2025ರಲ್ಲಿ ಹಜ್ (Hajj) ಯಾತ್ರೆಗೆ ಸಂಬಂಧಿಸಿದಂತೆ ಸೌದಿ ಅರೇಬಿಯಾ (Saudi Arabia) ಸರ್ಕಾರ ಹಲವು ನಿರ್ಧಾರಗಳನ್ನು ಕೈಗೊಂಡಿದೆ. ಈ ಬಾರಿ ಹಜ್ ಯಾತ್ರೆಗೆ ಮಕ್ಕಳನ್ನು ನಿಷೇಧಿಸಲಾಗಿದೆ ಎಂದು ಅಲ್ಲಿನ ಸರ್ಕಾರ ಘೋಷಿಸಿದೆ. ಅಲ್ಲದೇ ವೀಸಾಗೆ ಸಂಬಂಧಿಸಿದಂತೆ ಹಲವು ಮಹತ್ವದ ಕ್ರಮಗಳನ್ನು ಕೂಡ ಸೌದಿ ಅರೇಬಿಯಾ ಸರ್ಕಾರ ಕೈಗೊಂಡಿದೆ. ಈ ಬಾರಿ ಹಜ್ ಯಾತ್ರೆಗೆ ಮಕ್ಕಳ ಮೇಲೆ ನಿಷೇಧವೇಕೆ? ವೀಸಾಗೆ ಸಂಬಂಧಿಸಿದಂತೆ ಸೌದಿ ಅರೇಬಿಯಾ ತೆಗೆದುಕೊಂಡಿರುವ ಕ್ರಮಗಳೇನು ಎಂಬುದರ ಕುರಿತು ಇಲ್ಲಿ ವಿವರಿಸಲಾಗಿದೆ.
ಹಜ್ ಯಾತ್ರೆಯಲ್ಲಿ ಮಕ್ಕಳಿಗೆ ನಿಷೇಧವೇಕೆ?
2025ರ ಜೂನ್‌ನಲ್ಲಿ ಪ್ರಾರಂಭವಾಗುವ ಹಜ್ ಯಾತ್ರೆಗೆ ನೋಂದಣಿ ಆರಂಭವಾಗಿದೆ. ಈ ಬೆನ್ನಲ್ಲೇ ಸೌದಿ ಅರೇಬಿಯಾ ಸರ್ಕಾರ ಈ ಬಾರಿ ಮಕ್ಕಳನ್ನು ಹಜ್ ಯಾತ್ರೆಗೆ ಅನುಮತಿಸುವುದಿಲ್ಲ ಎಂದು ಹೇಳಿದೆ. ಈ ವಾರ್ಷಿಕ ಯಾತ್ರೆಯ ಸಂದರ್ಭದಲ್ಲಿ ಜನಸಂಖ್ಯೆ ಹೆಚ್ಚಾಗುವ ಹಿನ್ನೆಲೆ ಮಕ್ಕಳ ಆರೋಗ್ಯ ಹಾಗೂ ಸುರಕ್ಷತೆಯ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹಜ್ ಮತ್ತು ಉಮ್ರಾ ಸಚಿವಾಲಯ ತಿಳಿಸಿದೆ.
ಮಕ್ಕಳನ್ನು ಜನದಟ್ಟಣೆಯ ಅಪಾಯದಿಂದ ರಕ್ಷಿಸಲು ಹಾಗೂ ಯಾತ್ರೆಯ ಅನುಭವವನ್ನು ಮತ್ತಷ್ಟು ಸೀಮಾತೀತಗೊಳಿಸಲು ಹಜ್ ಯಾತ್ರೆಗೆ ಮಕ್ಕಳನ್ನು ನಿಷೇಧಿಸಲಾಗಿದೆ. ಅಪಾಯಕಾರಿ ಸನ್ನಿವೇಶಗಳಲ್ಲಿ ಭಾರಿ ಜನಜಂಗುಳಿಯನ್ನು ನಿಯಂತ್ರಿಸಬೇಕಾಗುವುದರಿಂದ ಹಜ್ ಸಂದರ್ಭದಲ್ಲಿ ಸಣ್ಣ ಮಕ್ಕಳು ಗಂಭೀರ ಅಪಾಯಕ್ಕೊಳಗಾಗುವ ಸಾಧ್ಯತೆ ಇದೆ ಎಂದು ಸಚಿವಾಲಯ ಒತ್ತಿ ಹೇಳಿದೆ.
ಇದರೊಂದಿಗೆ, 2025ರ ಹಜ್ ಯಾತ್ರೆ ಕೈಗೊಳ್ಳಲು ಮೊದಲ ಬಾರಿಯ ಯಾತ್ರಾರ್ಥಿಗಳಿಗೆ ಆದ್ಯತೆ ನೀಡಲಾಗಿದೆ. ಎಷ್ಟು ಸಾಧ್ಯವೊ ಅಷ್ಟು ಮುಸ್ಲಿಮರಿಗೆ ತಮ್ಮ ಜೀವಮಾನದಲ್ಲಿ ಒಮ್ಮೆಯಾದರೂ ಈ ಪವಿತ್ರ ಯಾತ್ರೆಯ ಅವಕಾಶ ಮಾಡಿಕೊಡಲು ಸೌದಿ ಅರೇಬಿಯಾ ಈ ಕ್ರಮಕ್ಕೆ ಮುಂದಾಗಿದೆ.
ಹಜ್ ಯಾತ್ರೆಗೆ ನೋಂದಣಿ ಹೇಗೆ?
ಈ ವರ್ಷದ ಹಜ್ ನೋಂದಣಿ ಆರಂಭವಾಗಿದೆ. ಸೌದಿ ಪ್ರಜೆಗಳು ಮತ್ತು ವಿದೇಶಿ ನಿವಾಸಿಗಳಿಗೆ ನೋಂದಣಿ ಆರಂಭವಾಗಿದೆ ಎಂದು ಹಜ್ ಮತ್ತು ಉಮ್ರಾ ಸಚಿವಾಲಯವು ತಮ್ಮ ಎಕ್ಸ್ ಖಾತೆಯಲ್ಲಿ ತಿಳಿಸಿದೆ. ‘ನುಸ್ಕ್’ ಆ್ಯಪ್ ಅಥವಾ ಆನ್‌ಲೈನ್ ಪೋರ್ಟಲ್ ಮೂಲಕ ನೋಂದಣಿ ಮಾಡಬೇಕು.
ಹಜ್‌ಗೆ ಹೋಗಲು ಬಯಸುವವರು ತಮ್ಮ ಆರೋಗ್ಯ ಸ್ಥಿತಿ, ಜೊತೆಯಲ್ಲಿ ಹೋಗುವವರ ಬಗ್ಗೆ ಸಂಪೂರ್ಣ ಮಾಹಿತಿ ನೀಡಬೇಕು. ಅರ್ಜಿ ಸ್ವೀಕರಿಸಿದ ನಂತರ, ಪ್ಯಾಕೇಜ್‌ಗಳು ಲಭ್ಯವಾದಾಗ ಬುಕ್ ಮಾಡಲು ಬಯಸುವವರಿಗೆ ಮಾಹಿತಿ ನೀಡಲಾಗುತ್ತದೆ. ಈ ಹಿಂದೆ ಹಜ್ ಮಾಡದವರಿಗೆ ಆದ್ಯತೆ ನೀಡಲಾಗುವುದು ಎಂದು ಸಚಿವಾಲಯ ತಿಳಿಸಿದೆ.
ಕಠಿಣ ವೀಸಾ ನಿಯಮ:
ಹಜ್ ಯಾತ್ರೆಯಲ್ಲಿ ಅನಧಿಕೃತ ಪಾಲ್ಗೊಳ್ಳುವಿಕೆಯನ್ನು ತಡೆಯಲು ಸೌದಿ ಅರೇಬಿಯಾ ತನ್ನ ವೀಸಾ ನೀತಿಯಲ್ಲಿ ಪ್ರಮುಖ ಬದಲಾವಣೆಗಳನ್ನು ಘೋಷಿಸಿದೆ. ನಿರ್ದಿಷ್ಟ ದೇಶಗಳಿಂದ ಪ್ರವಾಸೋದ್ಯಮ, ವ್ಯಾಪಾರ ಮತ್ತು ಕುಟುಂಬ ಭೇಟಿಗಳಿಗಾಗಿ ಒಂದು ವರ್ಷದ ಬಹು-ಪ್ರವೇಶ ವೀಸಾಗಳನ್ನು ಸರ್ಕಾರ ಅನಿರ್ದಿಷ್ಟವಾಗಿ ಸ್ಥಗಿತಗೊಳಿಸಿದೆ.
ಫೆಬ್ರವರಿ 1, 2025ರಿಂದ ಭಾರತ ಸೇರಿದಂತೆ 14 ದೇಶಗಳ ನಿವಾಸಿಗಳು ಮಾತ್ರ ಏಕಪ್ರವೇಶ ವೀಸಾ (Single Entry Visa) ಗಳಿಗೆ ಅರ್ಹರಾಗಲಿದ್ದಾರೆ. ಈ ನಡೆಯು ಬಹುಪ್ರವೇಶ ವೀಸಾಗಳ ದುರ್ಬಳಕೆಯನ್ನು ಮಟ್ಟ ಹಾಕುವ ಉದ್ದೇಶ ಹೊಂದಿದ್ದು, ಕೆಲವು ಪ್ರವಾಸಿಗರು ಅಧಿಕೃತ ನೋಂದಣಿ ಇಲ್ಲದೆ ಹಜ್ ನಲ್ಲಿ ಭಾಗವಹಿಸುತ್ತಿರುವುದಿಂದ ಈ ನೀತಿಯನ್ನು ಜಾರಿಗೊಳಿಸಲಾಗಿದೆ.
ಫೆಬ್ರವರಿ 1ರಿಂದ ಈ ನಿಯಮಗಳು ಅನ್ವಯವಾಗಿದೆ. ಭಾರತ ಸೇರಿದಂತೆ 14 ದೇಶಗಳ ವ್ಯಕ್ತಿಗಳು 30 ದಿನಗಳವರೆಗೆ ಮಾನ್ಯವಾಗಿರುವ ಏಕ-ಪ್ರವೇಶ ವೀಸಾಗಳಿಗೆ ಮಾತ್ರ ಅರ್ಹರಾಗಿರುತ್ತಾರೆ. ಈ ನಿಯಮಗಳು ಅಲ್ಜೀರಿಯಾ, ಬಾಂಗ್ಲಾದೇಶ, ಈಜಿಪ್ಟ್, ಇಥಿಯೋಪಿಯಾ, ಭಾರತ, ಇಂಡೋನೇಷ್ಯಾ, ಇರಾಕ್, ಜೋರ್ಡಾನ್, ಮೊರಾಕೊ, ನೈಜೀರಿಯಾ, ಪಾಕಿಸ್ತಾನ, ಸುಡಾನ್, ಟುನೀಶಿಯಾ ಮತ್ತು ಯೆಮೆನ್ ದೇಶಗಳಿಂದ ಭೇಟಿ ನೀಡುವ ಜನರಿಗೆ ಅನ್ವಯಿಸುತ್ತದೆ.
ಈ ಹಿಂದೆ ಸೌದಿ ಅರೇಬಿಯಾಕ್ಕೆ ಬಹು-ಪ್ರವೇಶ ವೀಸಾಗಳನ್ನು ಹೊಂದಿರುವ ಅನೇಕ ಜನರು ನೋಂದಣಿ ಇಲ್ಲದೇ ಹಜ್‌ನಲ್ಲಿ ಭಾಗವಹಿಸಿದ್ದರು. ಇದರಿಂದಾಗಿ ಜನದಟ್ಟಣೆ ಉಂಟಾಗಿತ್ತು. 2022ರಲ್ಲಿ ಸುಮಾರು 2.5 ಮಿಲಿಯನ್ ಭಾರತೀಯರು ಸೌದಿ ಅರೇಬಿಯಾಕ್ಕೆ ಭೇಟಿ ನೀಡಿದ್ದರು.
2024ರಲ್ಲಿ, 1,200ಕ್ಕೂ ಹೆಚ್ಚು ಯಾತ್ರಿಕರು ತೀವ್ರ ಶಾಖ ಮತ್ತು ಜನದಟ್ಟಣೆಯಿಂದ ಸಾವನ್ನಪ್ಪಿದ್ದರು. ಯಾವುದೇ ನೋಂದಣಿಯಿಲ್ಲದೇ ಅನಧಿಕೃತವಾಗಿ ಹಜ್ ಯಾತ್ರೆಗೆ ಆಗಮಿಸಿರುವುದು ಈ ದುರಂತಕ್ಕೆ ಕಾರಣವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2024ರಲ್ಲಿ 18.3 ಕೋಟಿಗೂ ಹೆಚ್ಚು ಮುಸ್ಲಿಮರು ಹಜ್ ಯಾತ್ರೆ ಮಾಡಿದ್ದಾರೆ. ಈ ಪೈಕಿ 22 ದೇಶಗಳಿಂದ 16 ಕೋಟಿಗೂ ಹೆಚ್ಚು ಜನರು ಆಗಮಿಸಿದ್ದರು. ಸುಮಾರು 2,22,000 ಸೌದಿ ನಾಗರಿಕರು ಮತ್ತು ನಿವಾಸಿಗಳು ಹಜ್ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು ಎಂದು ಸೌದಿ ಹಜ್ ಅಧಿಕಾರಿಗಳು ತಿಳಿಸಿದ್ದಾರೆ.
ಅಸೋಸಿಯೇಟೆಡ್ ಪ್ರೆಸ್ ವರದಿಯ ಪ್ರಕಾರ, 2015ರಲ್ಲಿ, ಹಜ್ ಸಮಯದಲ್ಲಿ ಮಿನಾದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 2,400ಕ್ಕೂ ಹೆಚ್ಚು ಯಾತ್ರಿಕರು ಸಾವನ್ನಪ್ಪಿದ್ದರು. ಹಜ್ ತೀರ್ಥಯಾತ್ರೆಯಲ್ಲಿ ಸಂಭವಿಸಿದ ಅತ್ಯಂತ ದೊಡ್ಡ ದುರಂತ ಇದಾಗಿದೆ. ಇದಕ್ಕೂ ಮೊದಲು 1990ರಲ್ಲಿ ನಡೆದ ಕಾಲ್ತುಳಿತದಲ್ಲಿ 1,426 ಮಂದಿ ಮೃತಪಟ್ಟಿದ್ದರು.