Latest
ಮುಂದೆ ಇಳಿಕೆಯಾಗುತ್ತೆ, ದೇಶದೆಲ್ಲೆಡೆ ಏಕರೂಪದ ತೈಲ ದರ ನಿಗದಿಯಾಗಬೇಕಾದ್ರೆ ಜಿಎಸ್ಟಿ ವ್ಯಾಪ್ತಿಗೆ ತರಬೇಕು: ಪ್ರಧಾನ್

ನವದೆಹಲಿ: ಅಮೆರಿಕವನ್ನು ಅಪ್ಪಳಿಸಿದ ಇರ್ಮಾ ಮತ್ತು ಹಾರ್ವೆ ಚಂಡಮಾರುತಗಳಿಂದ ತೈಲ ಬೆಲೆ ಏರಿಕೆಯಾಗಿದೆ ಎಂದು ಪೆಟ್ರೋಲಿಯಂ ಖಾತೆಯ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.
ಚಂಡಮಾರತುಗಳಿಂದಾಗಿ ತೈಲ ಬೆಲೆಯಲ್ಲಿ ಶೇ.20ರಷ್ಟು ಏರಿಕೆಯಾಗಿದ್ದು ಇದು ತಾತ್ಕಾಲಿಕ. ಆದರೆ ಜನರು ಭರಿಸಲಾಗದ ಮಟ್ಟಕ್ಕೆ ಏರಿಕೆ ಆಗಿಲ್ಲ. ಅಷ್ಟೇ ಅಲ್ಲದೇ ತೈಲ ಬೆಲೆಗಳ ನಿತ್ಯದ ಪರಿಷ್ಕರಣೆ ವಿಚಾರದಲ್ಲೂ ಮಧ್ಯ ಪ್ರವೇಶ ಮಾಡುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ಮುಂದಿನ ದಿನಗಳಲ್ಲಿ ತೈಲ ಬೆಲೆ ಕಡಿಮೆಯಾಗಲಿದೆ. ದೇಶದ ಎಲ್ಲ ನಗರಗಳಲ್ಲಿ ತೈಲ ಬೆಲೆ ಏಕರೂಪದಲ್ಲಿ ಇರಬೇಕಿದ್ದರೆ ಅದನ್ನು ಜಿಎಸ್ಟಿ ವ್ಯಾಪ್ತಿಗೆ ತರುವುದೇ ಏಕೈಕ ಮಾರ್ಗ ಎಂದು ಅವರು ಹೇಳಿದರು.
ತೈಲ ಬೆಲೆಯನ್ನು ಇಳಿಸಲು ಅಬಕಾರಿ ಸುಂಕವನ್ನು ಸರ್ಕಾರ ಕಡಿಮೆ ಮಾಡುತ್ತಾ ಎನ್ನುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಅಬಕಾರಿ ಸುಂಕವನ್ನು ಕಡಿಮೆಗೊಳಿಸುವುದು ಹಣಕಾಸು ಸಚಿವಾಲಯಕ್ಕೆ ಬಿಟ್ಟ ವಿಚಾರ ಎಂದು ತಿಳಿಸಿದರು.
ಪೆಟ್ರೋಲ್ ಬೆಲೆ ಮಂಗಳವಾರ 2014ರ ನಂತರದ ಗರಿಷ್ಠ ಮಟ್ಟಕ್ಕೇರಿದ್ದು, ಪ್ರತಿ ಲೀಟರ್ ಪೆಟ್ರೋಲ್ ಬೆಲೆ ಬೆಂಗಳೂರಿನಲ್ಲಿ 71.50 ರೂ., ಮುಂಬೈಯಲ್ಲಿ 80 ರೂ., ಚೆನ್ನೈ 73 ರೂ. ದೆಹಲಿಯಲ್ಲಿ 70 ರೂ.ಗೆ ಏರಿಕೆಯಾಗಿತ್ತು. ಜುಲೈ ನಂತರ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 7 ರೂ. ಏರಿಕೆಯಾಗಿದೆ.
2014ರಿಂದ ಈವರೆಗೆ ಲೀಟರ್ ಪೆಟ್ರೋಲ್ ಮೇಲೆ 11.77 ರೂ. ಮತ್ತು ಡೀಸೆಲ್ ಮೇಲೆ 13.47 ರೂ. ರಷ್ಟು ಅಬಕಾರಿ ಸುಂಕವನ್ನು ಕೇಂದ್ರ ಸರ್ಕಾರ ಹೇರಿದೆ. ಇದರಿಂದ 99,000 ಕೋಟಿ ರೂ. ಸಂಗ್ರಹಿಸುವ ಗುರಿಯನ್ನು ಸರ್ಕಾರ ಹೊಂದಿದೆ.
