– ಮಧ್ಯಮ ವರ್ಗದ ಹುಡುಗಿಯರಿಗೆ ಐಷಾರಾಮಿ ಜೀವನದ ಆಮಿಷ
– ಪೋಷಕರಿಗೆ ತಿಳಿಸದಂತೆ ಬ್ಲ್ಯಾಕ್‍ಮೇಲ್
– ಐಎಎಸ್, ಐಪಿಎಸ್ ಅಧಿಕಾರಿಗಳ ವರ್ಗಾವಣೆಯಲ್ಲೂ ಕಿಂಗ್‍ಪಿನ್ ಭಾಗಿ
ಭೋಪಾಲ್: ಮಧ್ಯಪ್ರದೇಶದ ರಾಜಕಾರಣಿಗಳು, ಉನ್ನತ ಅಧಿಕಾರಿಗಳಿಗೆ ಖೆಡ್ಡಾ ತೋಡಿ ದೇಶದಲ್ಲೇ ಭಾರೀ ಸಂಚಲನ ಮೂಡಿಸುತ್ತಿರುವ ಹನಿಟ್ರ್ಯಾಪ್ ಪ್ರಕರಣದ ತನಿಖೆಯ ವೇಳೆ ಮತ್ತಷ್ಟು ಸ್ಫೋಟಕ ವಿಚಾರಗಳು ಬಯಲಾಗುತ್ತಿದೆ. ಇದೀಗ ಇನ್ನೂ ಅಚ್ಚರಿ ಮಾಹಿತಿ ಬಹಿರಂಗವಾಗಿದ್ದು, ರಾಜಕಾರಣಿಗಳನ್ನು ಮೋಹಿಸಲು ಎರಡು ಡಜನ್‍ಗೂ ಅಧಿಕ ಕಾಲೇಜಿನ ಹುಡುಗಿಯರನ್ನು ಬಳಸಿಕೊಳ್ಳಲಾಗಿದೆ ಎಂಬ ಮಾಹಿತಿ ವಿಚಾರಣೆ ವೇಳೆ ತಿಳಿದುಬಂದಿದೆ.
ಈ ಪ್ರಕರಣದಲ್ಲಿ ಪ್ರಸ್ತುತ 12 ಉನ್ನತ ಹುದ್ದೆಯ ಅಧಿಕಾರಿಗಳು ಹಾಗೂ ಮಧ್ಯಪ್ರದೇಶದ ಎಂಟು ಮಾಜಿ ಮಂತ್ರಿಗಳು ಭಾಗಿಯಾಗಿದ್ದು, ವಿಡಿಯೋಗಳು ಲೀಕ್ ಆದರೆ ಭಾರೀ ಸಮಸ್ಯೆ ಎದುರಾಗುವ ಸಾಧ್ಯತೆಯಿದೆ. ಹಗರಣದ ಕಿಂಗ್‍ಪಿನ್ ಶ್ವೇತಾ ಜೈನ್ ಎಸ್‍ಐಟಿ ಮುಂದೆ ತಪ್ಪೊಪ್ಪಿಕೊಂಡಿದ್ದು, ರಾಜಕಾರಣಿಗಳನ್ನು ಸೆಳೆಯಲು ಕನಿಷ್ಠ ಎರಡು ಡಜನ್‍ಗಿಂತಲೂ ಅಂದರೆ ಸುಮಾರು 24 ಜನ ಕಾಲೇಜು ಹುಡುಗಿಯರನ್ನು ಬಳಸಿಕೊಳ್ಳಲಾಗಿದೆ ಎಂದು ಬಾಯ್ಬಿಟ್ಟಿದ್ದಾಳೆ. ಮಧ್ಯಮ ವರ್ಗ ಹಾಗೂ ಕೆಳ ವರ್ಗದ ಕುಟುಂಬಗಳ ಹುಡುಗಿಯರನ್ನು ಬಳಸಿಕೊಳ್ಳಲಾಗಿದೆ ಎಂದು ಇಂದೋರ್ ನಲ್ಲಿ ಎಸ್‍ಐಟಿ ನಡೆಸುತ್ತಿರುವ ವಿಚಾರಣೆ ವೇಳೆ ತಿಳಿಸಿದ್ದಾಳೆ. ಇದನ್ನೂ ಓದಿ: ಮಾಜಿ ರಾಜ್ಯಪಾಲರು, ಮಾಜಿ ಸಿಎಂ, ಅಧಿಕಾರಿಗಳ ಸ್ಕ್ಯಾಂಡಲ್ – 40 ಕಾಲ್ ಗರ್ಲ್ಸ್‌ಗಳಿಂದ ಹನಿಟ್ರ್ಯಾಪ್
Advertisement
Advertisement
ವಿಐಪಿಗಳಿಂದ ಸರ್ಕಾರದ ನೂರಾರು ಕೋಟಿ ರೂ.ಗಳ ಗುತ್ತಿಗೆಗಳನ್ನು ಪಡೆಯುವುದೇ ಹನಿಟ್ರ್ಯಾಪ್‍ನ ಮೂಲ ಉದ್ದೇಶವಾಗಿತ್ತು. ಹೆಚ್ಚಿನ ಗುತ್ತಿಗೆಗಳನ್ನು ಪ್ರತಿಷ್ಠಿತ ಕಂಪನಿಗಳಿಗೆ ನಾನು ಹಾಗೂ ನನ್ನ ಸಹವರ್ತಿ ಆರತಿ ದಯಾಳ್ ಇಬ್ಬರೂ ಸಹ ಕಮಿಷನ್ ಆಧಾರದ ಮೇಲೆ ಕೊಡಿಸುತ್ತಿದ್ದೆವು. ಈ ಗುತ್ತಿಗೆಗಳನ್ನು ಕೊಡಿಸುವುದರ ಜೊತೆಗೆ ನಾನು ಹಲವಾರು ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳಿಗೆ ಎಲ್ಲಿ ಹುದ್ದೆ ನೀಡಬೇಕು ಎನ್ನುವುದನ್ನು ಸಹ ನಿರ್ವಹಿಸುತ್ತಿದ್ದೆ ಎಂದು ಪ್ರಕರಣದ ಕಿಂಗ್‍ಪಿನ್ ಶ್ವೇತಾ ಜೈನ್ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾಳೆ.
Advertisement
ಬೇಡಿಕೆ ಮೇರೆಗೆ ಅನೇಕ ಕಾಲೇಜು ಹುಡುಗಿಯರನ್ನು ಆಮಿಷವೊಡ್ಡಿ, ಅಂತಿಮವಾಗಿ ಅಧಿಕಾರಿಗಳು, ರಾಜಕಾರಣಿಗಳ ಜೊತೆಗೆ ಮಲಗಲು ಒತ್ತಾಯಿಸುತ್ತಿದ್ದೆವು. ಮಲಗಿದ ಪುರುಷರೆಲ್ಲ ಹುಡುಗಿಯರ ತಂದೆಯ ವಯಸ್ಸಿನವರು ಎಂದು ಶ್ವೇತಾ ತಿಳಿಸಿದ್ದಾಳೆ.
Advertisement
ವಿದ್ಯಾರ್ಥಿನಿಯರಿಗೆ ಆಮಿಷ:
ಹನಿ ಟ್ರ್ಯಾಪ್ ಕಹಾನಿ ಕುರಿತು ಕಾಲೇಜು ಹುಡುಗಿ ಮೋನಿಕಾ ಎಸ್‍ಐಟಿಗೆ ಮಾಹಿತಿ ನೀಡಿದ್ದು, ಪ್ರತಿಷ್ಠಿತ ಕಾಲೇಜಿನಲ್ಲಿ ಪ್ರವೇಶ ಕೊಡಿಸುವಂತೆ ಕೇಳಿಕೊಂಡು ಶ್ವೇತಾಳನ್ನು ಸಂಪರ್ಕಿಸಿದ್ದೆ. ಆಗ ಶ್ವೇತಾ ಈ ಕುರಿತು ನನಗೆ ತಿಳಿಸಿದ್ದಳು. ನಾನು ಮೊದಲು ನಿರಾಕರಿಸಿದ್ದೆ. ಬಳಿಕ ಭೋಪಾಲಿನಲ್ಲಿ ನನ್ನನ್ನು ಮನವೊಲಿಸಲು, ಶ್ವೇತಾ ಭೋಪಾಲಿನ ಸಚಿವಾಲಯಕ್ಕೆ ಕರೆದೊಯ್ದಿದ್ದಳು. ಅಲ್ಲಿ ಕಾರ್ಯದರ್ಶಿ ದರ್ಜೆಯ ಮೂವರು ಐಎಎಸ್ ಅಧಿಕಾರಿಗಳೊಂದಿಗೆ ಪರಿಚಯಿಸಲಾಗಿತ್ತು. ಅಲ್ಲದೆ ಇಂದೋರ್ ಹಾಗೂ ಭೋಪಾಲ್ ನಡುವೆ ಸಂಚರಿಸಲು ನನಗೆ ಆಡಿ ಕಾರ್ ನೀಡಿದ್ದಳು ಎಂದು ತಿಳಿಸಿದ್ದಾಳೆ.
ಶ್ವೇತಾಳ ಮಾತಿಗೆ ಮೋನಿಕಾ ಆರಂಭದಲ್ಲಿ ನಿರಾಕರಿಸಿ ನರಸಿಂಗ್‍ಘರ್‍ನಲ್ಲಿರುವ ಪೋಷಕರ ಮನೆಗೆ ತೆರಳಿದ್ದಳು. ಇದಾದ ಬಳಿಕ ಶ್ವೇತಾಳ ಸ್ನೇಹಿತೆ ಆರತಿ ಮೋನಿಕಾ ಮನೆಗೆ ಬಂದು, ಮೋನಿಕಾಳ ಶಿಕ್ಷಣದ ಎಲ್ಲ ವೆಚ್ಚವನ್ನು ನಮ್ಮ ಎನ್‍ಜಿಓ ಭರಿಸಲಿದೆ ಎಂದು ಮನವೊಲಿಸಿ ಮೋನಿಕಾಳನ್ನು ಕರೆ ತಂದಿದ್ದಾಳೆ. ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದಕ್ಕೆ ತಂದೆ ಮೋನಿಕಾಳನ್ನು ಭೋಪಾಲ್‍ಗೆ ಕಳುಹಿಸಿದ್ದರು. ಮೋನಿಕಾಳನ್ನು ಕರೆತಂದ ಮೇಲೆ ಅಧಿಕಾರಿಯೊಂದಿಗೆ ಶ್ವೇತಾ ಲೈಂಗಿಕ ಸಂಪರ್ಕ ನಡೆಸುತ್ತಿದ್ದ ವಿಡಿಯೋವನ್ನು ತೋರಿಸಿದ್ದಾಳೆ. ನಂತರ ಆರತಿ ಮೋನಿಕಾಗೆ ಉನ್ನತ ಮಟ್ಟವನ್ನು ತಲುಪಲು ಇಂತಹ ಕೆಲಸವನ್ನು ಮಾಡಬೇಕು ಎಂದು ತಲೆ ಕೆಡಿಸಿದ್ದಾಳೆ ಎಂದು ಎಸ್‍ಐಟಿ ಅಧಿಕಾರಿಗಳು ತಿಳಿಸಿದ್ದಾರೆ.
ಶ್ವೇತಾ ಹಾಗೂ ಆರತಿ ಎನ್‍ಜಿಓ ಹೆಸರಿನಲ್ಲಿ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳ ಹುಡುಗಿಯರನ್ನು ಟಾರ್ಗೆಟ್ ಮಾಡಿ, ಉದ್ಯೋಗ ಹಾಗೂ ಕಾಲೇಜಿನ ಆಮಿಷವೊಡ್ಡಿ, ಅವರ ಬ್ರೇನ್ ವಾಶ್ ಮಾಡಿ ಹನಿ ಟ್ರ್ಯಾಪ್ ದಂಧೆಗೆ ಕರೆ ತರುತ್ತಿದ್ದರು ಎಂದು ಎಸ್‍ಐಟಿ ತಿಳಿಸಿದೆ.
ಆಗಸ್ಟ್ 30ರಂದು ಆರತಿ ಹಾಗೂ ಆಕೆಯ ಸಹವರ್ತಿ ರೂಪಾ ಐಷಾರಾಮಿ ಕಾರಿನಲ್ಲಿ ನನ್ನನ್ನು ಇಂದೋರ್‍ಗೆ ಕರೆತಂದರು. ನಂತರ ಇನ್ಫಿನಿಟಿ ಹೋಟೆಲ್‍ನಲ್ಲಿ ತಂಗಿದ್ದೆವು. ಮರುದಿನ ಸಂಜೆ ಸರ್ಕಾರಿ ಎಂಜಿನಿಯರ್ ಹರ್ಭಜನ್ ಸಿಂಗ್(60)ಅವರನ್ನು ಪರಿಚಯಿಸಿದರು. ನಂತರ ಆತನೊಂದಿಗೆ ಒಂದು ರಾತ್ರಿ ಕಳೆಯಬೇಕಾಯಿತು. ನಾನು ಹರ್ಭಜನ್ ಜೊತೆ ಮಲಗಿದ್ದ ವಿಡಿಯೋವನ್ನು ಆರತಿ ರೆಕಾರ್ಡ್ ಮಾಡಿದ್ದಾಳೆ ಎಂದು ಮೋನಿಕಾ ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾಳೆ.
ಈ ವಿಡಿಯೋವನ್ನು ಚಿತ್ರೀಕರಿಸುತ್ತಿದ್ದಂತೆ, ಅದರ ಆಧಾರದ ಮೇಲೆ ಶ್ವೇತಾ ಹರ್ಭಜನ್ ಸಿಂಗ್ ಬಳಿ 3 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದಾಳೆ. ಈ ಕುರಿತು ಪೋಷಕರಿಗೆ ಮಾಹಿತಿ ನೀಡಿದರೆ ವಿಡಿಯೋವನ್ನು ವೆಬ್‍ಸೈಟ್‍ಗೆ ಅಪ್‍ಲೋಡ್ ಮಾಡುತ್ತೇನೆ ಎಂದು ನನಗೂ ಬೆದರಿಕೆ ಹಾಕಿದ್ದಳು ಎಂದು ಮೋನಿಕಾ ವಿವರಿಸಿದ್ದಾಳೆ.
ಕಾಲೇಜು ಹುಡುಗಿಯರಿಗೆ ಐಶಾರಾಮಿ ಜೀವನದ ಆಸೆ ತೋರಿಸಿ ಅವರ ಬ್ರೇನ್ ವಾಶ್ ಮಾಡಿ, ಹನಿಟ್ರ್ಯಾಪ್ ದಂಧೆಗೆ ಕರೆತರುತ್ತಾರೆ. ಮೊದಲು 5 ಸ್ಟಾರ್ ಹೋಟೆಲ್, ಗ್ಲಾಮರ್ ಮೂಲಕ ಕಾಲೇಜು ಹುಡುಗಿಯರನ್ನು ಸೆಳೆಯುತ್ತಿದ್ದರು. ಈ ಮೂಲಕ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿಯನ್ನೂ ಒಳಗೊಂಡಂತೆ, ಸಚಿವರು, ಉನ್ನತ ಅಧಿಕಾರಿಗಳನ್ನು ಹನಿಟ್ರ್ಯಾಪ್‍ಗೆ ಬಲಿಪಶುಗಳನ್ನಾಗಿ ಮಾಡಿದ್ದಾರೆ. ಇದಕ್ಕಾಗಿ 40 ಕಾಲ್ ಗರ್ಲ್ಸ್, ಕಾಲೇಜು ಹುಡುಗಿಯರನ್ನು ಬಳಸಿಕೊಳ್ಳುತ್ತಿದ್ದರು ಎಂದು ಇಂದೋರ್‍ನ ಮಹಿಳಾ ಎಸ್‍ಎಸ್‍ಪಿ ರುಚಿ ವರ್ಧನ್ ಸಿಂಗ್ ತಿಳಿಸಿದ್ದಾರೆ.
ಹೇಗೆ ಬೆಳಕಿಗೆ ಬಂತು?
ಕರೆ ಮಾಡಿ 3 ಕೋಟಿ ರೂ. ನೀಡುವಂತೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಎಂಜಿನಿಯರ್ ಒಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ವೇಳೆ ಪೊಲೀಸರು ವ್ಯೂಹ ರಚಿಸಿಕೊಂಡಿದ್ದಾರೆ. ನಂತರ ಎಂಜಿನಿಯರ್ ರಿಂದ ಕರೆ ಮಾಡಿಸಿ ಮೊದಲ ಹಂತದಲ್ಲಿ 50 ಲಕ್ಷ ನೀಡುವುದಾಗಿ ಹೇಳುವಂತೆ ಸೂಚಿಸಿದ್ದಾರೆ. ನಂತರ ಹಣ ನೀಡಲು ನಿಗದಿತ ಸ್ಥಳಕ್ಕೆ ಬರುವಂತೆ ಆರೋಪಿಗಳಿಗೆ ತಿಳಿಸಿದ್ದಾರೆ. ಹೀಗೆ ಬಂದಿಳಿದವರಿಗೆ ಎಂಜಿನಿಯರ್ ಹಣ ನೀಡುವ ವೇಳೆ ಮೂವರು ಆರೋಪಿಗಳು ಸಿಕ್ಕಿಬಿದ್ದಿದ್ದರು. ಇವರನ್ನು ವಿಚಾರಣೆ ನಡೆಸಿದಾಗ ಬಹೃತ್ ಹನಿಟ್ರ್ಯಾಪ್ ಜಾಲ ಬೆಳಕಿಗೆ ಬಂದಿದೆ.