ಬೆಂಗಳೂರು: ನಾಳೆಯಿಂದ ಎಸ್‍ಎಸ್‍ಎಲ್‍ಸಿ (SSLC) ಪರಿಕ್ಷೆ ನಡೆಯುತ್ತಿದ್ದು, ಪರಿಕ್ಷಾ ಕೊಠಡಿಯೊಳಗೆ ಹಿಜಬ್(Hijab) ನಿಷೇಧಿಲಾಗಿದೆ. ಈ ಕುರಿತು ಸರ್ಕಾರ ಸುತ್ತೋಲೆ ಹೊರಡಿಸಿದೆ.
ಹೌದು. ಎರಡು ವರ್ಷಗಳ ಕೊರೊನಾ (Corona Virus) ಆತಂಕದ ಬಳಿಕ ನಾಳೆಯಿಂದ ಪೂರ್ಣ ಪ್ರಮಾಣದ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಪ್ರಾರಂಭ ಆಗಲಿದೆ. ಪರೀಕ್ಷೆಗೆ ಎಸ್‍ಎಸ್‍ಎಲ್‍ಸಿ ಬೋರ್ಡ್ ಸಿದ್ಧತೆ ಮಾಡಿಕೊಂಡಿದೆ. ಪರೀಕ್ಷೆಗೆ ಸರ್ಕಾರ ಸಮವಸ್ತ್ರ ಕಡ್ಡಾಯ ಮಾಡಿದ್ದು, ಹಿಜಬ್‍ಗೆ ನಿಷೇಧ ಹಾಕಲಾಗಿದೆ.
ಏಪ್ರಿಲ್ 11 ರ ವರೆಗೆ ಪರೀಕ್ಷೆ ನಡೆಯಲಿದ್ದು, ಪರೀಕ್ಷೆಗೆ ಸರ್ಕಾರ ಸಕಲ ಸಿದ್ಧತೆ ಮಾಡಿಕೊಂಡಿದೆ. ಎರಡು ವರ್ಷಗಳ ಬಳಿಕ ಪೂರ್ಣ ಪ್ರಮಾಣದಲ್ಲಿ ಪರೀಕ್ಷೆ ನಡೆಯುತ್ತಿದ್ದು, ಹಳೆಯ ಮಾದರಿಯಲ್ಲಿ 625 ಅಂಕಗಳಿಗೆ ಪರೀಕ್ಷೆ ನಡೆಯಲಿದೆ. ಮೊದಲ ದಿನವಾದ ನಾಳೆ ಪ್ರಥಮ ಭಾಷೆಯ ಪರೀಕ್ಷೆಗಳು ನಡೆಯಲಿವೆ. ಇದನ್ನೂ ಓದಿ: SSLC ಪರೀಕ್ಷೆ ಅಂತಿಮ ವೇಳಾಪಟ್ಟಿ ಪ್ರಕಟ – ಮಾ.28 ರಿಂದ ಆರಂಭ
ಈ ವರ್ಷದ ಪರೀಕ್ಷೆಗೆ ಸಮವಸ್ತ್ರ ಕಡ್ಡಾಯ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಹೈಕೋರ್ಟ್ ಆದೇಶದ ಮೇರೆಗೆ ಸಮವಸ್ತ್ರ ಕಡ್ಡಾಯ ಮಾಡಿದ್ದು, ಹಿಜಬ್ ನಿಷೇಧ ಮಾಡಲಾಗಿದೆ. ಸರ್ಕಾರಿ ಶಾಲೆಯಲ್ಲಿ ಸರ್ಕಾರ ನಿಗದಿ ಮಾಡಿದ ಸಮವಸ್ತ್ರ ವಿದ್ಯಾರ್ಥಿಗಳು ಹಾಕಬೇಕು. ಖಾಸಗಿ ಶಾಲೆಯ ವಿದ್ಯಾರ್ಥಿಗಳು ಶಾಲಾ ಆಡಳಿತ ಮಂಡಳಿ ನಿಗದಿ ಮಾಡಿದ ಸಮವಸ್ತ್ರ ಧರಿಸಬೇಕು. ಒಂದು ವೇಳೆ ಹಿಜಬ್ ವಿಚಾರಕ್ಕೆ ಪರೀಕ್ಷೆಗೆ ಗೈರಾದ್ರೆ ಆ ವಿದ್ಯಾರ್ಥಿಗಳಿಗೆ ವಿಶೇಷ ಪರೀಕ್ಷೆ ಇಲ್ಲ ಅಂತ ಸರ್ಕಾರ ಸ್ಪಷ್ಟಪಡಿಸಿದೆ.
4,52,732 ಬಾಲಕರು, 4,21,110 ಬಾಲಕಿಯರು, ನಾಲ್ವರು ತೃತೀಯ ಲಿಂಗಿ ವಿದ್ಯಾರ್ಥಿಗಳು, 5,307 ವಿಶೇಷ ಚೈತನ್ಯ ವಿದ್ಯಾರ್ಥಿಗಳು ಹೀಗೆ ರಾಜ್ಯಾದ್ಯಂತ ಒಟ್ಟು 8,73,846 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದಾರೆ. ರಾಜ್ಯಾದ್ಯಂತ 3444 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲು ಸಿದ್ಧತೆ ನಡೆಸಲಾಗಿದ್ದು, ಪರೀಕ್ಷಾ ಕಾರ್ಯ ನಿರ್ವಹಿಸಲು ಸಿಬ್ಬಂದಿ ನೇಮಕ ಮಾಡಲಾಗಿದೆ. ಮೌಲ್ಯಮಾಪನಕ್ಕೆ 60 ಸಾವಿರ ಶಿಕ್ಷಕರ ನಿಯೋಜನೆ ಮಾಡಲಾಗಿದ್ದು, 34 ಶೈಕ್ಷಣಿಕ ಜಿಲ್ಲೆಗಳ 234 ಕೇಂದ್ರಗಳಲ್ಲಿ ಮೌಲ್ಯಮಾಪನಕ್ಕೆ ರೆಡಿ ಮಾಡಿಕೊಳ್ಳಲಾಗಿದೆ. ಇದನ್ನೂ ಓದಿ: SSLC ವಿದ್ಯಾರ್ಥಿಗಳಿಗೆ ಆಲ್ ದಿ ಬೆಸ್ಟ್ : ಬೊಮ್ಮಾಯಿ
ಕೊರೊನಾ ಕಡಿಮೆ ಆಗಿದ್ದರೂ ಕೊರೊನಾ ಮಾರ್ಗಸೂಚಿಗಳು ಪಾಲನೆ ಮಾಡಬೇಕು. ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಟಿವಿ ಅಳವಡಿಕೆ ಮಾಡಲಾಗಿದೆ. ಬೆಂಗಳೂರಿನಲ್ಲಿ ಎಕ್ಸಾಂ ಮುಗಿಯೋವರೆಗೂ ಪೊಲೀಸ್ ಇಲಾಖೆ 144 ಸೆಕ್ಷನ್ ಜಾರಿ ಮಾಡಿದೆ. ಪರೀಕ್ಷಾ ಕೇಂದ್ರದ 100 ಮೀಟರ್ ಸುತ್ತ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಪರೀಕ್ಷಾ ಕೇಂದ್ರಕ್ಕೆ ವಿದ್ಯಾರ್ಥಿಗಳು ಬಿಟ್ಟು ಬೇರೆ ಯಾರಿಗೂ ಪ್ರವೇಶ ಇಲ್ಲ. ಈ ಬಾರಿ ಒಂದು ಡೆಸ್ಕ್ ಗೆ ಇಬ್ಬರು ವಿದ್ಯಾರ್ಥಿಗಳನ್ನ ಕೂರಿಸುವ ವ್ಯವಸ್ಥೆ ಮಾಡಲಾಗಿದೆ. ಪರೀಕ್ಷಾ ಕೇಂದ್ರಗಳ ಬಳಿ ಗುಂಪು ಸೇರುವುದು, ಪ್ರತಿಭಟನೆಗಳನ್ನು ನಿರ್ಬಂಧಿಸಲಾಗಿದೆ.
ಪರೀಕ್ಷಾ ಕೇಂದ್ರದ ಸುತ್ತಲಿನ ಜೆರಾಕ್ಸ್ ಅಂಗಡಿಗಳು ಕ್ಲೋಸ್ ಮಾಡಲು ಸೂಚನೆ ನೀಡಲಾಗಿದೆ. ಸೂಕ್ಷ್ಮ ಜಿಲ್ಲೆಗಳಲ್ಲಿ ಅಗತ್ಯ ಭದ್ರತೆಯ ನಿರ್ಧಾರಗಳನ್ನ ತೆಗೆದುಕೊಳ್ಳಲು ಡಿಸಿಗಳು, ಎಸ್‍ಪಿಗಳಿಗೆ ಸರ್ಕಾರ ಅಧಿಕಾರ ನೀಡಿದೆ.