ಮಡಿಕೇರಿ: ಕೊಡಗು (Kodagu) ಜಿಲ್ಲೆಯಲ್ಲಿ 2018-19 ಸಾಲಿನಲ್ಲಿ ನಡೆದ ಪ್ರಕೃತಿ ವಿಕೋಪ ಜಲಪ್ರಳಯ ಇಡೀ ಕೊಡಗು ಜಿಲ್ಲೆಯನ್ನೇ ತತ್ತರಿಸುವಂತೆ ಮಾಡಿತ್ತು. ಈ ವೇಳೆ ಮನೆ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿರುವ ಸಂತ್ರಸ್ತರಿಗೆ ಇದುವರೆಗೂ ಶಾಶ್ವತ ಸೂರು ಪರಿಹಾರ ಸಿಕ್ಕಿಲ್ಲ.
ಆ ಸಂದರ್ಭದಲ್ಲಿ ಜಲಪ್ರಳಯದಿಂದ ಕುಶಾಲನಗರ ತಾಲೂಕಿನ ನೆಲ್ಲಿಹುದಿಕೇರಿ ಬೆಟ್ಟದ ಕಾಡು, ಬರಡಿ, ಕುಂಬಾರ ಗುಂಡಿ, ನದಿ ದಡದ ಪ್ರದೇಶಗಳಲ್ಲಿನ ಊರುಗಳಲ್ಲಿ ಮನೆಗಳು ನೆಲಸಮವಾಗಿದ್ದವು. ಇದರಿಂದಾಗಿ ನೂರಾರು ಕುಟುಂಬಗಳು ಬೀದಿಗೆ ಬಂದಿದ್ದವು. ಬಳಿಕ ಸರ್ಕಾರ ಸಂತ್ರಸ್ತರಿಗೆ ಪರಿಹಾರ ಕೇಂದ್ರದಲ್ಲಿ ತಾತ್ಕಾಲಿಕ ವಸತಿ ವ್ಯವಸ್ಥೆಯನ್ನು ಮಾಡಿ ಸರ್ಕಾರದ ವತಿಯಿಂದ ನಿವೇಶನ ಹಾಗೂ ಸೂರು ನೀಡುವುದಾಗಿ ಭರವಸೆ ನೀಡಿತ್ತು. ಆದರೆ, 5 ವರ್ಷ ಕಳೆದರೂ ಸಂತ್ರಸ್ತರಿಗೆ ಶಾಶ್ವತ ಸೂರು ಎನ್ನುವುದು ಸಿಕ್ಕಿಲ್ಲ. ಅನಿಶ್ಚಿತತೆಯಲ್ಲಿ ಬದುಕು ಸಾಗಿಸುವ ಪರಿಸ್ಥಿತಿ ಸಂತ್ರಸ್ತರದ್ದಾಗಿದೆ. ಇದನ್ನೂ ಓದಿ: ಬೆಳ್ಳೂರಿನಲ್ಲಿ ಹಿಂದೂಗಳ ಮನೆಗೆ ನುಗ್ಗಿ ಅನ್ಯಕೋಮಿನ ಯುವಕರ ದಾಂಧಲೆ
2019 ರಲ್ಲಿ ಮನೆಗಳನ್ನು ಕಳೆದುಕೊಂಡ ನೂರಾರು ಸಂತ್ರಸ್ತರು ಕಾಳಜಿ ಕೇಂದ್ರಗಳಲ್ಲೇ ಹಲವಾರು ತಿಂಗಳುಗಳ ಕಾಲ ಶಾಶ್ವತವಾದ ಸೂರು ಕಲ್ಪಿಸದೇ ಇದ್ದರೆ ಹೀಗೆ ಇರುತ್ತೇವೆ ಎಂದು ಪಟ್ಟು ಹಿಡಿದಿದ್ದರು. ಜಿಲ್ಲಾಡಳಿತ ಇವರ ಮನವಿಗೆ ಸ್ಪಂದಿಸಿ ಜಾಗವನ್ನು ಗುರುತಿಸಿ ತಮ್ಮಗೆ ಶಾಶ್ವತ ಸೂರು ಕಲ್ಪಿಸುವ ಭರವಸೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಅಂದು ತಮ್ಮ ಮನೆಗಳಿದ್ದ ಜಾಗದಲ್ಲಿ ಪ್ಲಾಸ್ಟಿಕ್ ಹೊದಿಕೆಯ ಶೆಡ್‌ಗಳನ್ನು ನಿರ್ಮಿಸಿಕೊಂಡು ಜೀವನ ಸಾಗಿಸುತ್ತಿರುವ ಸಂತ್ರಸ್ತರ ಬದುಕು ಇಂದಿಗೂ ಸಂಕಷ್ಟದಲ್ಲಿ ಇದೆ. ಗ್ರಾಮದ ನೂರಾರು ಮನೆಗಳಲ್ಲಿ ಗೋಡೆ ಬಿರುಕು ಬಿದ್ದು ವಾಸಕ್ಕೆ ಯೋಗ್ಯವಲ್ಲದ ಅಪಾಯಕಾರಿ ಸ್ಥಿತಿಯಲ್ಲಿವೆ. ಕೆಲವು ಸಂತ್ರಸ್ತರು ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಇದುವರೆಗೂ ಬಾಡಿಗೆ ಹಣ ಕೂಡ ಸಿಕ್ಕಿಲ್ಲ. ಈ ಭಾಗದಲ್ಲಿ ಬಹುತೇಕರು ಕೂಲಿ ಕಾರ್ಮಿಕರಾಗಿದ್ದು, ಸ್ವಂತ ಸೂರು ಎಂಬುದು ದೂರದ ಮಾತಾಗಿಯೇ ಉಳಿದಿದೆ. ಈ ಹಿಂದೆ ವಿರೋಧ ಕಾಮಗಾರಿ ಪಕ್ಷದ ನಾಯಕರಾಗಿದ ಸಿದ್ದರಾಮಯ್ಯ ಅವರು ಈ ಗ್ರಾಮಕ್ಕೆ ಭೇಟಿ ನೀಡಿ ಅಂದಿನ ಸರ್ಕಾರದ ವಿರುದ್ಧ ಹರಿಹಾಯ್ದು ನದಿಪಾತ್ರದ ಜನರಿಗೆ ಶಾಶ್ವತ ಸೂರು ನೀಡುವಂತೆ ಆಗ್ರಹಿಸಿದ್ದರು. ಈಗ ಅವರದೇ ಸರ್ಕಾರವಿದೆ. ನಮ್ಮ ಸಮಸ್ಯೆಯನ್ನು ಬಗೆಹರಿಸುತ್ತಿಲ್ಲ ಎಂಬುದು ನದಿತಟದ ನಿವಾಸಿಗಳ ಅಳಲು.
ನೆಲ್ಲಿಹುದಿಕೇರಿ ವ್ಯಾಪ್ತಿಯ ಸಂತ್ರಸ್ತರಿಗೆ ಅಬ್ಯತ್‌ಮಂಗಲ ಗ್ರಾಮದಲ್ಲಿ ಒತ್ತುವರಿಯಾಗಿದ್ದ 8 ಎಕರೆ ಜಾಗವನ್ನು ಜಿಲ್ಲಾಡಳಿತ ತೆರವುಗೊಳಿಸಿ ಸಂತ್ರಸ್ತರಿಗೆ ಪುನರ್‌ವಸತಿ ಕಲ್ಪಿಸಲು ಮೀಸಲಿಟ್ಟಿತ್ತು. ಆದರೆ, ವರ್ಷಗಳು ಉರುಳಿದರೂ ನಿವೇಶನ ಹಂಚಿಕೆ ಆಗಿಲ. ಅಲ್ಲದೇ ನಿವೇಶನ ಹಂಚಿಕೆ ಮಾಡಲು ಯಾವುದೇ ಮೂಲಭೂತ ಸೌಕರ್ಯಗಳು ಮಾಡದೇ ಇರುವ ಕಾರಣ ಜಿಲ್ಲಾಡಳಿತ ವಿರುದ್ಧ ಸಂತ್ರಸ್ತರು ಅಕ್ರೋಶ ಹೋರ ಹಾಕುತ್ತಿದ್ದಾರೆ. ಜಾಗ ಗುರುತಿಸಿ ಐದು ವರ್ಷಗಳು ಕಳೆದರೂ ಸೇತುವೆ ನಿರ್ಮಾಣ ಕಾರ್ಯ, ಮರಗಳ ತೆರವು ಸೇರಿದಂತೆ ಹಂತ ಹಂತವಾಗಿ ಹೋರಾಟ ಮಾಡುವ ಪರಿಸ್ಥಿತಿ ತಮಗೆ ಬಂದೊದಗಿದೆ. ಪ್ರತಿ ಮಳೆಗಾಲದ ಸಂದರ್ಭ ಸುರಕ್ಷಿತ ಸ್ಥಳಕ್ಕೆ ತೆರಳಿ ಅಂತ ನೋಟಿಸ್ ನೀಡುತ್ತಾರೆ ಎಂದು ಸರ್ಕಾರದ ವಿರುದ್ಧ ಅಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಶಾಂತವಾಗುತ್ತಿದೆ ರೆಮಾಲ್ ಚಂಡಮಾರುತ – ಪಶ್ಚಿಮ ಬಂಗಾಳ, ಈಶಾನ್ಯ ರಾಜ್ಯಗಳಲ್ಲಿ ಭಾರೀ ಮಳೆ
ಪ್ರತಿ ಮಳೆಗಾಲದ ಸಂದರ್ಭದಲ್ಲಿ ನದಿಪಾತ್ರದ ಜನರು ಒಂದಲ್ಲ ಒಂದು ರೀತಿಯ ಸಂಕಷ್ಟದ ಸ್ಥಿತಿಯಲ್ಲಿ ದಿನ ಕಳೆಯುತ್ತಿದ್ದಾರೆ. ಇದೀಗ ಮತ್ತೊಂದು ಮಳೆಗಾಲ ಆರಂಭ ಅಗುತ್ತಿರುವುದರಿಂದ ಮುಂದಿನ ಬದುಕು ಹೇಗೆ ಎಂದು ಸಂತ್ರಸ್ತರು ಚಿಂತೆಗೀಡಾಗಿದ್ದಾರೆ.