ಮುಂಬೈ: 2019ರ ವಿಶ್ವಕಪ್ ಟೂರ್ನಿಗೆ ಆಯ್ಕೆಯಾದ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿರುವ ಅಂಬಟಿ ರಾಯುಡು ಅವರು ಆಯ್ಕೆ ಸಮಿತಿ ವಿರುದ್ಧ ವ್ಯಂಗ್ಯವಾಡಿ ಮಾಡಿದ್ದ ಟ್ವೀಟ್‍ಗೆ ಬಿಸಿಸಿಐ ಸಮಿತಿ ಪ್ರತಿಕ್ರಿಯೆ ನೀಡಿದೆ.
ರಾಯುಡು ವಿಶ್ವಕಪ್ ಆಯ್ಕೆಗೆ ಸಂಬಂಧಿಸಿದಂತೆ ತಮ್ಮ ಸ್ಥಾನ ಖಚಿತವೆಂದೇ ಭಾವಿಸಿದ್ದರು. ಆದರೆ ಆಯ್ಕೆ ಸಮಿತಿ ಅವರನ್ನು ಕೈ ಬಿಟ್ಟು ಶಾಕ್ ನೀಡಿದ್ದು ಎಲ್ಲರಿಗೂ ತಿಳಿದ ಸಂಗತಿ. ಈ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿದ್ದ ರಾಯುಡು, ವಿಶ್ವಕಪ್ ನೋಡಲು 3ಡಿ ಗ್ಲಾಸ್ ಬುಕ್ ಮಾಡಿದ್ದಾಗಿ ಟ್ವೀಟ್ ಮಾಡಿ ಪರೋಕ್ಷವಾಗಿ ಆಯ್ಕೆ ಸಮಿತಿಗೆ ಟಾಂಗ್ ನೀಡಿದ್ದರು.
Just Ordered a new set of 3d glasses to watch the world cup ????????..
— Ambati Rayudu (@RayuduAmbati) April 16, 2019
ರಾಯುಡು ಟ್ವೀಟ್‍ಗೆ ಪ್ರತಿಕ್ರಿಯೆ ನೀಡಿರುವ ಬಿಸಿಸಿಐ ಆಯ್ಕೆ ಸಮಿತಿಯ ಸದಸ್ಯರೊಬ್ಬರು, ನಮಗೆ ರಾಯುಡು ಅವರ ಭಾವನೆ ಆರ್ಥವಾಗುತ್ತದೆ. ಅವರ ಟ್ವೀಟ್ ಅನ್ನು ನೋಟ್ ಮಾಡಿದ್ದೇವೆ. ಇತಿಮಿತಿಯನ್ನ ಮೀರದೆ ತಮ್ಮ ಭಾವೋದ್ವೇಗವನ್ನು ಹಂಚಿಕೊಳ್ಳುವ ಅನಿವಾರ್ಯತೆ ರಾಯುಡು ಅವರ ಮೇಲಿದೆ. ಇದರಿಂದ ಹೊರಕ್ಕೆ ಬರಲು ಅವರಿಗೆ ಕೆಲ ಸಮಯ ಬೇಕಾಗುತ್ತದೆ. ಈಗಾಗಲೇ ಅವರು ಸ್ಟಾಂಡ್ ಬೈ ಆಟಗಾರರಾಗಿದ್ದು, ತಂಡದಲ್ಲಿ ಆಟಗಾರರು ಗಾಯಗೊಂಡರೆ ಆಡುವ ಅವಕಾಶವನ್ನು ಪಡೆದುಕೊಳ್ಳುತ್ತಾರೆ. ಸದ್ಯ ಅವರ ವಿರುದ್ಧ ಯಾವುದೇ ಶಿಸ್ತುಕ್ರಮ ಕೈಗೊಳ್ಳುವ ಅಗತ್ಯವಿಲ್ಲ ಎಂದಿದ್ದಾರೆ.
ಇತ್ತ ವಿಶ್ವಕಪ್ ತಂಡದಿಂದ ಪಂತ್‍ರನ್ನು ಕೈಬಿಟ್ಟಿರುವ ಬಗ್ಗೆ ಮೊದಲ ಬಾರಿಗೆ ದಿನೇಶ್ ಕಾರ್ತಿಕ್ ಪ್ರತಿಕ್ರಿಯೆ ನೀಡಿದ್ದು, 2017 ರಲ್ಲಿ ಟೀಂ ಇಂಡಿಯಾಗೆ ಕಮ್ ಬ್ಯಾಕ್ ಮಾಡುವ ಮೂಲಕ ನನ್ನ ವಿಶ್ವಕಪ್ ಪ್ರಯಾಣ ಆರಂಭವಾಯಿತು. ಯಾವುದಾದರೂ ಪ್ರತ್ಯೇಕತೆಯನ್ನು ನನ್ನ ಪ್ರದರ್ಶನದಲ್ಲಿ ತೋರುವಂತೆ ಮಾಡಿದರೆ ಮುಂದಿನ ವಿಶ್ವಕಪ್ ಟೂರ್ನಿಗೆ ಆಯ್ಕೆ ಮಾಡುತ್ತಾರೆ ಎಂಬ ವಿಶ್ವಾಸ ಇತ್ತು. ಆದರೆ ಇಂದು ನಾವು (ಪಂತ್, ಕಾರ್ತಿಕ್) ಈ ವಿಚಾರವಾಗಿ ಮಾತನಾಡುವುದು ಸಮಂಜಸವಲ್ಲ. ಏಕೆಂದರೆ ಆತನಿಗೂ ಇದರ ನೋವಿರುತ್ತದೆ. ಆದರೆ ಆತನಿಗೆ ದೊರೆಯುವ ಅವಕಾಶಗಳ ಬಗ್ಗೆ ಸಂಪೂರ್ಣವಾಗಿ ತಿಳಿದಿದೆ. ದೀರ್ಘ ಸಮಯ ಆತನಿಗೆ ಕ್ರಿಕೆಟ್ ಆಡುವ ಅವಕಾಶ ಇದೆ ಎಂದು ನನಗೆ ಅನ್ನಿಸುತ್ತಿದೆ ಎಂದು 33 ವರ್ಷದ ದಿನೇಶ್ ಕಾರ್ತಿಕ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.