ಚಾಮರಾಜನಗರ: ಕೋಟಿ ಕೋಟಿ ಆದಾಯ ಬಂದರೂ ಮಲೆಮಹದೇಶ್ವರ ಬೆಟ್ಟದಲ್ಲಿ ಅಭಿವೃದ್ಧಿ ಎನ್ನುವುದು ಮರೀಚಿಕೆಯಾಗಿದೆ. ಒಳಚರಂಡಿ ಕಾಮಗಾರಿ ಅಪೂರ್ಣಗೊಂಡಿದ್ದು, ಗಬ್ಬೆದ್ದು ನಾರುವ ರಸ್ತೆಯಲ್ಲೇ ಮಾದಪ್ಪನ ಉತ್ಸವ ನಡೆಯುತ್ತದೆ. ಕೆಸರು ತುಂಬಿದ ಕಲ್ಲುಮಣ್ಣುಗಳ ದಾರಿಯಲ್ಲೇ ಏಳುಮಲೆ ಒಡೆಯನ ಮೆರವಣಿಗೆ ನಡೆಯುತ್ತದೆ.
ಚಾಮರಾಜನಗರ ಜಿಲ್ಲೆಯ ಇತಿಹಾಸ ಪ್ರಸಿದ್ಧ ಮಲೆ ಮಹದೇಶ್ವರ ಬೆಟ್ಟಕ್ಕೆ ಪ್ರತಿ ತಿಂಗಳು ಕೋಟಿ ಕೋಟಿ ಆದಾಯ ಹರಿದುಬರುತ್ತಿದೆ. ಭಕ್ತರು ನೀಡುವ ಕಾಣಿಕೆ, ವಸತಿಗೃಹಗಳ ಬಾಡಿಗೆ, ಮುಡಿಸೇವೆ, ಚಿನ್ನದ ರಥೋತ್ಸವದ ಸೇವೆ, ಲಾಡು ಮಾರಾಟ ಹೀಗೆ ನಾನಾ ಮೂಲಗಳಿಂದ ವಾರ್ಷಿಕ 25 ಕೋಟಿ ರೂ. ಹೆಚ್ಚು ಆದಾಯ ಇದೆ. ರಾಜ್ಯದ ಅತಿ ಹೆಚ್ಚು ಆದಾಯ ಇರುವ ಮುಜರಾಯಿ ದೇವಸ್ಥಾನಗಳ ಪೈಕಿ ಎರಡನೇ ಸ್ಥಾನದಲ್ಲಿರುವ ಇರುವ ಮಾದಪ್ಪನ ಬೆಟ್ಟದಲ್ಲಿ ಸ್ಥಳೀಯವಾಗಿ ಅಭಿವೃದ್ಧಿ ಎಂಬುದು ಮರೀಚಿಕೆಯಾಗಿದೆ.
Advertisement
Advertisement
ಬೆಟ್ಟದಲ್ಲಿ ವಾಸ ಮಾಡುವ ಜನರು ಪ್ರತಿ ನಿತ್ಯ ರಸ್ತೆಗಳಲ್ಲಿ ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಎದುರಾಗಿದೆ. ಕಳೆದ ಮೂರು ವರ್ಷಗಳಿಂದ ಒಳಚರಂಡಿ ಕಾಮಗಾರಿಗಳು ಸ್ಥಗಿತಗೊಂಡಿದೆ. ಇದರಿಂದ ಮಳೆ ಬಂದರೆ ಮೋರಿಯಲ್ಲಿ ಹರಿಯಬೇಕಾದ ನೀರು ರಸ್ತೆಗಳಲ್ಲಿ ಹರಿಯುತ್ತಿದೆ. ಮಾದಪ್ಪನ ಬೆಟ್ಟದ ತಂಬಡಿಗೇರಿ ರಸ್ತೆಯಂತೂ ಸಂಪೂರ್ಣವಾಗಿ ಹಾಳಾಗಿದೆ.
Advertisement
Advertisement
ಹಳ್ಳ-ಕೊಳ್ಳ, ಕೆಸರು ತುಂಬಿದ ರಸ್ತೆಯಲ್ಲಿ ಮಾದಪ್ಪನ ಮೆರವಣಿಗೆ ನಡೆಯುತ್ತದೆ. ಗಬ್ಬೆದ್ದು ನಾರುವ ದಾರಿಯಲ್ಲೇ ಹಾಲರೆಯೋ ಉತ್ಸವ ಜರುಗುತ್ತದೆ. ಸ್ವಲ್ಪ ಯಾಮಾರಿದರೂ ಮಾದಪ್ಪನ ಉತ್ಸವ ಮೂರ್ತಿ ರಸ್ತೆಯಲ್ಲಿ ಬಿಳುವುದಂತೂ ಖಚಿತ. ಒಳಚರಂಡಿ ಕಾಮಗಾರಿ ವಿಳಂಬದಿಂದ ರಸ್ತೆಗಳು ಹದಗೆಟ್ಟು ಹೋಗಿವೆ. ಆದರೆ ಕೋಟಿ ಕೋಟಿ ಆದಾಯ ಬಂದರೂ ಆ ಹಣವನ್ನು ರಸ್ತೆ ಕಾಮಗಾರಿಗೆ ಬಳಸುವಂತಿಲ್ಲ ಎಂದು ಜಿಲ್ಲಾಧಿಕಾರಿಗಳು ಹೇಳುತ್ತಾರೆ. ಅಲ್ಲದೆ ರಸ್ತೆ ಅಭಿವೃದ್ಧಿಗೆ ವಿಶೇಷ ಅನುದಾನ ನೀಡುವಂತೆ ಸರ್ಕಾರಕ್ಕೆ ಪತ್ರ ಬರದಿರುವುದಾಗಿ ಅವರು ಹೇಳುತ್ತಾರೆ.
ಭಾನುವಾರದಿಂದ ಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಜಾತ್ರೆ ಆರಂಭವಾಗುತ್ತಿದೆ. ಮೂರು ದಿನಗಳ ಕಾಲ ನಡೆಯುವ ಈ ದೀಪಾವಳಿ ಜಾತ್ರೆಗೆ ರಾಜ್ಯದ ಮೂಲೆ ಮೂಲೆಗಳಿಂದ ಲಕ್ಷಾಂತರ ಜನ ಬರುತ್ತಾರೆ. ಆದರೆ ರಸ್ತೆಗಳು ಹದಗೆಟ್ಟು, ಸ್ವಚ್ಛತೆ ಇಲ್ಲದ ಕಾರಣ ಸ್ಥಳೀಯರು ಮಲೆಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ವಿರುದ್ಧ ಹಿಡಿ ಶಾಪ ಹಾಕುತ್ತಿದ್ದಾರೆ.