‘ಗೆಲ್ಲುವ ಕುದುರೆ’ಯ ಅಗತ್ಯ ನಮಗಿಲ್ಲ, ಚುನಾವಣೆಯ ತಂತ್ರಗಾರಿಕೆ ನಮಗೂ ಗೊತ್ತು

Public TV
11 Min Read
prashanth kishore 9

ಗೆಲ್ಲುವ ಕುದುರೆಗೆ ಯಾವಾಗಲೂ ಬೇಡಿಕೆ ಜಾಸ್ತಿ. ಈ ಕಾರಣಕ್ಕೆ ಚೆನ್ನಾಗಿರಲಿ, ಮುಂದೆಯೂ ಸ್ಪರ್ಧೆಯನ್ನು ಗೆಲ್ಲಿಸಿಕೊಡಲಿ ಎಂದು ಮಾಲೀಕ ಕುದುರೆಯನ್ನು ಚೆನ್ನಾಗಿ ಸಾಕುತ್ತಾನೆ. ಚೆನ್ನಾಗಿ ತಿಂದ ಕುದುರೆ ನನ್ನಿಂದನೇ ಮಾಲೀಕ ಇರುವುದು ಎಂದು ತಿಳಿದು ಅಹಂಕಾರದಿಂದ ಬೇಕು ಬೇಕಾದಂತೆ ವರ್ತಿಸಿದರೆ ಮಾಲೀಕನ ಕೋಪಕ್ಕೆ ಗುರಿಯಾಗುತ್ತದೆ. ಒಂದು ಹಂತದವರೆಗೆ ಮಾಲೀಕ ಕುದುರೆಯ ಆಟವನ್ನು ಸಹಿಸಿಕೊಳ್ಳಬಹುದು. ಆದರೆ ಆಟ ಮಿತಿಮೀರಿದಾಗ ನೀನು ನನ್ನ ಜೊತೆ ಇದ್ದರೆಷ್ಟು ಬಿಟ್ಟರೆಷ್ಟು ಎಂದು ತಿಳಿದು ಕುದುರೆಯನ್ನೇ ಲಾಯದಿಂದ ಹೊರಹಾಕುತ್ತಾನೆ.

ಚುನಾವಣಾ ತಂತ್ರಗಾರ ಎಂಬ ಬಿರುದಾಂಕಿತ ಪ್ರಶಾಂತ್ ಕಿಶೋರ್ ಅವರಿಗೆ ಸದ್ಯಕ್ಕೆ ಇದೇ ಆಗಿರುವುದು. ಗುಜರಾತ್ ಚುನಾವಣೆಯಲ್ಲಿ ಮೋದಿ ಪರ ಕೆಲಸ, 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪರ ತಂತ್ರಗಾರಿಕೆ, 2015 ರಲ್ಲಿ ಬಿಹಾರ ಘಟಬಂಧನ್ ಅಡಿಯಲ್ಲಿ ಪ್ರಚಾರ, 2017ರಲ್ಲಿ ಪಂಜಾಬ್‍ನಲ್ಲಿ ಅಮರಿಂದರ್ ಸಿಂಗ್ ‘ಕೈ’ ಹಿಡಿದು 2019 ರಲ್ಲಿ ಆಂಧ್ರದಲ್ಲಿ ವೈಎಸ್‍ಆರ್ ಕಾಂಗ್ರೆಸ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಚುನಾವಣಾ ತಂತ್ರಗಾರ ಎಂದೇ ಖ್ಯಾತಿ ಪಡೆದು ‘ಗೆಲ್ಲುವ ಕುದುರೆ‘ಯಾಗಿದ್ದ ಪ್ರಶಾಂತ್ ಕಿಶೋರ್ ಅವರನ್ನು ಬಿಹಾರ ಸಿಎಂ ನಿತೀಶ್ ಕುಮಾರ್ ಅವರು ಜೆಡಿಯು(ಜನತಾ ದಳ ಯುನೈಟೆಡ್) ಪಕ್ಷದಿಂದ ಉಚ್ಚಾಟಿಸಿದ್ದಾರೆ.

ಸಿಎಎ ವಿಚಾರದಲ್ಲಿ ಬಹಿರಂಗವಾಗಿ ಹೇಳಿಕೆ ನೀಡುತ್ತಿದ್ದ ಹಿನ್ನೆಲೆಯಲ್ಲಿ ಬಿಹಾರ ಸಿಎಂ ನಿತೀಶ್ ಕುಮಾರ್ ಜೆಡಿಯು ರಾಷ್ಟ್ರೀಯ ಉಪಾಧ್ಯಕ್ಷರಾಗಿದ್ದ ಪ್ರಶಾಂತ್ ಕಿಶೋರ್ ಅವರನ್ನು ಉಚ್ಚಾಟನೆ ಮಾಡಿದ್ದಾರೆ. ಈ ಮೂಲಕ ಮುಂದಿನ ಚುನಾವಣೆಯಲ್ಲಿ ನಿಮ್ಮ ತಂತ್ರಗಾರಿಕೆಯ ಅಗತ್ಯವೇ ಇಲ್ಲ. ನಾವೇ ಚುನಾವಣೆ ಎದುರಿಸುತ್ತೇವೆ ಎನ್ನುವ ಸ್ಪಷ್ಟ ಸಂದೇಶವನ್ನು ರವಾನಿಸಿದ್ದಾರೆ.

ಹಣ, ಜಾತಿ ಬಲದ ಮೂಲಕ ಭಾರತದಲ್ಲಿ ಚುನಾವಣೆ ನಡೆಯುತ್ತದೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಈ ಹಣ, ಜಾತಿಯ ಬಲೆಗೆ ಮತದಾರರು ಬಿದ್ದರೂ ಯುವ ಮತದಾರರು ಇದಕ್ಕೆಲ್ಲ ಅಷ್ಟು ಸುಲಭವಾಗಿ ಬೀಳುವುದಿಲ್ಲ. ಈ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣದ ಮೂಲಕವೇ ಚುನಾವಣಾ ತಂತ್ರಗಾರಿಕೆ ರೂಪಿಸಿ ಬೇಕಾದ ವ್ಯಕ್ತಿಗಳ ಮನಸ್ಸಿಗೆ ನಾಟುವಂತೆ ಪ್ರಚಾರ ನಡೆಸಬೇಕು ಎನ್ನುವ ಹೊಸ ಮಾದರಿಯ ಪ್ರಚಾರ ತಂತ್ರ ಬೆಳಕಿಗೆ ಬಂದಿದ್ದು 2014ರ ಲೋಕಸಭಾ ಚುನಾವಣೆಯಲ್ಲಿ. ಈ ರೀತಿ ಟಾರ್ಗೆಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಮಾಡುವ ವಿಚಾರದಲ್ಲಿ ಪ್ರಶಾಂತ್ ಕಿಶೋರ್ ಪಂಟರ್ ಆಗಿದ್ದಾರೆ. ಇಂಡಿಯನ್ ಪೊಲಿಟಿಕಲ್ ಆಕ್ಷನ್ ಕಮಿಟಿ(ಐ-ಪ್ಯಾಕ್) ಹೆಸರಿನಲ್ಲಿ ಸಂಸ್ಥೆ ತೆರೆದು ದೂರದಲ್ಲಿ ಕುಳಿತು ಪಕ್ಷದ ಪರವಾಗಿ ಪ್ರಚಾರ ನಡೆಸಿ ಕೆಲವೇ ದಿನಗಳಲ್ಲಿ ದೇಶದಲ್ಲಿ ಸಂಚಲನ ಮೂಡಿಸಿದ್ದರು ಪ್ರಶಾಂತ್ ಕಿಶೋರ್.

modi prashanth kishore

2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸಿದ ನಂತರ ಪ್ರಶಾಂತ್ ಕಿಶೋರ್ ಪ್ರಚಾರಕ್ಕೆ ಬಂದರೂ 2011ರಲ್ಲೇ ಅವರು ಮೋದಿ ತಂಡದಲ್ಲಿ ಗುರುತಿಸಿಕೊಂಡಿದ್ದರು. 2012ರ ಗುಜರಾತ್ ಚುನಾವಣೆ ಮೋದಿ ಪಾಲಿಗೆ ಮಹತ್ವದಾಗಿತ್ತು. ಯಾಕೆಂದರೆ ಹ್ಯಾಟ್ರಿಕ್ ಜಯಗಳಿಸಿದರೆ ‘ದೆಹಲಿಯ ಸಿಂಹಾಸನಕ್ಕೆ ರಾಜಮಾರ್ಗ ತೆರೆದಂತೆ‘ ಎನ್ನುವ ವಿಶ್ಲೇಷಣೆ ಮೊದಲೇ ಕೇಳಿಬಂದಿತ್ತು. ಹೀಗಾಗಿ ಈ ಚುನಾವಣೆಯನ್ನು ಗೆಲ್ಲಲೇಬೇಕೆಂದು ಪಣ ತೊಟ್ಟಿದ್ದ ಮೋದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಮತ್ತಷ್ಟು ಪ್ರಚಾರಗೊಳಿಸಿದ ವ್ಯಕ್ತಿಯೇ ಪ್ರಶಾಂತ್ ಕಿಶೋರ್.

2009-2012 ಭಾರತದಲ್ಲಿ ಸಾಮಾಜಿಕ ಜಾಲತಾಣಗಳು ಅಷ್ಟೇನು ಪ್ರಚಾರದಲ್ಲಿ ಇರಲಿಲ್ಲ. ಯುವಜನತೆ ಸಾಮಾಜಿಕ ಜಾಲತಾಣಕ್ಕೆ ಪ್ರವೇಶ ನೀಡುತ್ತಿದ್ದ ಕಾಲವದು. ಮೊದಲ ಮತದಾನ ಮಾಡಲಿರುವ ಯುವ ಜನತೆ ಪ್ರಚಲಿತ ವಿದ್ಯಮಾನದತ್ತ ಆಸಕ್ತಿ ಹೊರಳಿಸುವುದು ಕಡಿಮೆಯೇ. ಈ ನಿಟ್ಟಿನಲ್ಲಿ ಇವರನ್ನೇ ಟಾರ್ಗೆಟ್ ಮಾಡಿದ್ದ ಪ್ರಶಾಂತ್ ಕಿಶೋರ್ ತಂಡ ಗುರಿಮುಟ್ಟುವಲ್ಲಿ ಸಫಲವಾಯ್ತು, ಮೋದಿ ಮೂರನೇ ಬಾರಿ ಸಿಎಂ ಪಟ್ಟವನ್ನು ಅಲಂಕರಿಸಿದರು.

prashanth kishore 8

ಮೋದಿ ಸಿಎಂ ಆದ ಬಳಿಕವೂ ಪ್ರಶಾಂತ್ ಕಿಶೋರ್ ಹೆಚ್ಚು ಸುದ್ದಿಯಾಗಲಿಲ್ಲ. ಬಿಜೆಪಿ ಪರ ತಂತ್ರಗಾರಿಕೆ ಹೆಣೆಯುತ್ತಿದ್ದ ಪ್ರಶಾಂತ್ ಕಿಶೋರ್ ಸುದ್ದಿಯಾಗಲು ಕಾರಣವಾಗಿದ್ದು ಲೋಕಸಭಾ ಚುನಾವಣೆಯಲ್ಲಿ ಮಣಿಶಂಕರ್ ಅಯ್ಯರ್ ಅವರ ವಿವಾದಾತ್ಮಕ ಹೇಳಿಕೆ. ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ “ಚಹಾ ಮಾರುವ ವ್ಯಕ್ತಿಯ ಕೈಗೆ ದೇಶದ ಅಧಿಕಾರ ನೀಡಿದರೆ ದೇಶವನ್ನು ಮಾರುತ್ತಾನೆ” ಎಂದು ಮೋದಿಯನ್ನು ಮೂದಲಿಸಿ ಹೇಳಿಕೆ ನೀಡಿದ್ದರು. ಈ ಹೇಳಿಕೆಯ ಬಳಿಕ ದೇಶದಲ್ಲಿ ‘ಚಾಯ್‍ವಾಲಾ‘ ಪದ ವ್ಯಾಪಕ ಪ್ರಚಾರಕ್ಕೆ ಬಂತು. ಕೈ ನಾಯಕರು ಚಾಯ್‍ವಾಲಾ ಎಂದು ವ್ಯಂಗ್ಯಮಾಡಿದರೆ ಬಿಜೆಪಿಯವರು ಚಹಾ ಮಾರುವರಿಗೆ ಕಾಂಗ್ರೆಸ್ ಮಾಡುತ್ತಿರುವ ಅವಮಾನ ಎಂದಷ್ಟೇ ಹೇಳಿ ತಿರುಗೇಟು ನೀಡುತ್ತಿದ್ದರು. ಅವಮಾನ ಎಂದು ಹೇಳಿದರೂ ಅದು ಟ್ರೆಂಡ್ ಸೆಟ್ ಆಗುತ್ತಿರಲಿಲ್ಲ. ಆದರೆ ‘ಚಾಯ್‍ವಾಲಾ’ ದೇಶದಲ್ಲಿ ಭಾರೀ ಚರ್ಚೆ ಆಗತ್ತಿರುವುದನ್ನು ಕಂಡು ಯಾಕೆ ‘ಚಹಾ’ವನ್ನೂ ಚುನಾವಣೆಯ ಪ್ರಚಾರದ ವಸ್ತುವನ್ನಾಗಿ ಮಾಡಬಾರದು ಎಂದು ತೀರ್ಮಾನಿಸಿದ ಪ್ರಶಾಂತ್ ಕಿಶೋರ್ ‘ಚಾಯ್ ಪೇ ಚರ್ಚಾ’ದ ಕನಸನ್ನು ಬಿಚ್ಚಿದರು.

ಚುನಾವಣಾ ತಂತ್ರಗಾರಿಕೆಯನ್ನೇ ಪೂರ್ಣ ಪ್ರಮಾಣದ ಉದ್ಯೋಗವಾಗಿ ಸ್ವೀಕರಿಸಿರುವ ಪ್ರಶಾಂತ್ ಕಿಶೋರ್ ಮೋದಿ ಮುಂದೆ, ನಾವು ಚಹಾ ಕುಡಿಯುತ್ತಾ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರ, ವೈಫಲ್ಯವನ್ನು ಜನರಿಗೆ ತಿಳಿಸಬಾರದು ಯಾಕೆ? ಗ್ರಾಮೀಣ ಭಾಗದಲ್ಲಿ ಮತ್ತು ನಗರದಲ್ಲಿ ಚಹಾ ಸೇವನೆಗೆ ಜನ ಬಂದೇ ಬರುತ್ತಾರೆ. ಸುಲಭವಾಗಿ ಇಲ್ಲೇ ಜನ ಸಿಗುವುದರಿಂದ ಚಹಾ ಕೂಟವನ್ನು ಆಯೋಜಿಸಿ ಪ್ರಚಾರ ಮಾಡಿದರೆ ಯಶಸ್ವಿ ಆಗಬಹುದು ಎಂದು ಸಲಹೆ ನೀಡಿದರು.

ಜಾಸ್ತಿ ಹಣದ ಖರ್ಚು ಇಲ್ಲ. ಸುಲಭದಲ್ಲಿ ಜನರ ಜೊತೆ ಬೆರೆಯಬಹುದು ಎಂಬ ಈ ಸಲಹೆ ಮೋದಿ ಸೇರಿದಂತೆ ಬಿಜೆಪಿ ನಾಯಕರಿಗೆ ಇಷ್ಟವಾಯ್ತು. ಪರಿಣಾಮ ದೇಶದಲ್ಲಿ ಬಿಜೆಪಿಯಿಂದ ‘ಚಾಯ್ ಪೇ ಚರ್ಚೆ‘ ಆರಂಭಗೊಂಡಿದ್ದು ಮಾತ್ರವಲ್ಲ ಟ್ರೆಂಡ್ ಸೆಟ್ ಮಾಡಿತು. ಕಾಂಗ್ರೆಸ್ ನಾಯಕರ ಟೀಕೆಯನ್ನೇ ಸದುಪಯೋಗ ಪಡಿಸಿಕೊಂಡ ಬಿಜೆಪಿಯ ಈ ಪ್ರಚಾರ ತಂತ್ರ ದೇಶದ ಹಳ್ಳಿ ಹಳ್ಳಿಯನ್ನು ಮುಟ್ಟಿತು. ಇದರ ಜೊತೆಗೆ ಸಾಮಾಜಿಕ ಜಾಲತಾಣದಲ್ಲೂ ಯಾರು ಮಾಡದ ರೀತಿಯಲ್ಲಿ ಹೆಣೆದ ಪ್ರಚಾರ ತಂತ್ರ ಯಶಸ್ವಿಯಾದ ಪರಿಣಾಮ ಬಿಜೆಪಿ ಏಕಾಂಗಿಯಾಗಿ 282 ಸ್ಥಾನಗಳನ್ನು ಗೆದ್ದು ಮೋದಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದರು.

chai pe charcha bjp modi e1580884594109

ಅಮೆರಿಕ ಸೇರಿದಂತೆ ವಿದೇಶಗಳ ಚುನಾವಣೆಯಲ್ಲಿ ಸಾಮಾಜಿಕ ಜಾಲತಾಣಗಳು ಮತದಾರರ ಮೇಲೆ ಪ್ರಭಾವ ಬೀರಿದ್ದರೂ ಭಾರತದಲ್ಲಿನ ವಿವಿಧ ಭಾಷೆ, ಧರ್ಮ, ರಾಜ್ಯಗಳ ರಾಜಕಾರಣದಿಂದಾಗಿ ಪ್ರಭಾವ ಬೀರಲಾರದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಈ ನಿರೀಕ್ಷೆಯನ್ನು 2014ರ ಚುನಾವಣೆ ಉಲ್ಟಾ ಮಾಡಿ ಸಾಮಾಜಿಕ ಜಾಲತಾಣವೂ ಭವಿಷ್ಯದ ಪ್ರಭಾವಿ ಚುನಾವಣಾ ಅಸ್ತ್ರ ಎನ್ನುವುದು ಸಾಬೀತು ಮಾಡಿತು. ಮೋದಿ ಜಯದ ಹಿಂದೆ ಸಾಮಾಜಿಕ ಜಾಲತಾಣವೂ ಒಂದು ಕಾರಣ ಎನ್ನುವ ವಿಚಾರದ ಚರ್ಚೆಯ ಜೊತೆ ಪ್ರಶಾಂತ್ ಕಿಶೋರ್ ತಂತ್ರಗಾರಿಕೆಯ ಬಗ್ಗೆ ವರದಿಯಾದವು.

ಅಲ್ಲಿಯವರೆಗೆ ಬಿಜೆಪಿ ತಂಡದಲ್ಲಿ ಮಾತ್ರ ಗುರುತಿಸಿಕೊಂಡಿದ್ದ ಪ್ರಶಾಂತ್ ಕಿಶೋರ್ ತನಗೆ ಸಿಕ್ಕ ಪ್ರಚಾರದಿಂದಾಗಿ ರಾಷ್ಟ್ರಮಟ್ಟದಲ್ಲಿ ಪ್ರಸಿದ್ಧಿ ಪಡೆದರು. ಈ ಪ್ರಸಿದ್ಧಿ ಉತ್ತಂಗದಲ್ಲಿರುವಾಗಲೇ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದ ಉಸ್ತುವಾರಿ ಹೊತ್ತು ಯಾರೂ ನಿರೀಕ್ಷೆ ಮಾಡದ ರೀತಿಯಲ್ಲಿ 80ರ ಪೈಕಿ 72 ಸ್ಥಾನಗಳನ್ನು ಗೆಲ್ಲಿಸಿಕೊಟ್ಟ ಅಮಿತ್ ಶಾ ಬಿಜೆಪಿ ರಾಷ್ಟ್ರಾಧ್ಯಕ್ಷರಾದ ಬಳಿಕ ಇಬ್ಬರ ನಡುವೆ ಭಿನ್ನಾಭಿಪ್ರಾಯ ಬಂತು. ಭಿನ್ನಾಭಿಪ್ರಾಯ ಜೋರಾದ ಹಿನ್ನೆಲೆಯಲ್ಲಿ ಪ್ರಶಾಂತ್ ಕಿಶೋರ್ ಬಿಜೆಪಿಯನ್ನು ಬಿಟ್ಟು ಬಿಹಾರದಲ್ಲಿ ‘ಮಹಾಘಟಬಂಧನ್’ ಪರ ಪ್ರಚಾರದಲ್ಲಿ ತೊಡಗಿದರು.

Prashant Kishore JDU

ಜೆಡಿಯು, ಆರ್‌ಜೆಡಿ, ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟ ಬಿಜೆಪಿಯನ್ನು ಸೋಲಿಸಿ ಅಧಿಕಾರಕ್ಕೆ ಏರಿದ ಬಳಿಕ ಮತ್ತೆ ಪ್ರಶಾಂತ್ ಕಿಶೋರ್ ಕಾರ್ಯವೈಖರಿ ಮುನ್ನೆಲೆಗೆ ಬಂತು. ಮಹಾಘಟಬಂಧನ್ ಮೈತ್ರಿ ಬಲಿಷ್ಠವಾಗಿದ್ದರಿಂದ ಬಿಜೆಪಿಗೆ ಸೋಲಾಯ್ತು ಎನ್ನುವ ಮಾತು ಕೇಳಿ ಬಂದಿದ್ದರೂ ಪ್ರಶಾಂತ್ ಕಿಶೋರ್ ಪ್ರಚಾರದ ತಂತ್ರಗಾರಿಕೆ ಮೈತ್ರಿಗೆ ನೆರವಾಗಿದ್ದು ಸುಳ್ಳಲ್ಲ.

ರಾಜಕೀಯ ನಾಯಕರು ಪಕ್ಷ ಸಂಘಟನೆ ಮಾಡಿ ಪ್ರಚಾರ ನಡೆಸುವುದು ಬೇರೆ ಕಾರ್ಪೋರೇಟ್ ಕಂಪನಿಗಳು ರಾಜಕೀಯ ಪಕ್ಷದ ಪರವಾಗಿ ಕೆಲಸ ಮಾಡುವುದು ಬೇರೆ. ರಾಜಕೀಯ ನಾಯಕರಿಗೆ ಪಕ್ಷ ನಿಷ್ಠೆ ಮುಖ್ಯವಾಗಿದ್ದರೆ ಚುನಾವಣಾ ತಂತ್ರಗಾರಿಕೆ ಹೆಣೆಯುವ ಕಂಪನಿಗಳಿಗೆ ನೀಡಿದ್ದ ಗುರಿಯನ್ನು ತಲುಪುವುದೇ ಮುಖ್ಯವಾಗುತ್ತದೆ. ಇಲ್ಲಿ ಯಾವುದೇ ತತ್ವ ಸಿದ್ಧಾಂತಗಳಿಗೆ ಬೆಲೆ ಇಲ್ಲ. ಹೀಗಾಗಿ ಇಲ್ಲಿ ಒಂದು ನಿರ್ಧಿಷ್ಟ ಅವಧಿಯ ‘ಡೀಲ್’ ಗಳಿಗೆ ಮಾತ್ರ ಬೆಲೆ. ಈ ಕಾರಣಕ್ಕೆ 2016ರಲ್ಲಿ ಕಾಂಗ್ರೆಸ್ ‘ಚುನಾವಣೆಯಲ್ಲಿ ಮತದಾರರನ್ನು ಗೆಲ್ಲುವ ಕುದುರೆ’ ಎಂದು ಬಿಂಬಿತವಾಗಿದ್ದ ಪ್ರಶಾಂತ್ ಕಿಶೋರ್ ಅವರಿಗೆ ಉತ್ತರ ಪ್ರದೇಶದ ಚುನಾವಣೆಯ ಉಸ್ತುವಾರಿಯನ್ನು ನೀಡಿತು.

ಪ್ರಶಾಂತ್ ಕಿಶೋರ್ ಅವರನ್ನು ನೇಮಿಸಿದ್ದಕ್ಕೆ ಆರಂಭದಲ್ಲೇ ಪಕ್ಷದ ಹಿರಿಯ ನಾಯಕರು ಅಪಸ್ವರ ಎತ್ತಿದ್ದರು. ನಮ್ಮ ಮಾತಿಗೆ ಬೆಲೆ ನೀಡದೇ ಪ್ರಶಾಂತ್ ಕಿಶೋರ್ ಮಾತಿಗೆ ಹೈಕಮಾಂಡ್ ಬೆಲೆ ನೀಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಹಿರಿಯ ನಾಯಕರೇ ಅಸಮಾಧಾನ ಹೊರ ಹಾಕಿದ್ದರೂ ಎಸ್‍ಪಿ, ಕಾಂಗ್ರೆಸ್ ಮೈತ್ರಿಕೂಟ ಅಧಿಕಾರಕ್ಕೆ ಬರಲು ಪ್ರಶಾಂತ್ ಕಿಶೋರ್ ಸಾಕಷ್ಟು ಕಸರತ್ತು ನಡೆಸಿದ್ದರು. ಆದರೆ ಮೋದಿ ಅಲೆಯಲ್ಲಿ ಎಸ್‍ಪಿ ಮತ್ತು ಕಾಂಗ್ರೆಸ್ ಕೊಚ್ಚಿಕೊಂಡು ಹೋಗಿತ್ತು. ಈ ಮೂಲಕ ಎರಡು ಚುನಾವಣೆಯಲ್ಲಿ ಯಶಸ್ವಿಯಾಗಿದ್ದ ಪ್ರಶಾಂತ್ ಕಿಶೋರ್ ಅವರಿಗೆ ಮೂರನೇ ಚುನಾವಣೆಯಲ್ಲಿ ಸೋಲಾಗಿತ್ತು. ಮೇಲ್ವರ್ಗದ ಮತಗಳನ್ನು ಸೆಳೆಯುವ ಉದ್ದೇಶ ಮತ್ತು ಕಾಂಗ್ರೆಸ್ ಯಾವಾಗಲೂ ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳ ಪಕ್ಷ ಎನ್ನುವ ಕಲ್ಪನೆಯಿಂದ ಹೊರಬರಲು ಪ್ರಶಾಂತ್ ಕಿಶೋರ್ ಅವರು ಈ ಬಾರಿ ಬ್ರಾಹ್ಮಣ ಸಮುದಾಯ ವ್ಯಕ್ತಿಯನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಕಣಕ್ಕೆ ಇಳಿಸಬೇಕೆಂದು ಸಲಹೆ ನೀಡಿದ್ದರು. ಈ ಸಲಹೆಗೆ ಕಾಂಗ್ರೆಸ್ ವಲಯದಲ್ಲಿ ವಿರೋಧ ವ್ಯಕ್ತವಾಗಿತ್ತು.

prashanth kishore

ಇದಾದ ನಂತರ 2017ರ ಪಂಜಾಬ್ ವಿಧಾನಸಭಾ ಚುನಾವಣೆ ವೇಳೆ ಪ್ರಶಾಂತ್ ಕಿಶೋರ್ ತಂಡ ಕಾಂಗ್ರೆಸ್‍ನೊಂದಿಗೆ ಕೈಜೋಡಿಸಿತ್ತು. ಆಗಲೂ ಕ್ಯಾಪ್ಟನ್ ಅಮರೀಂದರ್ ಸಿಂಗ್ ಎದುರಾಳಿಯನ್ನ ಮಣಿಸಿ ಅಧಿಕಾರ ಹಿಡಿದರು. ಲೋಕಸಭಾ ಚುನಾವಣೆಯ ಬಳಿಕ ಸತತ ಸೋಲು ಕಂಡಿದ್ದ ಕಾಂಗ್ರೆಸ್‍ಗೆ ಈ ಗೆಲುವು ಸಮಾಧಾನ ತಂದುಕೊಟ್ಟಿತ್ತು.

ಪ್ರಶಾಂತ್ ಕಿಶೋರ್ ತಂತ್ರಗಾರಿಕೆ ಫಲ ಕೊಡುತ್ತಿದ್ದಂತೆ ಆಂಧ್ರಪ್ರದೇಶದ ಹಾಲಿ ಸಿಎಂ ವೈ.ಎಸ್.ಜಗನ್‍ಮೋಹನ್ ರೆಡ್ಡಿ ಅವರು ಮೇ 2017ರಲ್ಲಿ ವಿಶೇಷ ಸಲಹೆಗಾರನ್ನಾಗಿ ನೇಮಿಸಿದರು. ತೆಲುಗು ದೇಶಂ ಪಾರ್ಟಿ (ಟಿಡಿಪಿ) ನಾಯಕ ಚಂದ್ರಬಾಬು ನಾಯ್ಡು ಅವರು ತಾಂತ್ರಿಕ ಪರಿಣಿತರು. ಅದರಿಂದಲೇ ಮತದಾರರನ್ನು ತಮ್ಮತ್ತ ಸೆಳೆಯುವ ಕಾರ್ಯತಂತ್ರವನ್ನು ರೂಪಿಸುವಲ್ಲಿ ನಿಸ್ಸೀಮರು. ಈ ಕಾರ್ಯತಂತ್ರಕ್ಕೆ ತಿರುಗೇಟು ನೀಡಲು ವೈ.ಎಸ್.ಜಗನ್ ಅವರು ಪ್ರಶಾಂತ್ ಕಿಶೋರ್ ಅವರನ್ನು ಆರಿಸಿಕೊಂಡಿದ್ದರು.

ವೈ.ಎಸ್. ಜಗನ್‍ಮೋಹನ್ ರೆಡ್ಡಿ ಅವರು ಮಾರ್ಚ್ 2011ರಲ್ಲಿ ವೈಎಸ್‍ಆರ್ ಕಾಂಗ್ರೆಸ್ ಪಕ್ಷವನ್ನು ಸ್ಥಾಪಿಸಿದ್ದರೂ ಕಳೆದ ಎಂಟು ವರ್ಷಗಳಿಂದ ಎಷ್ಟೇ ಪರಿಶ್ರಮ ಪಟ್ಟಿದ್ದರೂ ಬಹುಮತ ಪಡೆಯಲು ಸಾಧ್ಯವಾಗಿರಲಿಲ್ಲ. ಆದರೆ 2019 ಚುನಾವಣೆಯಲ್ಲಿ ಪ್ರಶಾಂತ್ ಕಿಶೋರ್ ಹಾಗೂ ಅವರ ಭಾರತೀಯ ರಾಜಕೀಯ ಕಾರ್ಯ ಸಮಿತಿ (ಐಪಿಸಿ) ತಂಡದ ತಂತ್ರಗಾರಿಕೆಯಿಂದ ವೈ.ಎಸ್.ಜಗನ್ ಮೋಹನ್ ರೆಡ್ಡಿ ಅವರು ಜಯಶಾಲಿಯಾಗಿದ್ದರು.

prashanth kishore 5

ವಿಧಾನಸಭಾ ಚುನಾವಣಾ ಪ್ರಚಾರದ ಹಿನ್ನಲೆಯಲ್ಲಿ ಸಿದ್ಧಪಡಿಸಿದ ರಾವಾಲಿ ಜಗನ್ (ಜಗನ್ ಬರಬೇಕು), ಕಾವಾಲಿ ಜಗನ್ (ಜಗನ್ ಬೇಕು) ಹಾಡು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಯೂಟ್ಯೂಬ್‍ನಲ್ಲಿ ಈ ಹಾಡು ಬರೊಬ್ಬರಿ 2.2 ಕೋಟಿಗೂ ಅಧಿಕ ವೀಕ್ಷಣೆಯಾಗಿತ್ತು. ಅಷ್ಟೇ ಅಲ್ಲದೆ ಸಾಮಾಜಿಕ ಜಾಲತಾಣವನ್ನು ಜಗನ್‍ಮೋಹನ್ ಅವರು ಸಮರ್ಪಕವಾಗಿ ಬಳಸಿಕೊಂಡರು. ಈ ಮೂಲಕ ಯುವಕರ ಗಮನವನ್ನು ಸೆಳೆದು ಭರ್ಜರಿ ಗೆಲುವು ಸಾಧಿಸಿದರು. ಜಗನ್‍ಮೋಹನ್ ಅವರ ಈ ಎಲ್ಲ ಯಶಸ್ವಿ ಪ್ರಚಾರದ ಹಿಂದೆ ಪ್ರಶಾಂತ್ ಕಿಶೋರ್ ಅವರ ತಂತ್ರಗಾರಿಕೆ ಅಡಗಿತ್ತು.

ವಿವಿಧ ರಾಜಕೀಯ ಪಕ್ಷಗಳ ಪರವಾಗಿ ಕೆಲಸ ಮಾಡುತ್ತಿದ್ದ ಪ್ರಶಾಂತ್ ಕಿಶೋರ್ ನಾನು ರಾಜಕೀಯ ಸೇರುವುದಿಲ್ಲ ಎಂದು ಹಿಂದೆ ಹೇಳಿದ್ದರು. ಇಂಡಿಯನ್ ಸ್ಕೂಲ್ ಆಫ್ ಬಿಸಿನೆಸ್(ಐಎಸ್‍ಬಿ) ವಿದ್ಯಾರ್ಥಿಗಳ ಜೊತೆಗಿನ ಸಂವಾದದ ವೇಳೆ, 2 ವರ್ಷಗಳ ಹಿಂದೆ ನಾನು ಈ ಕ್ಷೇತ್ರವನ್ನು ತೊರೆಯಬೇಕೆಂದುಕೊಂಡಿದ್ದೇನೆ. ತೊರೆಯುವ ಮುನ್ನ ನನ್ನ ಐಪ್ಯಾಕ್ ಸಂಸ್ಥೆಯನ್ನು ಒಬ್ಬರ ಕೈಗೆ ನೀಡುವ ಜವಾಬ್ದಾರಿ ಇದೆ. ನಾನು ಯಾವುದೇ ರಾಜಕೀಯ ಪಕ್ಷಕ್ಕೆ ಸೇರ್ಪಡೆಯಾಗುವುದಿಲ್ಲ. ಗುಜರಾತ್ ಅಥವಾ ಬಿಹಾರಕ್ಕೆ ನಾನು ಹೋಗಿ ಕೆಲಸ ಮಾಡುತ್ತೇನೆ. ಪ್ರಧಾನಿ ಮೋದಿ ಬಿಜೆಪಿ ಪರ ಕೆಲಸ ಮಾಡುವಂತೆ ಹೇಳಿದ್ದಾರೆ. ಆದರೆ ನಾನು ಇದೂವರೆಗೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದಿದ್ದರು.

prashanth kishore 2

ಕಾಂಗ್ರೆಸ್, ರಾಹುಲ್ ಗಾಂಧಿ ಜೊತೆಗಿನ ಸಂಬಂಧದ ಬಗ್ಗೆ ಕೇಳಲಾದ ಪ್ರಶ್ನೆಗೆ, ನಾನು ಮತ್ತು ರಾಹುಲ್ ಸ್ನೇಹಿತರು. ರಾಹುಲ್ ಗಾಂಧಿ ಅವರಿಗೆ ಅವರದ್ದೇ ಆದ ಕಲ್ಪನೆ ಮತ್ತು ದೃಷ್ಟಿಗಳಿವೆ. ಆದರೆ ಈ ಕಲ್ಪನೆಗಳು ನನಗೆ ಮನವರಿಕೆಯಾಗದ ಹಿನ್ನೆಲೆಯಲ್ಲಿ ನಾನು ಅವರ ಜೊತೆ ಕೆಲಸ ಮಾಡುತ್ತಿಲ್ಲ ಎಂದು ಉತ್ತರಿಸಿದ್ದರು. ವಿದ್ಯಾರ್ಥಿಗಳ ಜೊತೆ ನಾನು ರಾಜಕೀಯ ಸೇರುವುದಿಲ್ಲ ಎಂದಿದ್ದ ಪ್ರಶಾಂತ್ ಕಿಶೋರ್ ಅಚ್ಚರಿಯ ಬೆಳವಣಿಗೆಯಲ್ಲಿ 2018ರಲ್ಲಿ ಜೆಡಿಯು ಸೇರಿದ್ದರು. ನಿತೀಶ್ ಕುಮಾರ್ ಅವರು ಪ್ರಶಾಂತ್ ಕಿಶೋರ್ ಅವರಿಗೆ ರಾಷ್ಟ್ರೀಯ ಉಪಾಧ್ಯಕ್ಷ ಸ್ಥಾನವನ್ನು ಕಲ್ಪಿಸಿದ್ದರು.

ಖಾಸಗಿ ವಾಹಿನಿಯ ಕಾರ್ಯಕ್ರಮದಲ್ಲಿ ಮಾತನಾಡಿದ್ದ ನಿತೀಶ್ ಕುಮಾರ್, ಪ್ರಶಾಂತ್ ಕಿಶೋರ್ ನನಗೆ ಹೊಸ ಮುಖ ಏನು ಅಲ್ಲ. 2015ರಲ್ಲಿ ಅವರು ನಮ್ಮ ಜೊತೆ ಕೆಲಸ ಮಾಡಿದ್ದರು. ಪ್ರಶಾಂತ್ ಕಿಶೋರ್ ಜೆಡಿಯು ಸೇರುವಂತೆ ಹೇಳಿದ್ದು ಬೇರೆ ಯಾರೂ ಅಲ್ಲ. ಅಮಿತ್ ಶಾ ಎರಡು ಬಾರಿ ನನ್ನ ಜೊತೆ ಮಾತನಾಡಿ ಪ್ರಶಾಂತ್ ಕಿಶೋರ್ ಅವರನ್ನು ಜೆಡಿಯುಗೆ ಸೇರಿಸಿಕೊಳ್ಳಿ ಎಂದು ಸಲಹೆ ನೀಡಿದ್ದರು ಎಂದು ತಿಳಿಸಿದ್ದರು. ಈ ವೇಳೆ ಪ್ರಶಾಂತ್ ಕಿಶೋರ್ ಅವರನ್ನು ಚುನಾವಣಾ ತಂತ್ರಗಾರನನ್ನಾಗಿ ಮಾತ್ರ ನೇಮಿಸಿದ್ದೋ ಅಥವಾ ಭವಿಷ್ಯದ ಜೆಡಿಯು ಉತ್ತಾರಾಧಿಕಾರಿಯನ್ನಾಗಿ ಮಾಡಲು ನೇಮಿಸಲಾಗಿದೆಯೋ ಎನ್ನುವ ಪ್ರಶ್ನೆಯನ್ನು ಕೇಳಲಾಯಿತು. ಇದಕ್ಕೆ ಯಾವುದೇ ರಾಜಕೀಯ ಕುಟುಂಬದಿಂದ ಜನಿಸದೇ ಇದ್ದರೂ ಪಕ್ಷವನ್ನು ಸಾಮಾಜಿಕ ಜಾಲತಾಣದ ಮೂಲಕ ಹೇಗೆ ಸಂಘಟಿಸಬೇಕು ಎನ್ನುವ ನೈಪುಣ್ಯತೆಯನ್ನು ಪ್ರಶಾಂತ್ ಕಿಶೋರ್ ಹೊಂದಿದ್ದಾರೆ. ಅವರ ಕೆಲಸದ ಬಗ್ಗೆ ನನಗೆ ಬಹಳ ಪ್ರೀತಿಯಿದೆ. ಈಗ ನನ್ನ ಉತ್ತರಾಧಿಕಾರಿ ವಿಚಾರದ ಬಗ್ಗೆ ಮಾತನಾಡುವುದು ಬೇಡ. ಇಲ್ಲಿ ರಾಜಪ್ರಭುತ್ವ ಇಲ್ಲ ಎಂದು ಸ್ಪಷ್ಟಪಡಿಸಿದ್ದರು.

prashanth kishore 3

ಇಲ್ಲಿಯವರೆಗೆ ನಿತೀಶ್ ಕುಮಾರ್ ಮತ್ತು ಪ್ರಶಾಂತ್ ಕಿಶೋರ್ ಉತ್ತಮ ಸಂಬಂಧ ಹೊಂದಿದ್ದರು. ಆದರೆ ಸಿಎಎ ವಿಚಾರದಲ್ಲಿ ಕಾಂಗ್ರೆಸ್ ನಾಯಕರು ಮತ್ತು ಎಡಪಕ್ಷಗಳ ನಿಲುವುಗಳನ್ನು ಶ್ಲಾಘಿಸಿ ಹೊಗಳಲು ಆರಂಭಿಸಿದ್ದಾರೋ ಇಲ್ಲಿಂದ ಜೆಡಿಯು ಜೊತೆಗಿನ ಸಂಬಂಧ ಹಾಳಾಗಲು ಆರಂಭವಾಯಿತು. ಬಿಹಾರದಲ್ಲಿ ಜೆಡಿಯು ಬಿಜೆಪಿ ಮೈತ್ರಿ ಇದ್ದರೂ ಪ್ರಶಾಂತ್ ಕಿಶೋರ್ ಕೇಂದ್ರ ಸರ್ಕಾರವನ್ನು ಟೀಕಿಸುತ್ತಿದ್ದದ್ದು ಚರ್ಚೆಗೆ ಗ್ರಾಸವಾಗುತಿತ್ತು. ಇಬ್ಬರ ತಿಕ್ಕಾಟ ಜೋರಾಗುತ್ತಿದ್ದಂತೆ ಪ್ರಶಾಂತ್ ಕಿಶೋರ್ ಅವರನ್ನು ನಿತೀಶ್ ಕುಮಾರ್ ಉಚ್ಚಾಟಿಸಿ ಮಾತಿನ ಕದನಕ್ಕೆ ಈಗ ಪೂರ್ಣ ವಿರಾಮ ಹಾಕಿದ್ದಾರೆ.

ಕಂಪನಿಗಳಲ್ಲಿ ಉದ್ಯೋಗಿಗಳು ಆಫರ್ ಬರುತ್ತಿದ್ದಂತೆ ಬೇರೆ ಕಂಪನಿಗಳಿಗೆ ಹೋಗುವುದು ಸಾಮಾನ್ಯ. ಅದೇ ರೀತಿಯಾಗಿ ಪ್ರಶಾಂತ್ ಕಿಶೋರ್ ಮುಂದೆ ನಡೆಯಲಿರುವ ದೆಹಲಿ ಚುನಾವಣೆಯಲ್ಲಿ ಆಪ್ ಪರ ಕೆಲಸ ಮಾಡಲಿದ್ದು ಮುಂದೆ ಪಶ್ಚಿಮ ಬಂಗಾಳದಲ್ಲಿ ಮಮತಾ ಪರ ಪ್ರಚಾರ ನಡೆಸಲಿದ್ದಾರೆ. ಇದರ ಜೊತೆಯಲ್ಲಿ 2021ರ ತಮಿಳುನಾಡು ಚುನಾವಣೆಯಲ್ಲಿ ಡಿಎಂಕೆ ಪರ ಪ್ರಶಾಂತ್ ಕಿಶೋರ್ ಕೆಲಸ ಮಾಡಲಿದ್ದಾರೆ.

ಒಂದಂತು ಸತ್ಯ ಒಂದು ಕಂಪನಿ ಗಟ್ಟಿಯಾಗಿ ನೆಲೆ ಉರಿದ ಮೇಲೆ ಉದ್ಯೋಗಿಗಳು ಬಿಟ್ಟು ಹೋದರೂ ಯಾವುದೇ ಸಮಸ್ಯೆ ಇಲ್ಲ. ಅದೇ ರೀತಿ ರಾಜಕೀಯ ಪಕ್ಷಗಳಿಗೂ ಅಷ್ಟೇ ಭದ್ರವಾಗಿ ನೆಲೆ ಉರಿದ ಮೇಲೆ ಯಾರೂ ಬಂದರೂ ಹೋದರೂ ಯಾವುದೇ ಸಮಸ್ಯೆ ಇಲ್ಲ. ಪ್ರಶಾಂತ್ ಕಿಶೋರ್ ಮೂಲತಃ ಕಾರ್ಪೋರೇಟ್ ವಲಯದ ವ್ಯಕ್ತಿ. ತಂತ್ರಗಾರಿಕೆಯ ಮೂಲಕ ಜನರನ್ನು ಸೆಳೆಯಬಹುದೇ ವಿನಾ: ರಾಜಕೀಯ ನಾಯಕರಂತೆ ಭಾಷಣ, ಅಧಿಕಾರದ ಮೂಲಕ ಜನರ ಹತ್ತಿರ ಪ್ರಶಾಂತ್ ಕಿಶೋರ್ ತಲುಪಿಲ್ಲ. ಹೀಗಾಗಿ ಜೆಡಿಯುನಲ್ಲಿ ಇಲ್ಲದೇ ಇದ್ದರೂ ಪಕ್ಷಕ್ಕೆ ಏನು ನಷ್ಟವಾಗಲಾರದು ಎನ್ನುವ ವಿಶ್ಲೇಷಣೆ ಕೇಳಿ ಬಂದಿದೆ.

ರಾಜಕೀಯದಲ್ಲಿ ಒಂದು ಮಾತಿದೆ. ಹೊರಗಿನ ವಿರೋಧಿಗಳು ಸಮಸ್ಯೆಯೇ ಯಾವಾಗಲೂ ಅಲ್ಲ. ಆದರೆ ಒಳಗಿನ ಹಿತ ಶತ್ರುಗಳೇ ದೊಡ್ಡ ಸಮಸ್ಯೆ. ಹಿತ ಶತ್ರುಗಳನ್ನು ಹೊರಗೆ ಹಾಕಿದರೆ ಸಮಸ್ಯೆ ನಿವಾರಣೆ ಆದಂತೆ. ಈಗ ಅದೇ ಕೆಲಸವನ್ನು ನಿತೀಶ್ ಕುಮಾರ್ ಮಾಡಿದ್ದಾರೆ. ಸಿಎಎ ವಿಚಾರ, ಪ್ರಶಾಂತ್ ಕಿಶೋರ್ ಉಚ್ಚಾಟನೆ ನಿರ್ಧಾರ ಸರಿಯೇ? ತಪ್ಪೇ ಎನ್ನುವ ಪ್ರಶ್ನೆಗಳಿಗೆ ಈ ವರ್ಷ ನಡೆಯಲಿರುವ ಬಿಹಾರ ಚುನಾವಣೆಯಲ್ಲಿ ಉತ್ತರ ಸಿಗಲಿದೆ.

– ಅಶ್ವಥ್ ಸಂಪಾಜೆ

Share This Article
Leave a Comment

Leave a Reply

Your email address will not be published. Required fields are marked *