ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Narendra Modi) ಮೂರನೇ ಬಾರಿ ವಾರಣಾಸಿ (Varanasi) ಲೋಕಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಕೆ ಮಾಡಿದ್ದು ಒಟ್ಟು 3.02 ಕೋಟಿ ಮೌಲ್ಯದ ಚರಾಸ್ತಿಯನ್ನು ಘೋಷಣೆ ಮಾಡಿದ್ದಾರೆ.
ಮೋದಿ ಅವರು 52,920 ರೂಪಾಯಿ ನಗದು ಹೊಂದಿದ್ದಾರೆ. ಜಮೀನು, ಮನೆ, ಕಾರು ಹೊಂದಿಲ್ಲ. ಮೋದಿ ಯಾವುದೇ ಕಂಪನಿಯಲ್ಲಿ ಷೇರು ಖರೀದಿಸಿಲ್ಲ, ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡಿಲ್ಲ.
2018-19 ರ ಆರ್ಥಿಕ ವರ್ಷದಲ್ಲಿ 11,14,230 ರೂ. ಆದಾಯವಿದ್ದರೆ 2022-23 ರಲ್ಲಿ ಇದು 23,56,080 ರೂ.ಗೆ ಏರಿಕೆಯಾಗಿದೆ ಎಂದು ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: 6 ವರ್ಷ ಮೋದಿಯನ್ನು ಚುನಾವಣೆಯಿಂದ ನಿರ್ಬಂಧಿಸುವಂತೆ ಕೋರಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ
ಪ್ರಧಾನಿ ಮೋದಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಎರಡು ಖಾತೆಗಳನ್ನು ಹೊಂದಿದ್ದಾರೆ. ಗಾಂಧಿನಗರ ಎಸ್‌ಬಿಐನ ಶಾಖೆಯಲ್ಲಿ 73,304 ರೂ.ಗಳನ್ನು ಠೇವಣಿ ಇರಿಸಿದ್ದರೆ, ವಾರಣಾಸಿ ಎಸ್‌ಬಿಐನ ಶಾಖೆಯಲ್ಲಿ ಕೇವಲ 7,000 ರೂ ಠೇವಣಿ ಇರಿಸಿದ್ದಾರೆ.
ಎಸ್‌ಬಿಐನಲ್ಲಿ 2,85,60,338 ರೂಪಾಯಿ ಮೌಲ್ಯದ ಫಿಕ್ಸೆಡ್ ಡೆಪಾಸಿಟ್ ಇಟ್ಟಿದ್ದಾರೆ. ಪ್ರಧಾನಿಯವರ ಬಳಿ 2,67,750 ರೂ. ಮೌಲ್ಯದ ನಾಲ್ಕು ಚಿನ್ನದ ಉಂಗುರಗಳಿವೆ. ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್‌ನಲ್ಲಿ 9,12,398 ರೂ. ಇದೆ ಎಂದು ಘೋಷಿಸಿದ್ದಾರೆ. ಇದನ್ನೂ ಓದಿ: ಜೈಲಿನಿಂದ ಹೊರಬರುತ್ತಿದ್ದಂತೆ ರೇವಣ್ಣ ದೇಗುಲ ಯಾತ್ರೆ!
ಪ್ರಧಾನಿ ನರೇಂದ್ರ ಮೋದಿ ಮಧ್ಯಾಹ್ನ ವಾರಣಾಸಿ ಜಿಲ್ಲಾ ಕೇಂದ್ರಕ್ಕೆ ಆಗಮಿಸಿ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಕೆಯ ಸಂದರ್ಭದಲ್ಲಿ ಎನ್‌ಡಿಎ ಮಿತ್ರ ಪಕ್ಷದ ನಾಯಕರು, ಬಿಜೆಪಿ ಮುಖ್ಯಮಂತ್ರಿಗಳು ಮೋದಿಗೆ ಸಾಥ್ ನೀಡಿದರು.
ನಾಮಪತ್ರ ಸಲ್ಲಿಕೆ ಮಾಡುವುದಕ್ಕೆ ಮೊದಲು ದಶಾಶ್ವಮೇಧ ಘಾಟ್‌ನಲ್ಲಿ (Dashashwamedh Ghat) ಗಂಗಾ ನದಿಗೆ (Ganga River) ಗಂಗಾ ಆರತಿ ಮಾಡಿದರು.ನಂತರ ವಾರಣಾಸಿ ಕಾಲಭೈರವ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ವಾರಣಾಸಿ ಜಿಲ್ಲಾ ಕೇಂದ್ರಕ್ಕೆ ಆಗಮಿಸಿ ಮೂರನೇ ಬಾರಿ ನಾಮಪತ್ರ ಸಲ್ಲಿಕೆ ಮಾಡಿದರು.
ಇಂದೇ ನಾಮಪತ್ರ ಸಲ್ಲಿಸಿದ್ದು ಯಾಕೆ?
ಇಂದು ಗಂಗಾ ಸಪ್ತಮಿ. ಹಿಂದೂಗಳ ಪಾಲಿಗೆ ಪವಿತ್ರವಾದ ದಿನವಾಗಿದೆ. ಗಂಗೆ ಜನಿಸಿದಳು ಎಂಬ ನಂಬಿಕೆಯಿದೆ. ಗಂಗಾ ಸಪ್ತಮಿಯಂದು ಶುಭ ಅಭಿಜಿನ್ ಲಗ್ನದಲ್ಲಿ ಮೋದಿ ನಾಮಪತ್ರ ಸಲ್ಲಿಸುವುದು ಶ್ರೇಯಸ್ಕರ ಎಂದು ಪಂಡಿತ್ ಗಣೇಶ್ವರ್ ಶಾಸ್ತ್ರಿ ಸೂಚಿಸಿದ ಹಿನ್ನೆಲೆಯಲ್ಲಿ ಇಂದು ಮೋದಿ ನಾಮಪತ್ರ ಸಲ್ಲಿಕೆ ಮಾಡಿದರು. ರಾಮಮಂದಿರ ಲೋಕಾರ್ಪಣೆಗೆ ಮಹೂರ್ತವನ್ನು ಪಂಡಿತ್ ಗಣೇಶ್ವರ್ ಶಾಸ್ತ್ರಿ ನೀಡಿದ್ದರು.