ನೆರೆ ಸಂತ್ರಸ್ತರ ಬಾಳಲ್ಲಿ ಬೆಳಕಿಲ್ಲದ ದೀಪಾವಳಿ

Public TV
1 Min Read
gdg flood victims

ಗದಗ: ಪ್ರತಿವರ್ಷ ಸಡಗರ, ಸಂಭ್ರಮದಿಂದ ದೀಪಾವಳಿ ಹಬ್ಬ ಆಚರಿಸುತ್ತಿದ್ದ ಗದಗದ ನೆರೆ ಸಂತ್ರಸ್ತರ ಬಾಳಲ್ಲಿ ಈ ಬಾರಿಯ ದೀಪಾವಳಿಯ ಬೆಳಕಿನ ಛಾಯೆ ಮಾಯವಾಗಿದೆ. ಭೀಕರ ಪ್ರವಾಹ ಜನರ ಬದುಕಿಗೂ ಕತ್ತಲು ತರಿಸಿದೆ. ಮನೆ, ಮಠ ಎಲ್ಲವನ್ನೂ ಕಳೆದುಕೊಂಡು ಬದುಕು ಬರಡಾಗಿದೆ.

ಭೀಕರ ಪ್ರವಾಹಕ್ಕೆ ಗದಗ ಜಿಲ್ಲೆಯ ಜನರ ಬದುಕು ಅಕ್ಷರಶಃ ಮೂರಾಬಟ್ಟೆಯಾಗಿದೆ. ರೋಣ ಹಾಗೂ ನರಗುಂದ ತಾಲೂಕಿನ ಬೆಣ್ಣೆಹಳ್ಳ, ಮಲಪ್ರಭಾ ನದಿ ಪಾತ್ರದ ಹತ್ತಾರು ಹಳ್ಳಿಗರ ಬದುಕಲ್ಲಿ ಕತ್ತಲೆ ಕವಿದಿದೆ. ಬೆಳಕಿನ ಹಬ್ಬದ ದೀಪಾವಳಿಯಂದು ದೀಪ ಹಚ್ಚಲು ಆಗದಂತಹ ಪರಿಸ್ಥಿತಿ ಎದುರಾಗಿದೆ. ತುತ್ತು ಅನ್ನಕ್ಕೂ ಪರದಾಡುವಂತಾಗಿದೆ. ಇದನ್ನೂ ಓದಿ:ಮಲಪ್ರಭಾ, ಬೆಣ್ಣೆಹಳ್ಳ ಪ್ರವಾಹದ ಅಬ್ಬರಕ್ಕೆ ರಸ್ತೆಗಳು ಛಿದ್ರ ಛಿದ್ರ

gdg flood victims 1

ರೋಣ ತಾಲೂಕಿನ ಹೊಳೆಆಲೂರು, ಅಮರಗೋಳ, ಹೊಳೆಹಡಗಲಿ, ಬಿ.ಎಸ್.ಬೆಲೇರಿ, ಮೆಣಸಗಿ, ವಾಸನ ಸೇರಿದಂತೆ ಹಲವು ಗ್ರಾಮಗಳಿಗೆ ಕುಡಿಯುವ ನೀರಿಲ್ಲ. ಮನೆಯಲ್ಲಿ ತುಂಬಿಕೊಂಡ ರಾಡಿ ಮಣ್ಣು, ಹೂಳು ತೆಗೆಯುವುದರಲ್ಲೇ ಇಲ್ಲಿನ ಜನರು ಮಗ್ನರಾಗಿದ್ದಾರೆ. ಕೆಲವರಿಗೆ ಇನ್ನೂ ಮೊದಲ ಹಂತದ ನೆರೆ ಪರಿಹಾರವೇ ಸಿಕ್ಕಿಲ್ಲ. ಅಧಿಕಾರಿಗಳು, ರಾಜಕೀಯ ನಾಯಕರ ನಿರ್ಲಕ್ಷ್ಯಕ್ಕೆ ಸಂತ್ರಸ್ತರು ಅತಂತ್ರರಾಗಿದ್ದಾರೆ. ಪ್ರತಿವರ್ಷ ಜೋರಾಗಿ ಹಬ್ಬ ಮಾಡುತ್ತಿದ್ದೆವು, ಆದರೆ ಈ ಬಾರಿ ಜೀವನವೇ ಕತ್ತಲಾಗಿದೆ, ಇನ್ನೆಲ್ಲಿ ಬೆಳಕಿನ ಹಬ್ಬ ಎಂದು ಸಂತ್ರಸ್ತರು ಅಳಲು ತೋಡಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ:ಗದಗದಲ್ಲಿ ನಿಲ್ಲದ ಪ್ರವಾಹ ಪೀಡಿತರ ಕಣ್ಣೀರು – ನೆರೆ ಸಂತ್ರಸ್ತರಿಗೆ ಭೂಮಿಯೇ ಹಾಸಿಗೆ, ಆಕಾಶವೇ ಹೊದಿಕೆ

gdg flood victims 2

3 ತಿಂಗಳಲ್ಲಿ ಸತತ 3 ಬಾರಿ ಪ್ರವಾಹಕ್ಕೆ ಸಿಲುಕಿ ತತ್ತರಿಸಿದ ಸಂತ್ರಸ್ತರ ನೋವು, ಆಕ್ರಂದನ ಮುಗಿಲುಮುಟ್ಟಿದೆ. ನೆರೆ ನಿಂತರೂ ಇನ್ನೂ ಜನರ ಕಣ್ಣೀರು ನಿಂತಿಲ್ಲ. ಭೀಕರ ಪ್ರವಾಹ ದೀಪಾವಳಿ ಹಬ್ಬದ ಖುಷಿಯನ್ನು ಕಿತ್ತುಕೊಂಡಿದೆ. ಇನ್ನಾದರೂ ಸರ್ಕಾರ ಸಂತ್ರಸ್ತರಿಗೆ ಶಾಶ್ವತ ಪರಿಹಾರ ಕಲ್ಪಿಸಿ ಅವರ ಬದುಕಲ್ಲಿ ನೆಮ್ಮದಿ ತರಿಸುತ್ತಾ ಕಾದು ನೋಡಬೇಕಿದೆ.

Share This Article
Leave a Comment

Leave a Reply

Your email address will not be published. Required fields are marked *