ನವದೆಹಲಿ: “ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಯಥಾ ಸ್ಥಿತಿ ಕಾಯ್ದುಕೊಳ್ಳಿ. ವಿವಾದ ಇತ್ಯರ್ಥಕ್ಕೆ ಮತ್ತೆ ಹೈಕೋರ್ಟ್‍ಗೆ ಹೋಗಿ” – ಇದು ಸುಪ್ರೀಂ ನೀಡಿದ ಆದೇಶದ ಸಾರ.
ಬೆಂಗಳೂರಿನ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಅನುಮತಿಸಬೇಕಾ ಬೇಡ್ವಾ ಅನ್ನೋ ವಿಚಾರಕ್ಕೆ ಸುಪ್ರೀಂಕೋರ್ಟ್‍ನಲ್ಲಿ ನಡೆದ ವಿಚಾರಣೆ ಭಾರೀ ಕುತೂಹಲಕ್ಕೆ ಎಡೆಮಾಡಿಕೊಟ್ಟಿತ್ತು. ಕೊನೆಗೆ ಸುಪ್ರೀಂ ಕೋರ್ಟ್ ಈದ್ಗಾ ಮೈದಾನದಲ್ಲಿ ಯಥಾ ಸ್ಥಿತಿ ಕಾಯ್ದುಕೊಳ್ಳಿ ಎಂದು ಆದೇಶ ಪ್ರಕಟಿಸಿತು.
ಚಾಮರಾಜಪೇಟೆ ಮೈದಾನದ ಗಣೇಶೋತ್ಸವ ಆಚರಣೆ ಅನುಮತಿ ನೀಡುವುದು ಸರ್ಕಾರದ ವಿವೇಚನೆಗೆ ಬಿಟ್ಟ ವಿಚಾರ ಎಂದು ಹೈಕೋರ್ಟ್ ದ್ವಿಸದಸ್ಯ ಪೀಠ ನೀಡಿದ ಆದೇಶವನ್ನು ಪ್ರಶ್ನಿಸಿ ವಕ್ಫ್ ಬೋರ್ಡ್ ಸುಪ್ರೀಂ ಮೆಟ್ಟಿಲೇರಿತ್ತು.
ಮೊದಲು ಈ ಅರ್ಜಿಯ ವಿಚಾರಣೆ ನ್ಯಾ. ಹೇಮಂತ್ ಗುಪ್ತಾ ಮತ್ತು ನ್ಯಾ. ಸುಧಾಂಶು ಧುಲಿಯಾ ಅವರಿದ್ದ ದ್ವಿಸದಸ್ಯ ಪೀಠದಲ್ಲಿ ಮಧ್ಯಾಹ್ನ ಸುಮಾರು ಒಂದೂವರೆ ಗಂಟೆ ಕಾಲ ವಿಚಾರಣೆ ನಡೆಯಿತು. ಆದರೆ ಗಣೇಶೋತ್ಸವಕ್ಕೆ ಅನುಮತಿಸಬೇಕಾ ಬೇಡ್ವಾ ಎಂಬ ವಿಚಾರವಾಗಿ ನ್ಯಾಯಮೂರ್ತಿಗಳಲ್ಲೇ ಭಿನ್ನ ಅಭಿಪ್ರಾಯಗಳು ವ್ಯಕ್ತವಾದ ಕಾರಣ, ಪ್ರಕರಣ ವಿಚಾರಣೆಯನ್ನು ಮುಖ್ಯ ನ್ಯಾಯಾಧೀಶರ ಪೀಠಕ್ಕೆ ವರ್ಗಾವಣೆ ಮಾಡಿದರು. ಇದನ್ನೂ ಓದಿ: ಕುಡಿದ ಅಮಲಿನಲ್ಲಿ ಪತ್ನಿಯ ಮೇಲೆ ಹಲ್ಲೆ- ತಂದೆಯ ವಿರುದ್ಧ ಪೊಲೀಸ್ ಮೆಟ್ಟಿಲೇರಿದ 7ರ ಬಾಲಕ
ಮುಖ್ಯ ನ್ಯಾಯಮೂರ್ತಿ ಯುಯು ಲಲಿತ್, ಈ ಪ್ರಕರಣದ ವಿಚಾರಣೆಗೆ ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ, ಎಎಸ್ ಓಖಾ ಮತ್ತು ಎಂಎಂ ಸುಂದರೇಶ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠವನ್ನು ರಚಿಸಿ, ತುರ್ತು ವಿಚಾರಣೆಗೆ ಸೂಚಿಸಿದ್ರು.
ಕೋರ್ಟ್ ಕಲಾಪ ಮುಗಿಯುವ ಹೊತ್ತಲ್ಲಿ ಸಂಜೆ 4.30ಕ್ಕೆ ಈ ಪೀಠ ವಿಚಾರಣೆ ನಡೆಸಿತು. ವಕ್ಫ್ ಬೋರ್ಡ್ ಪರವಾಗಿ ಹಿರಿಯ ವಕೀಲ ಕಪಿಲ್‍ಸಿಬಲ್, ದುಷ್ಯಂತ್ ದವೆ ಪ್ರಬಲ ವಾದ ಮಂಡಿಸಿದರು. ಸರ್ಕಾರದ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮತ್ತು ಮುಕುಲ್ ರೊಹ್ಟಗಿ ವಾದ ಮಂಡಿಸಿದರು. ಸಂಜೆ 6:20ಕ್ಕೆ ಸುಪ್ರೀಂಕೋರ್ಟ್ ಯಥಾ ಸ್ಥಿತಿ ಕಾಯ್ದುಕೊಳ್ಳಲು ಸೂಚಿಸಿ ಆದೇಶ ನೀಡಿತು.
ವಕ್ಫ್ ಬೋರ್ಡ್ ವಾದ ಏನು?
ಚಾಮರಾಜಪೇಟೆಯ ಈದ್ಗಾ ಮೈದಾನ 200 ವರ್ಷಗಳಿಂದ ವಕ್ಪ್ ಆಸ್ತಿಯಾಗಿದೆ, ಇಲ್ಲಿ ವರ್ಷಕ್ಕೆ ಎರಡು ಬಾರಿ ಸಾಮೂಹಿಕವಾಗಿ ನಮಾಜು ಮಾಡಲಾಗುತ್ತದೆ. ಸರ್ಕಾರದ ಹಲವು ದಾಖಲೆಗಳ ಪ್ರಕಾರ ಇಲ್ಲೂ ಸ್ಮಶಾನವೂ ಇತ್ತು. ಇಲ್ಲಿ ಬೇರೆ ಧಾರ್ಮಿಕ ಆಚರಣೆಗಳನ್ನು ಮಾಡಲು ಸಾಧ್ಯವಿಲ್ಲ. ಹಿಂದೂ ಧಾರ್ಮಿಕ ಸ್ಥಳಗಳಲ್ಲಿ ಇತರೆ ಅಲ್ಪಸಂಖ್ಯಾತರ ಆಚರಣೆ ಮಾಡಲು ಸಾಧ್ಯವೇ? ಅದೇ ರೀತಿ ಈದ್ಗಾದಲ್ಲಿ ಗಣೇಶ ಚತುರ್ಥಿ ಸಾಧ್ಯವಿಲ್ಲ.
ರಾಜ್ಯ ಸರ್ಕಾರದ ವಾದ ಏನು?
ಈದ್ಗಾ ಮೈದಾನ ವಕ್ಪ್ ಬೋರ್ಡ್ ಆಸ್ತಿಯಲ್ಲ, ಇದು ರಾಜ್ಯ ಸರ್ಕಾರದ ಆಸ್ತಿ. ಕಂದಾಯ ಇಲಾಖೆ ದಾಖಲೆಗಳಲ್ಲಿ ಮಕ್ಕಳ ಆಟದ ಮೈದಾನ, ಸರ್ಕಾರಿ ಜಾಗ ಎಂದು ಉಲ್ಲೇಖವಾಗಿದೆ. ಸರ್ಕಾರದ ಆಸ್ತಿಯನ್ನು ಯಾರು ಮುಟ್ಟಲು ಸಾಧ್ಯವಿಲ್ಲ. ರಾಷ್ಟ್ರೀಯ ಹಬ್ಬಗಳನ್ನು ಆಚರಿಸಲು ಕೋರ್ಟ್ ಅವಕಾಶ ನೀಡಿದೆ ಎಂದರೇ ಅದು ಸರ್ಕಾರದ ಆಸ್ತಿ ಎಂದೇ ಅರ್ಥ. ಈ ಕಾರಣಕ್ಕೆ ಹೈಕೋರ್ಟ್ ಆದೇಶದಂತೆ ಎರಡು ದಿನದ ಮಟ್ಟಿಗೆ ಗಣೇಶ ಚತುರ್ಥಿಗೆ ಅವಕಾಶ ನೀಡಬೇಕು. ತಾತ್ಕಾಲಿಕ ವ್ಯವಸ್ಥೆಯಲ್ಲಿ ಹಬ್ಬ ಆಚರಿಸಲು ಅನುಮತಿ ನೀಡಬೇಕು.
ಸುಪ್ರೀಂ ಕೇಳಿದ ಪ್ರಶ್ನೆ ಏನು?
ವಿಚಾರಣೆ ಸಂದರ್ಭದಲ್ಲಿ ಮಧ್ಯಪ್ರವೇಶ ಮಾಡಿದ ಸುಪ್ರೀಂಕೋರ್ಟ್ ಹಿಂದೆ 200 ವರ್ಷ ಹಿಂದೆ ಗಣೇಶ ಚತುರ್ಥಿ ಅಲ್ಲದೇ ಬೇರೆ ಧಾರ್ಮಿಕ ಆಚರಣೆಗಳನ್ನು ಆಚರಿಸಲಾಗಿದ್ಯಾ ಎಂದು ಪ್ರಶ್ನೆ ಮಾಡಿತು. ಇದಕ್ಕೆ ʼಇಲ್ಲʼ ಎಂದು ಉತ್ತರ ಬಂದಾಗ, ಹಬ್ಬಕ್ಕೆ ತಯಾರಿ ಮಾಡಿಕೊಂಡಿದ್ಯಾ ಎಂದು ಮರು ಪ್ರಶ್ನೆ ಹಾಕಿತು. ಇದಕ್ಕೂ ʼಇಲ್ಲʼ ಎಂದು ಉತ್ತರ ಬಂತು. ಆಸ್ತಿಯ ಬಗ್ಗೆ ಗೊಂದಲಗಳಿದೆ. ಅಲ್ಲದೇ ಧಾರ್ಮಿಕ ಸೂಕ್ಷ್ಮ ವರ್ಷದ ವಿಚಾರವೂ ಆಗಿರುವ ಹಿನ್ನಲೆ ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂದು ಕೋರ್ಟ್ ಆದೇಶ ನೀಡಿತು. ಅಲ್ಲದೇ ಆಸ್ತಿ ಮಾಲಿಕತ್ವದ ಬಗ್ಗೆ ಹೈಕೋರ್ಟ್ ನಲ್ಲಿ ನಿರ್ಣಯ ಮಾಡಿಕೊಳ್ಳಲು ಸೂಚನೆ ನೀಡಿತು.