ಬೆಂಗಳೂರು: ಸಮ್ಮಿಶ್ರ ಸರ್ಕಾರದ ನಾಯಕತ್ವದ ಬದಲಾವಣೆ ಇಲ್ಲ. ಈ ಹಿಂದೆ ಕೊಟ್ಟ ಮಾತಿನಂತೆ ಮುಖ್ಯಮಂತ್ರಿಗಳಾಗಿ ಕುಮಾರಸ್ವಾಮಿ ಅವರೇ ಮುಂದುವರಿಯಲಿದ್ದಾರೆ ಎಂದು ಹೇಳುವ ಮೂಲಕ ಸಚಿವ ಡಿ.ಕೆ.ಶಿವಕುಮಾರ್ ನಾಯಕತ್ವ ಬದಲಾವಣೆಯ ಊಹಾಪೋಹಗಳಿಗೆ ತೆರೆ ಎಳೆದರು.
ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು, ಅತೃಪ್ತ ಶಾಸಕರ ಜೊತೆಗೆ ಈಗಾಗಲೇ ನಾನು ಮಾತನಾಡಿದ್ದೇನೆ. ರಾಮಲಿಂಗಾ ರೆಡ್ಡಿ, ವಿಶ್ವನಾಥ್ ನಾಯಕರ ಜೊತೆ ಕಳೆದ 30ರಿಂದ 40 ವರ್ಷಗಳಿಂದ ರಾಜಕೀಯ ಮಾಡಿಕೊಂಡು ಬಂದಿದ್ದೇವೆ. ಅತೃಪ್ತರು ಕೆಲ ಬೇಡಿಕೆಗಳನ್ನ ಮುಂದಿಟ್ಟಿದ್ದು, ಪೂರೈಸುವ ಕೆಲಸವನ್ನು ಮಾಡಲಿದ್ದೇವೆ. ಆದ್ರೆ ಶಾಸಕರ ಬೇಡಿಕೆಗಳನ್ನು ಬಹಿರಂಗವಾಗಿ ಹೇಳಲಾರೆ ಎಂದು ತಿಳಿಸಿದರು.
ಸೋಮವಾರ ಡಿಸಿಎಂ ಪರಮೇಶ್ವರ್ ಮನೆಯಲ್ಲಿ ಎಲ್ಲ ಸಚಿವರ ಸಭೆಗೆ ಆಹ್ವಾನಿಸಲಾಗಿದೆ. ರಾಹುಕಾಲ ಬಳಿಕ ಸಭೆ ಆರಂಭಿಸಲಾಗುವುದು. ಸಭೆಗೆ ಮಾಧ್ಯಮಗಳಿಗೂ ಆಹ್ವಾನ ನೀಡಲಾಗಿದ್ದು, ಸೋಮವಾರ ನಮ್ಮ ತೀರ್ಮಾನವನ್ನು ತಿಳಿಸುತ್ತೇವೆ ಎಂದು ಹೇಳಿ ನಡೆದರು.
ಇಂದು ಬೆಳಗ್ಗೆ ಮಾತನಾಡಿದ್ದ ಸಚಿವರು, ಜೆಡಿಎಸ್‍ನವರೇ ಮುಂದಿನ ಐದು ವರ್ಷಗಳ ಕಾಲ ಮೈತ್ರಿ ಸರ್ಕಾರದ ಮುಖ್ಯಮಂತ್ರಿ ಎಂಬುದಾಗಿ ಒಪ್ಪಂದವನ್ನು ಮಾಡಿಕೊಂಡಿದ್ದೇವೆ. ಹಾಗಾಗಿ ಸಿಎಂ ಬೆನ್ನಿಗೆ ಚೂರಿ ಹಾಕುವ ವ್ಯಕ್ತಿ ನಾನಲ್ಲ. ಇನ್ನು ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಸಿದ್ದರಾಮಯ್ಯರನ್ನು ಮುಖ್ಯಮಂತ್ರಿ ಮಾಡುವುದು ಹೈಕಮಾಂಡ್ ವಿವೇಚನೆಗೆ ಬಿಟ್ಟಿದ್ದು. ಅತೃಪ್ತ ಎಲ್ಲ ಶಾಸಕರಿಗೂ ಮಂತ್ರಿ ಮಾಡುತ್ತೇವೆ ಎಂದು ಬಿಜೆಪಿ ಆಮಿಷ ನೀಡಿದೆ. ಯಾರ ಬೆನ್ನಿಗೂ ಚೂರಿ ಹಾಕಿ ಅಧಿಕಾರ ಕೊಡಿ ಎಂದು ಕೇಳುವ ಜಾಯಮಾನದ ವ್ಯಕ್ತಿ ನಾನಲ್ಲ. ಪಕ್ಷಕ್ಕಾಗಿ ಅಧಿಕಾರ ತ್ಯಾಗ ಮಾಡಲು ನಾನು ಸಿದ್ಧನಿದ್ದೇನೆ ಎಂದು ಡಿಕೆ ಶಿವಕುಮಾರ್ ಹೇಳಿದ್ದರು.