ಬೆಳಗಾವಿ: ಕಳೆದ ಐದು ತಿಂಗಳಿನ ಹಿಂದೆ ಅಪ್ಪಳಿಸಿದ ಭೀಕರ ಪ್ರವಾಹಕ್ಕೆ ಸಾವಿರಾರು ಕೋಟಿ ರೂ. ಹಾನಿ ಅನುಭವಿಸಿರುವ ಬೆಳಗಾವಿ ಜಿಲ್ಲೆಯಲ್ಲಿನ ಕೆಲ ತಾಲೂಕುಗಳನ್ನು ಕೈ ಬಿಟ್ಟಿರುವುದರಿಂದ ಸಂತ್ರಸ್ತರಿಗೆ ಜಿಲ್ಲಾಡಳಿತ ಪರಿಹಾರ ವಿತರಣೆ ಮಾಡುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಆಗಸ್ಟ್ ನಲ್ಲಿ ಸುರಿದ ಕುಂಭದ್ರೋಣ ಮಳೆಯಿಂದ ಸೃಷ್ಟಿಯಾದ ಪ್ರವಾಹದಿಂದ ಭಾಗಶಃ ಮುಕ್ಕಾಲು ರಾಜ್ಯದಲ್ಲಿ ಬಾಧಿಸಿತ್ತು. ಆಗಸ್ಟ್ ನಲ್ಲಿ ಆದ ಪ್ರವಾಹದ ನಷ್ಟ ಆಧರಿಸಿ ರಾಜ್ಯದ 22 ಜಿಲ್ಲೆಗಳ ಸುಮಾರು 103 ತಾಲೂಕುಗಳನ್ನು ರಾಜ್ಯ ಸರ್ಕಾರ ಪ್ರವಾಹ ಪೀಡಿತ ತಾಲೂಕು ಎಂದು ಘೋಷಣೆ ಮಾಡಿತ್ತು. ಬಳಿಕ ಅಕ್ಟೋಬರ್ ನಲ್ಲಿ ಅತಿವೃಷ್ಟಿಯಿಂದ ಬೆಳಗಾವಿ ಜಿಲ್ಲೆಯ ಸೇರಿದಂತೆ ರಾಜ್ಯದ 15 ಜಿಲ್ಲೆಯ 55 ತಾಲೂಕುಗಳನ್ನು ನೆರೆ ಪೀಡಿತ ಪ್ರದೇಶ ಎಂದು ಎರಡು ತಿಂಗಳ ಹಿಂದೆ ರಾಜ್ಯ ಸರ್ಕಾರ ಘೋಷಣೆ ಮಾಡಿತ್ತು.
ಇದರಲ್ಲಿ ನೆರೆಯಿಂದ ಅತಿ ಹೆಚ್ಚು ಹಾನಿ ಅನುಭವಿಸಿರುವ ಬೆಳಗಾವಿ ಜಿಲ್ಲೆಯಲ್ಲಿ ಆಗಸ್ಟ್ ನಲ್ಲಿ ಎರಡು ಬಾರಿ ಪ್ರವಾಹ ಎದುರಾಗಿತ್ತು. ಗಡಿ ಭಾಗದಲ್ಲಿದ್ದ ಸಪ್ತ ನದಿಗಳು ಉಕ್ಕಿ ಹರಿದು ಮನೆ, ಬೆಳೆ, ಆಸ್ತಿ-ಪಾಸ್ತಿ ಸೇರಿದಂತೆ ಅಪಾರ ಪ್ರಮಾಣದಲ್ಲಿ ಹಾನಿಯಾಗಿದ್ದವು. ಅಕ್ಟೋಬರ್ ನಲ್ಲಿ ಮತ್ತೆ ಮಳೆ ಜೋರಾಗಿ ಅಬ್ಬರಿಸಿ ಅನೇಕ ಮನೆ, ಮಳೆಗೆ ನೆಲ ಕಚ್ಚಿವೆ. ಆದರೆ ನಾಲ್ಕು ತಾಲೂಕುಗಳು ಮಾತ್ರ ಆಗಸ್ಟ್ ನಂತರದ ಅತಿವೃಷ್ಟಿ ಪಟ್ಟಿಯಲ್ಲಿ ಸೇರಿಸಿದ್ದು ಜಿಲ್ಲಾಡಳಿತವೇ ಅಚ್ಚರಿಗೆ ಒಳಗಾಗಿದೆ.
ಹವಾಮಾನ ಇಲಾಖೆಯ ವರದಿಯ ಪ್ರಕಾರ ಬೆಳಗಾವಿ, ಖಾನಾಪುರ ತಾಲೂಕಿನಲ್ಲಿ ಅಕ್ಟೋಬರ್ ನಲ್ಲಿ ತಲಾ ಒಂದು ಸಾವಿರ ಸೆ.ಮೀ ಮಳೆಯಾಗಿದೆ. ಹುಕ್ಕೇರಿ ಹೊರತು ಪಡಿಸಿ ಉಳಿದ ಎಲ್ಲ ತಾಲೂಕುಗಳಲ್ಲಿ ಅಗಸ್ಟ್ ತಿಂಗಳಿನಲ್ಲಿ ಭಾರೀ ಮಳೆಯಾಗಿದೆ. ಆದರೆ ರಾಜ್ಯ ಸರಕಾರ ಬೆಳಗಾವಿ ಜಿಲ್ಲೆಯ ಖಾನಾಪುರ, ಗೋಕಾಕ್, ಬೈಲಹೊಂಗಲ ತಾಲೂಕುಗಳನ್ನು ಆಗಸ್ಟ್ ನಂತರದ ಅತಿವೃಷ್ಟಿ ಪೀಡಿತ ಎಂದು ಘೋಷಣೆ ಮಾಡಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಎಸ್.ಬಿ ಬೊಮ್ಮನಹಳ್ಳಿ ಅವರು, ಆಗಸ್ಟ್ ನಲ್ಲಿ ಬೆಳಗಾವಿ ಜಿಲ್ಲೆ ಪ್ರವಾಹ ಪೀಡಿತ ಎಂದು ಘೋಷಣೆ ಘೋಷಣೆಯಾಗಿತ್ತು. ಬಳಿಕ ನಾಲ್ಕು ತಾಲೂಕು ಮಾತ್ರ ಪ್ರವಾಹ ಪೀಡಿತ ತಾಲೂಕು ಎಂದು ಘೋಷಣೆಯಾಗಿದೆ. ಉಳಿದ ತಾಲೂಕು ಆಗಸ್ಟ್ ಬಳಿಕದ ನೆರೆ ಹಾನಿಗೆ ಪರಿಹಾರ ನೀಡಬೇಕಾದರೆ ಸರ್ಕಾರ ಒಪ್ಪಿಗೆ ಬೇಕು ಎಂದು ತಿಳಿಸಿದ್ದಾರೆ.