣಾ ಎಫೆಕ್ಟ್ ಎಂಬಂತೆ ಜಿಲ್ಲೆಯಾದ್ಯಂತ ಎಣ್ಣೆಗೆ ಬರ ಬಂದಿದ್ದು, ನಗರದ ಮದ್ಯದಂಗಡಿಗಳಲ್ಲಿ ಸ್ಟಾಕ್ ಇಲ್ಲದ ಕಾರಣಕ್ಕೆ ಮದ್ಯಪ್ರಿಯರಿಗೆ ಚುನಾವಣೆ ತಲೆನೋವಾದಂತಾಗಿದೆ.
ಹೌದು, ಲೋಕಸಭೆ ಚುನವಾಣೆ ಹತ್ತಿರ ಬರುತ್ತಿದಂತೆ ಮದ್ಯಪಾನಕ್ಕೆ ಜಿಲ್ಲೆಯಲ್ಲಿ ಬರಗಾಲ ಬಂದಂತಾಗಿದೆ. ಬಹುಬೇಗನೆ ಬಾರ್, ವೈನ್ ಶಾಪ್‍ಗಳಲ್ಲಿದ್ದ ಸ್ಟಾಕ್‍ಗಳು ಖಾಲಿಯಾಗುತ್ತಿವೆ. ಚುನಾವಣೆಯ ಹಿನ್ನೆಲೆ ಅಬಕಾರಿ ಇಲಾಖೆ ಸರಾಸರಿಗಿಂತ ಹೆಚ್ಚಿನ ಪ್ರಮಾಣದ ಮದ್ಯಕ್ಕೆ ಬ್ರೇಕ್ ಹಾಕಿದ್ದು, ಒಂದು ವೇಳೆ ಹೆಚ್ಚಿನ ಪ್ರಮಾಣದ ಮದ್ಯ ಸರಬರಾಜು ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮದ್ಯದಂಗಡಿ ಮಾಲೀಕರಿಗೆ ಎಚ್ಚರಿಕೆ ನೀಡಲಾಗಿದೆ.
Advertisement
Advertisement
ಚುನಾವಣೆಯ ವೇಳೆ ಜನರಿಗೆ ಮದ್ಯ ಹಾಗೂ ಹಣದ ಆಮಿಷವೊಡ್ಡಿ ಮತವನ್ನು ಪಡೆಯಲು ಕೆಲವರು ಮುಂದಾಗುತ್ತಾರೆ ಎಂಬ ಕಾರಣಕ್ಕೆ ಅಕ್ರಮ ಮದ್ಯ ಸಾಗಾಣಿಕೆ, ಅಕ್ರಮ ದಾಸ್ತಾನಿನ ಮೇಲೆ ಅಬಕಾರಿ ಇಲಾಖೆ ಹದ್ದಿನ ಕಣ್ಣಿಟ್ಟಿದೆ. ನೀತಿಸಂಹಿತೆ ಜಾರಿಯಾದ ದಿನದಿಂದ ಈವರೆಗೆ ಅಬಕಾರಿ ಇಲಾಖೆ ವಿವಿಧೆಡೆ ದಾಳಿ ನಡೆಸಿ 8373 ಲೀಟರ್ ಮದ್ಯವನ್ನು ವಶಪಡಿಸಿಕೊಂಡಿದೆ. ಈವರೆಗೂ 356 ಕಡೆ ದಾಳಿ ಮಾಡಿ, 176 ಆರೋಪಿಗಳನ್ನು ಬಂಧಿಸಿದ್ದು, ಸುಮಾರು 45 ಲಕ್ಷ ರೂ. ಮೌಲ್ಯದ ಮದ್ಯವನ್ನ ವಶಪಡಿಸಿಕೊಳ್ಳಲಾಗಿದೆ ಎಂದು ಅಬಕಾರಿ ಇಲಾಖೆ ಉಪ ಆಯುಕ್ತ ಮುರಳಿ ಮಾಹಿತಿ ನೀಡಿದ್ದಾರೆ.