ಅಸ್ಸಾಂನಲ್ಲಿ ಎರಡಕ್ಕಿಂತ ಹೆಚ್ಚಿನ ಮಕ್ಕಳಿದ್ರೆ ಸರ್ಕಾರಿ ಕೆಲ್ಸ ಇಲ್ಲ: ವಿವಿವರೆಗಿನ ವಿದ್ಯಾರ್ಥಿನಿಯರ ಶಿಕ್ಷಣ ಫುಲ್ ಫ್ರೀ

Public TV
1 Min Read
school girls

ದಿಸ್ಪುರ್: ಎರಡಕ್ಕಿಂತ ಹೆಚ್ಚು ಮಕ್ಕಳಿರುವ ಅಭ್ಯರ್ಥಿಗಳಿಗೆ ಇನ್ನು ಮುಂದೆ ಸರ್ಕಾರಿ ಕೆಲಸ ನೀಡದೇ ಇರುವ ನಿರ್ಧಾರವನ್ನು ಅಸ್ಸಾಂ ಸರ್ಕಾರ ಕೈಗೊಂಡಿದೆ.

ಅಸ್ಸಾಂ ಸರ್ಕಾರ ಜನಸಂಖ್ಯಾ ನಿಯಂತ್ರಣ ಕರಡು ಮಸೂದೆಯನ್ನು ಸಿದ್ಧಪಡಿಸಿದ್ದು, ಈ ಮಸೂದೆಯಲ್ಲಿ ಎರಡಕ್ಕಿತ ಹೆಚ್ಚಿನ ಮಕ್ಕಳನ್ನು ಹೊಂದಿರುವ ಅಭ್ಯರ್ಥಿಗಳು ಸರ್ಕಾರಿ ಕೆಲಸಕ್ಕೆ ಅರ್ಜಿ ಸಲ್ಲಿಸಲು ಅನರ್ಹರು ಎನ್ನುವ ಅಂಶವನ್ನು ಸೇರಿಸಿದೆ.

ಜನಸಂಖ್ಯಾ ನಿಯಂತ್ರಣ ಹಾಗೂ ಬಡತನ ರೇಖೆಗಿಂತ ಕೆಳಗಿರುವವರಿಗೆ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಈ ಮಸೂದೆಯನ್ನು ಸಿದ್ಧಪಡಿಸಲಾಗಿದೆ ಎಂದು ಆರೋಗ್ಯ ಸಚಿವ ಹಿಮಂತ ಬಿಸ್ವಾ ಶರ್ಮಾ ತಿಳಿಸಿದ್ದಾರೆ.

ಮಸೂದೆಯಲ್ಲಿ ಏನಿದೆ?
ಸರ್ಕಾರಿ ಕೆಲಸ ಅಲ್ಲದೇ, ಪಂಚಾಯತ್ ಮತ್ತು ನಗರಸಭೆ ಚುನಾವಣೆಯಲ್ಲಿ ನಿಲ್ಲುವ ಅಭ್ಯರ್ಥಿಗಳಿಗೂ ಈ ನಿಯಮ ಅನ್ವಯವಾಗಲಿದೆ. ಅಷ್ಟೇ ಅಲ್ಲದೇ ಮದುವೆಯಾಗಲಿರುವ ವರನ ವಯಸ್ಸನ್ನು 21ಕ್ಕೇ ಏರಿಸಬೇಕೆಂಬ ಅಂಶವು ಇದರಲ್ಲಿದೆ.

ವಿಶ್ವವಿದ್ಯಾಲಯ ಶಿಕ್ಷಣದವರೆಗೆ ವಿದ್ಯಾರ್ಥಿನಿಯರಿಗೆ ಉಚಿತ ಶಿಕ್ಷಣ ನೀಡುವುದಾಗಿ ಸರ್ಕಾರ ಹೇಳಿದೆ. ಶಿಕ್ಷಣ, ಬಸ್ ಪ್ರಯಾಣ, ಪುಸ್ತಕ ಮತ್ತು ಹಾಸ್ಟೇಲ್ ಸೌಲಭ್ಯವನ್ನು ಉಚಿತವಾಗಿ ನೀಡಲಾಗುವುದು. ಇದರಿಂದಾಗಿ ಅರ್ಧದಲ್ಲೇ ಶಿಕ್ಷಣವನ್ನು ಮೊಟಕುಗೊಳಿಸುತ್ತಿರುವ ವಿದ್ಯಾರ್ಥಿನಿಯರ ಸಂಖ್ಯೆ ಇಳಿಕೆಯಾಗಲಿದೆ ಎಂದು ಹಿಮಂತ ಬಿಸ್ವಾ ಶರ್ಮಾ ತಿಳಿಸಿದ್ದಾರೆ.

ಬಾಲ್ಯವಿವಾಹ ಆದವರು ಸರ್ಕಾರಿ ಉದ್ಯೋಗ ಪಡೆಯಲು ಅನರ್ಹರು ಮತ್ತು ಸರ್ಕಾರಿ ಉದ್ಯೋಗ, ಚುನಾವಣೆಯಲ್ಲಿ ಶೇ.50 ರಷ್ಟು ಸ್ಥಾನಗಳು ಮಹಿಳೆಯರಿಗೆ ಮೀಸಲು ಎನ್ನುವ ಅಂಶವು ಕರಡು ಮಸೂದೆಯಲ್ಲಿದೆ.

ಮಸೂದೆಯಲ್ಲಿ ಪ್ರಸ್ತಾಪಗೊಂಡಿರುವ ಅಂಶಗಳ ಬಗ್ಗೆ ಜುಲೈವರೆಗೆ ಸಾರ್ವಜನಿಕರ ಅಭಿಪ್ರಾಯವನ್ನು ಪಡೆಯಲಾಗುತ್ತದೆ. ಇದಾದ ಬಳಿಕ ವಿಧಾಸಭೆಯಲ್ಲಿ ಚರ್ಚೆ ನಡೆಸಿ ಕಾಯ್ದೆಯನ್ನು ತರಲಾಗುವುದು. ಚುನಾವಣೆಯ ವೇಳೆ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಈ ವಿಚಾರವನ್ನು ಪ್ರಸ್ತಾಪ ಮಾಡಿತ್ತು. ಈಗ ಇದನ್ನು ಜಾರಿಗೆ ತರಲು ಸರ್ಕಾರ ಮುಂದಾಗುತ್ತಿದೆ ಎಂದು ಎಂದು ಹಿಮಂತ ಬಿಸ್ವಾ ಶರ್ಮಾ ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *