ಇಸ್ಲಾಮಾಬಾದ್: ಪಾಕಿಸ್ತಾನ ಪ್ರಧಾನಿಯಾಗಿ ಇಮ್ರಾನ್ ಖಾನ್ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ಕೆ ಮೋದಿ ಸೇರಿದಂತೆ ಯಾವುದೇ ಅಂತರಾಷ್ಟ್ರೀಯ ನಾಯಕರಿಗೆ ಆಹ್ವಾನ ನೀಡಿಲ್ಲ ಎಂದು ತೆಹ್ರಿಕ್- ಇ-ಇನ್ಸಾಫ್ (ಪಿಟಿಐ) ಪಕ್ಷ ಸ್ಪಷ್ಟಪಡಿಸಿದೆ.
ಕಳೆದ ಕೆಲ ದಿನಗಳ ಹಿಂದೆ ಭಾರತ ಪ್ರಧಾನಿ ಮೋದಿ ಸೇರಿದಂತೆ ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರಿ ಸಂಘದ (ಸಾರ್ಕ್) ರಾಷ್ಟ್ರಗಳ ಎಲ್ಲಾ ನಾಯಕರಿಗೆ ಆಗಸ್ಟ್ 11 ರಂದು ನಡೆಯುವ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗುತ್ತದೆ ಎಂದು ವರದಿಯಾಗಿತ್ತು. ಆದರೆ ಸದ್ಯ ಈ ವರದಿಯನ್ನು ತಿರಸ್ಕರಿಸಲಾಗಿದ್ದು, ಭದ್ರತೆಯ ಕಾರಣದಿಂದ ಯಾವುದೇ ನಾಯಕರಿಗೆ ಆಹ್ವಾನ ನೀಡಿಲ್ಲ ಎಂಬ ಮಾಹಿತಿ ಲಭಿಸಿದೆ.
ಇಮ್ರಾನ್ ಖಾನ್ ಮುಂದಾಳತ್ವದ ತೆಹ್ರಿಕ್- ಇ-ಇನ್ಸಾಫ್ ಪಕ್ಷದ ವಕ್ತಾರರು ಭಾರತದ ಕಪಿಲ್ ದೇವ್, ನಟ ಅಮೀರ್ ಖಾನ್, ಸುನೀಲ್ ಗವಾಸ್ಕರ್ ಸೇರಿದಂತೆ ನವಜೋತ್ ಸಿಂಗ್ ಸಿದ್ದು ಅವರಿಗೆ ಆಹ್ವಾನ ನೀಡಲಾಗುತ್ತದೆ ಎಂದು ತಿಳಿಸಿದ್ದರು. ಆದರೆ ಸದ್ಯ ಪಿಟಿಐ ಹಿರಿಯಾ ನಾಯಕ ಫೈಸಲ್ ಜಾವೇದ್ ನಾವು ಯಾವುದೇ ಸ್ಟಾರ್ ಅಥವಾ ರಾಜಕೀಯ ನಾಯಕರಿಗೆ ಆಹ್ವಾನ ನೀಡಿಲ್ಲ. ಸಮಾರಂಭದಲ್ಲಿ ಕೇವಲ ದೇಶದ ನಾಯಕರಷ್ಟೇ ಭಾಗವಹಿಸುತ್ತಾರೆ ಎಂದು ಸ್ಪಷ್ಟನೆ ನೀಡಿದ್ದಾರೆ. ಆದರೆ ಈ ಹಿಂದೆ ಪಿಟಿಐ ವಕ್ತಾರರೊಬ್ಬರು ವಿದೇಶಿ ನಾಯಕರು ಸೇರಿದಂತೆ ಕೆಲ ಸ್ಟಾರ್ ಗಳಿಗೆ ಆಹ್ವಾನ ನೀಡಿದ್ದಾಗಿ ಹೇಳಿದ್ದರು.
ಬಹುದೊಡ್ಡ ಸಮಾರಂಭ ಮಾಡುವುದರಿಂದ ಜನರ ತೆರಿಗೆ ಹಣ ವ್ಯರ್ಥವಾಗುತ್ತದೆ. ಅದ್ದರಿಂದ ಸರಳ ಸಮಾರಂಭ ಮಾಡುತ್ತೇವೆ ಎಂದು ಪಿಟಿಐ ಮುಖಂಡರೊಬ್ಬರು ಹೇಳಿದ್ದಾರೆ. ಈ ಹಿಂದೆ ಚುನಾವಣೆ ಸಮಯದಲ್ಲಿ ಇಮ್ರಾನ್ ಖಾನ್ ಅನಗತ್ಯ ದುಂದುವೆಚ್ಚ ಮಾಡುವುದಿಲ್ಲ. ಅಲ್ಲದೇ ಪ್ರಧಾನಿ ನಿವಾಸವನ್ನು ಬಳಕೆ ಮಾಡುವುದಿಲ್ಲ ಎಂದು ಭಾಷಣವೊಂದರಲ್ಲಿ ತಿಳಿಸಿದ್ದರು.
ಇಮ್ರಾನ್ ರ ಈ ಹೇಳಿಕೆಯನ್ನು ಅಲ್ಲಗೆಳೆದಿರುವ ಪಾಕ್ ಮಾಧ್ಯಮಗಳು ಪ್ರಧಾನಿ ನಿವಾಸಿದಲ್ಲಿ ಸರಿಯಾದ ರಕ್ಷಣಾ ವ್ಯವಸ್ಥೆ ಇಲ್ಲದ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವರದಿ ಮಾಡಿದೆ. ಅಲ್ಲದೇ ಪ್ರಮಾಣ ವಚನ ಸಮಾರಂಭಕ್ಕೆ ಗಣ್ಯರಿಗೆ ಆಹ್ವಾನ ನೀಡದಿರಲು ಭದ್ರತೆಯ ಕೊರತೆಯೇ ಪ್ರಮುಖ ಕಾರಣ ಎಂದು ವರದಿಯಲ್ಲಿ ಉಲ್ಲೇಖಿಸಿದೆ.
ಜುಲೈ 25ರಂದು ನಡೆದ ಪಾಕಿಸ್ತಾನ ನಡೆದ ಸಂಸತ್ ಚುನಾವಣೆಯಲ್ಲಿ ಪಿಟಿಐ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಈ ವೇಳೆ ನರೇಂದ್ರ ಮೋದಿ, ಇಮ್ರಾನ್ ಖಾನ್‍ಗೆ ಫೋನ್ ಕರೆ ಮಾಡಿ ವಿಜಯೋತ್ಸವದ ಶುಭಾಶಯ ತಿಳಿಸಿದ್ದರು. ಇದಕ್ಕೂ ಮುನ್ನ ಮಾತನಾಡಿದ ಇಮ್ರಾನ್ ಖಾನ್ ಅವರು, ದ್ವಿಪಕ್ಷೀಯ ನಿಟ್ಟಿನಲ್ಲಿ ಭಾರತ ಹಾಗೂ ಪಾಕಿಸ್ತಾನ ಒಟ್ಟಿಗೆ ಕೆಲಸ ಮಾಡಿ, ಹೊಸ ಅಧ್ಯಾಯ ಬರೆಯಬೇಕು ಎಂದು ಹೇಳಿದ್ದರು.
2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ತಮ್ಮ ಪ್ರಮಾಣವಚನ ಕಾರ್ಯಕ್ರಮಕ್ಕೆ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಶರೀಫ್ ಅವರನ್ನು ಆಹ್ವಾನಿಸಿದ್ದರು.