ಉಡುಪಿ: ಶಾಲೆಯಲ್ಲಿ ಪುಸ್ತಕ, ಯೂನಿಫಾರ್ಮ್, ಶೂ, ಮಧ್ಯಾಹ್ನದ ಬಿಸಿಯೂಟವನ್ನು ಮಕ್ಕಳಿಗೆ ಉಚಿತವಾಗಿ ನೀಡಲಾಗುತ್ತದೆ. ಗ್ರಾಮೀಣ ಭಾಗದ ಕೆಲ ಶಾಲೆಗಳಲ್ಲಿ ಉಚಿತ ವಾಹನ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ. ಆದರೆ ಉಡುಪಿಯ ನಿಟ್ಟೂರಲ್ಲೊಂದು ಶಾಲೆಯಿದೆ. ಶಾಲೆ ಆರಂಭವಾದ ಒಂದು ತಿಂಗಳ ಒಳಗೆ ಕಡು ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ಸ್ಪೆಷಲ್ ಗಿಫ್ಟೊಂದನ್ನು ಶಾಲೆ ಕೊಟ್ಟಿದೆ. ಇದರ ಹಿಂದೆ ನಮ್ಮ ಪಬ್ಲಿಕ್ ಹೀರೋ ಇದ್ದಾರೆ ಎಂಬುದು ಮತ್ತೊಂದು ವಿಶೇಷ.
ಶಾಲೆಯಲ್ಲಿ ಮಕ್ಕಳು ಬ್ಯಾಗ್ ಹೊತ್ತು ಮನೆಗೆ ಹೋಗೋದನ್ನು ನೋಡಿರುತ್ತೇವೆ. ಬ್ಯಾಗ್ ಜೊತೆ ಬ್ಯಾಟು- ಬಾಲು ತೆಗೆದುಕೊಂಡು ಹೋಗೋದನ್ನು ನೋಡಿದ್ದೇವೆ. ಆದರೆ ಉಡುಪಿ ಜಿಲ್ಲೆಯ ನಿಟ್ಟೂರು ಪ್ರೌಢಶಾಲೆಯ ವಿದ್ಯಾರ್ಥಿಗಳು ಮನೆಗೆ ಹೋಗುವಾಗ ಎಲ್ಪಿಜಿ ಸಿಲಿಂಡರ್, ಗ್ಯಾಸ್ ಸ್ಟವ್, ರೆಗ್ಯೂಲೇಟರ್ ಹಿಡಿದುಕೊಂಡು ಖುಷಿ ಖುಷಿಯಿಂದ ಹೊರಟಿದ್ದರು. ವಿಷಯ ಏನಪ್ಪಾ ಅಂದರೆ ನಿಟ್ಟೂರು ಪ್ರೌಢಶಾಲೆಯ ಕಡುಬಡವ ವಿದ್ಯಾರ್ಥಿಗಳಿಗೆ ಸ್ಪೆಷಲ್ ಗಿಫ್ಟನ್ನು ಈ ಶಾಲೆ ನೀಡಿದೆ. ನಾಲ್ಕಾರು ದಾನಿಗಳನ್ನು, ಹಳೇ ವಿದ್ಯಾರ್ಥಿಗಳನ್ನು ಸಂಪರ್ಕ ಮಾಡಿ, ಧನ ಸಹಾಯ ಪಡೆದು 28 ವಿದ್ಯಾರ್ಥಿಗಳ ಮನೆಗೆ ಗ್ಯಾಸ್ ಸಿಲಿಂಡರ್- ರೆಗ್ಯೂಲೇಟರ್, ಸ್ಟವ್ ಅನ್ನು ಶಾಲೆಯ ಶಿಕ್ಷಕರು ಕೊಟ್ಟಿದ್ದಾರೆ. ಈ ಸ್ಪೆಷಲ್ ಗಿಫ್ಟಿನಿಂದ ಮಕ್ಕಳು ಖುಷಿಯಾಗಿದ್ದಾರೆ.
Advertisement
Advertisement
ನಾವು ಗುಡಿಸಲಿನಲ್ಲಿ ಜೀವನ ಮಾಡುವುದು. ಒಂದೇ ಕೋಣೆಯೊಳಗೆ ಅಡುಗೆ, ಊಟ, ನಿದ್ದೆ ಮಾಡಬೇಕು. ಬೇಸಿಗೆಯಲ್ಲಿ ಹೊರಗಡೆ ಅಡುಗೆ ಮಾಡುತ್ತಿದ್ದೆವು. ಮಳೆಗಾಲದಲ್ಲಿ ಕಟ್ಟಿಗೆ ಹೊಂದಿಸುವುದು ಕಷ್ಟ. ಈಗ ಶಾಲೆಯಲ್ಲೇ ಗ್ಯಾಸ್ ಕೊಟ್ಟಿದ್ದಾರೆ. ಇದರಿಂದ ನಮ್ಮ ಅರ್ಧ ಕಷ್ಟ ಕಮ್ಮಿಯಾಗುತ್ತದೆ. ಮುರಳಿ ಸರ್ ಮತ್ತು ದಾನಿಗಳಿಗೆ ಥ್ಯಾಂಕ್ಸ್ ಅಂತ ವಿದ್ಯಾರ್ಥಿನಿ ರಶ್ಮೀ ಹೇಳಿದ್ದಾಳೆ.
Advertisement
ಉಡುಪಿಯ ಪಬ್ಲಿಕ್ ಹೀರೋ ಮುರಲಿ ಕಡೆಕಾರು ಈ ಯೋಜನೆಯ ಹಿಂದಿರುವ ವ್ಯಕ್ತಿ. ಎಲ್ಲಾ ಮನೆಗಳನ್ನು ಸಂಪರ್ಕ ಮಾಡಿ, ವಿಚಾರಿಸಿ- ಗ್ಯಾಸ್ ಉಪಯೋಗಿಸುವುದನ್ನು ಕಲಿಸಿ ಇದೀಗ ಗ್ಯಾಸ್ ಸಿಲಿಂಡರ್ ಹಾಗೂ ಸ್ಟವ್ವನ್ನು ಕೊಟ್ಟಿದ್ದಾರೆ.
Advertisement
ನಾಲ್ಕು ಗೋಡೆಯೊಳಗೆ ಮಕ್ಕಳಿಗೆ ಪಾಠ ಹೇಳುವುದು ಮಾತ್ರ ಶಿಕ್ಷಕನ ಕೆಲಸ ಅಲ್ಲ. ತಮ್ಮ ವಿದ್ಯಾರ್ಥಿಗಳ ಕುಟುಂಬದ ಕಷ್ಟಕ್ಕೆ ಸ್ಪಂದಿಸುವುದೂ ಶಿಕ್ಷಕರಾದ ನಮ್ಮ ಕರ್ತವ್ಯ. ಸಂಚಯಿಕ ಬ್ಯಾಂಕ್, ಬಿಸಿಯೂಟ, ವಾಹನ ವ್ಯವಸ್ಥೆ ಹೀಗೆ ಎಲ್ಲಾ ವ್ಯವಸ್ಥೆಯನ್ನು ವಿದ್ಯಾರ್ಥಿಗಳಿಗೆ ಮಾಡಿಕೊಟ್ಟಿದ್ದೇವೆ. ಮಕ್ಕಳ ಕುಟುಂಬಸ್ಥರು ಅನಾರೋಗ್ಯ ಪೀಡಿತರಾದರೂ ಅವರಿಗೆ ಚಿಕಿತ್ಸೆಯ ವೆಚ್ಚ ಶಾಲೆ ಭರಿಸುತ್ತದೆ. ಒಂದು ರುಪಾಯಿಯನ್ನು ಪಡೆಯದೆ ಮಕ್ಕಳ ಶಿಕ್ಷಣ ಕೊಡುತ್ತಿದ್ದೇವೆ ಎಂದು ಮುರಳಿ ಕಡೆಕಾರು ಹೇಳಿದರು.
ಶಾಲೆಯಲ್ಲಿರುವ 171 ವಿದ್ಯಾರ್ಥಿಗಳ ಮನೆಯಲ್ಲೂ ಅಡುಗೆ ಮಾಡುವಾಗ ಅಮ್ಮಂದಿರು ಕಣ್ಣೀರು ಇಡುವುದನ್ನು ನಿಟ್ಟೂರು ಶಾಲೆ ತಪ್ಪಿಸಿದೆ. ಎಲ್ಲಾ ಸರಕಾರಿ ಶಾಲೆಗಳಲ್ಲೂ ಇಂತಹ ಕೆಲಸ ಆದರತೆ ಬಡವರ ಕಷ್ಟ ದೂರವಾಗುತ್ತದೆ. ಶಿಕ್ಷಕರು ಇಂತಹ ಸಾರ್ಥಕ್ಯ ಯೋಜನೆ ಕೈಗೆತ್ತಿಕೊಳ್ಳಬೇಕು ಎಂಬುದು ಪ್ರಜ್ಞಾವಂತರ ಅಭಿಪ್ರಾಯವಾಗಿದೆ.